ಕೆಪಿಎಸ್ಸಿ ವಿಧೇಯಕಕ್ಕೆ ವಿಧಾಸಭೆ ಅಂಗೀಕಾರ

KannadaprabhaNewsNetwork |  
Published : Mar 19, 2025, 12:32 AM IST
ಕೆಪಿಎಸ್ಸಿ | Kannada Prabha

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗದ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದ ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) (ತಿದ್ದುಪಡಿ) ವಿಧೇಯಕ 2025ಕ್ಕೆ ಅನುಮೋದನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ಕರ್ನಾಟಕ ಲೋಕಸೇವಾ ಆಯೋಗದ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದ ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) (ತಿದ್ದುಪಡಿ) ವಿಧೇಯಕ 2025ಕ್ಕೆ ಅನುಮೋದನೆ ನೀಡಲಾಯಿತು.

ಈವರೆಗೆ ಕೆಪಿಎಸ್ಸಿ ಕುರಿತು ಯಾವುದೇ ನಿಯಮ ರೂಪಿಸುವುದಕ್ಕೂ ಮುನ್ನ ಸರ್ಕಾರ ಕೆಪಿಎಸ್ಸಿ ಜತೆ ಸಮಾಲೋಚನೆ ಮಾಡಬೇಕಿತ್ತು. ಅದಕ್ಕೆ ಬದಲಾವಣೆ ತಂದು, ಕೆಪಿಎಸ್ಸಿಗೆ ನಿಯಮಾವಳಿ ರೂಪಿಸಲು ಅಥವಾ ತಿದ್ದುಪಡಿ ತರಲು ಸರ್ಕಾರ ಕೆಪಿಎಸ್ಸಿ ಜತೆಗೆ ಸಮಾಲೋಚನೆ ಅಗತ್ಯವಿಲ್ಲ ಎಂಬ ಅಂಶ ತಿದ್ದುಪಡಿ ವಿಧೇಯಕದಲ್ಲಿ ಸೇರಿಸಲಾಗಿದೆ.

ಜತೆಗೆ, ಈವರೆಗೆ ಆಯೋಗಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನದ ಪ್ರಶ್ನೆ ಬಂದರೂ ಅಧ್ಯಕ್ಷರು ಸಭೆ ನಡೆಸಿ ತೀರ್ಮಾನಿಸಬಹುದಿತ್ತು. ಕೆಪಿಎಸ್ಸಿಯಲ್ಲಿ ಸ್ವಜನಪಕ್ಷಪಾತಕ್ಕೆ ಬ್ರೇಕ್‌ ಹಾಕುವ ಉದ್ದೇಶದಿಂದ ಈ ನಿಯಮವನ್ನು ಬದಲಿಸಲಾಗಿದೆ. ಆಯೋಗದ ಸಭೆಗೆ ಅಧ್ಯಕ್ಷರನ್ನೂ ಸೇರಿಸಿ ಒಟ್ಟು ಸದಸ್ಯರ ಶೇ.50 ರಷ್ಟು ಕೋರಂ ಅಗತ್ಯ ಎಂದು ಮಾಡಲಾಗಿದೆ.

ಇನ್ನು ಸಭೆಯಲ್ಲಿ ಎಲ್ಲಾ ತೀರ್ಮಾನ ಹಾಗೂ ನಡಾವಳಿಗಳನ್ನು ಕಾರ್ಯದರ್ಶಿಗಳೇ ಖುದ್ದಾಗಿ ದಾಖಲಿಸಬೇಕು ಎಂದೂ ಉಲ್ಲೇಖಿಸಲಾಗಿದೆ. ಹಾಗೆಯೇ, ಆಯೋಗವು ನಿರ್ಣಯ ತೆಗೆದುಕೊಳ್ಳುವಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಸುತ್ತೋಲೆ ಮೂಲಕ ನಿರ್ಣಯ ತೆಗೆದುಕೊಳ್ಳುವುದನ್ನೂ ತಿದ್ದುಪಡಿ ವಿಧೇಯಕದಲ್ಲಿ ತೆಗೆದು ಹಾಕಲಾಗಿದೆ.

ಆಯೋಗವು ಸದಸ್ಯರ ಆಕ್ಷೇಪದ ಹೊರತಾಗಿಯೂ ಯಾವುದಾದರೂ ತೀರ್ಮಾನ ತೆಗೆದುಕೊಂಡರೆ ಅಂಥ ತೀರ್ಮಾನದ ಬಗ್ಗೆ ಭಿನ್ನಾಭಿಪ್ರಾಯ ನಮೂದಿಸಲು ಸದಸ್ಯರಿಗೆ ಅವಕಾಶವಿದೆ. ಯಾಕೆ ಈ ತೀರ್ಮಾನ ವಿರೋಧಿಸಲಾಗುತ್ತಿದೆ ಎಂಬ ಕಾರಣಗಳ ಸಹಿತ ತಮ್ಮ ವಿರೋಧವನ್ನು ಉಲ್ಲೇಖಿಸಬಹುದು ಎಂಬ ಅಂಶ ವಿಧೇಯಕದಲ್ಲಿ ಸೇರಿಸಲಾಗಿದೆ.

ಸಂದರ್ಶನ ನಿಯಮಾವಳಿಗೂ ತಿದ್ದುಪಡಿ ತರಲಾಗಿದ್ದು, ಈವರೆಗೆ ಆಯೋಗ ನಿಯೋಜಿಸಿದ ಇಬ್ಬರು ಅಥವಾ ಹೆಚ್ಚು ಸದಸ್ಯರು ಅಭ್ಯರ್ಥಿಗಳ ಸಂದರ್ಶನ ನಡೆಸಬಹುದಾಗಿತ್ತು. ಈ ಸಂದರ್ಶನದ ಫಲಿತಾಂಶಗಳನ್ನು ಆಯೋಗದ ಮುಂದೆ ಮಂಡಿಸಿ, ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂಬ ನಿಯಮ ಇತ್ತು. ಅದನ್ನು ಬದಲಿಸಿ ಸಂದರ್ಶನ ಮಂಡಳಿಯಲ್ಲಿ ಆಯೋಗ ನಿಯೋಜಿಸಬಹುದಾದ ಒಬ್ಬ ಸದಸ್ಯ ಮಾತ್ರ ಇರಬೇಕು. ಆದರೆ ಗೆಜೆಟೆಡ್‌ ಪ್ರೊಬೆಷನರ್ಸ್ ನೇಮಕಾತಿ ನಿಯಮದಲ್ಲಿರುವಂತೆ ಸಂದರ್ಶನ ನಡೆಸಬೇಕು ಎಂದು ಬದಲಿಸಲಾಗಿದೆ.

ಯುಪಿಎಸ್ಸಿ ರೀತಿ ನಿಯಮ ಜಾರಿಗೆ ಆಗ್ರಹ: ವಿಧೇಯಕ ಅಂಗೀಕಾರಕ್ಕೂ ಮುನ್ನ ಮಾತನಾಡಿದ ಶಾಸಕರು, ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್ಸಿ ಪರೀಕ್ಷಾ ನಿಯಮ ಜಾರಿಗೊಳಿಸಬೇಕು. ನಿಗದಿತ ಅವಧಿಯಲ್ಲಿ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸುವಂತಾಗಬೇಕು. ಜತೆಗೆ ಕೆಪಿಎಸ್ಸಿಗೆ ಅಮೂಲಾಗ್ರ ಬದಲಾವಣೆ ತರಲು ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''