ನಾಗರಾಜ್ ನ್ಯಾಮತಿ
ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ್ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರಿಗೆ ಕಾಂಗ್ರೆಸ್ ಪಕ್ಷ ಅಧಿಕೃತ ಅಭ್ಯರ್ಥಿಯೆಂದು ಘೋಷಿಸಿದೆ. ಇನ್ನು, ಭಾರತೀಯ ಜನತಾ ಪಕ್ಷದಿಂದ ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಅವರಿಗೇ ಟಿಕೆಟ್ ಸಹಜ ಎನ್ನಲಾಗಿದೆ. ಹೀಗಾಗಿ, ಲೋಕಸಭಾ ಚುನಾವಣೆಯ ಕಾಲದಲ್ಲೇ ವಿಧಾನಸಭೆ ಉಪ ಚುನಾವಣೆಯೂ ಬಂದೆರಗಿರುವುದು ಚುನಾವಣಾ ವಾತಾವರಣವನ್ನು ಮತ್ತಷ್ಟೂ ಕಾವೇರಿಸಿದೆ.
ಮತದಾರರ ಮನ-ಮನೆ ಗೆಲ್ಲಲು ನಾಯಕರ ಕಸರತ್ತು:ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮತದಾರರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ತಾವು ಮಾಡಿರುವ ಮತ್ತು ಮುಂದೆ ಮಾಡಲಿರುವ ಕನಸಿನ ಯೋಜನೆಗಳನ್ನು ಜನರ ಮುಂದೆಯಿಡುತ್ತ ಮನವೊಲಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.
ಬಿಜೆಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜೂಗೌಡರಿಗೇ ಬಿಜೆಪಿ ಟಿಕೆಟ್ ಎಂಬುದಾಗಿ ಘೋಷಿಸಿದ್ದು, ಅಧಿಕೃತ ಮುದ್ರೆ ಒತ್ತುವುದು ಬಾಕಿಯಿದ್ದು, ಭಾನುವಾರ ಹೆಸರು ಘೋಷಣೆ ಸಾಧ್ಯೆತೆಯಿದೆ ಎನ್ನಲಾಗಿದೆ. ಬಿಜೆಪಿ ನಾಯಕರು ಹುಣಸಗಿ ಮತ್ತು ಸುರಪುರದಲ್ಲಿ ಮುಖಂಡರು, ನಾಯಕರ ಸಭೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಬೂತ್ ಮಟ್ಟದ ಏಜಂಟರ್ ಸಭೆ, ಕಾರ್ಯಕರ್ತರ ಸಭೆಗಳು ಜರುಗುತ್ತಿವೆ. ಬಿಜೆಪಿ ನಾಯಕರು 15 ದಿನಗಳಿಂದ ಸಕ್ರೀಯವಾಗಿ ತೊಡಗಿಕೊಂಡು ಸಮಾರಂಭಗಳಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬಿಜೆಪಿ ಮತ್ತು ತಾವು ಮಾಡಿರುವ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.
ಉಪಚುನಾವಣೆಯನ್ನು ನಾವು ಬಯಸಿರಲಿಲ್ಲ. ಸುರಪುರ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮತದಾರರು ಯಾರು ಮರೆತಿಲ್ಲ. ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಒತ್ತಾಯದ ಮೇರೆಗೆ ಚುನಾವಣೆ ಎದುರಿಸಲಿದ್ದೇವೆ ಎಂಬುದು ಮಾಜಿ ಸಚಿವ ರಾಜೂಗೌಡರ ಅಭಿಪ್ರಾಯವಾಗಿದೆ.