ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಿಲುಕಿ ಬಳಲುವ ಸ್ಥಿತಿ

KannadaprabhaNewsNetwork |  
Published : Jul 10, 2024, 12:32 AM IST
ಭಾರತದ ಸಮಾಜವಾದಿ ಚಳುವಳಿಯಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಪಾತ್ರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕಾರ್ಪೊರೇಟ್‌ ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅವಿವೇಕಿಗಳಾಗಿ ಬೌದ್ಧಿಕ ಜ್ಞಾನವನ್ನು ಕಂಪನಿಗಳ ಹಿಡಿತಕ್ಕೆ ಕೊಟ್ಟು ಉಳುವ ಭೂಮಿಯನ್ನು ಮಾರಿ ದಿವಾಳಿಯಾಗುತ್ತಿದ್ದೇವೆ

ಕನ್ನಡಪ್ರಭ ವಾರ್ತೆ ತುಮಕೂರು

ಪ್ರೊ. ಎಂ.ಡಿ. ನಂಜುಂಡಸ್ವಾಮಿ ವಿರೋಧಿಸಿದ ಕಾರ್ಪೊರೇಟ್‌ ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅವಿವೇಕಿಗಳಾಗಿ ಬೌದ್ಧಿಕ ಜ್ಞಾನವನ್ನು ಕಂಪನಿಗಳ ಹಿಡಿತಕ್ಕೆ ಕೊಟ್ಟು ಉಳುವ ಭೂಮಿಯನ್ನು ಮಾರಿ ದಿವಾಳಿಯಾಗುತ್ತಿದ್ದೇವೆ ಎಂದು ಪ್ರಾಧ್ಯಾಪಕ ಡಾ.ಮೋಹನ್‌ ಚಂದ್ರಗುತ್ತಿ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮಂಗಳವಾರ ಆಯೋಜಿಸಿದ್ದ ‘ಭಾರತದ ಸಮಾಜವಾದಿ ಚಳವಳಿಯಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಪಾತ್ರ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರೊ.ಎಂ.ಡಿ. ನಂಜುಂಡಸ್ವಾಮಿ 60ರ ದಶಕದಲ್ಲಿ ಭೂ ಸುಧಾರಣೆ, ಸಹಕಾರಿ ಕೃಷಿ, ಜಾತಿರಹಿತ ಸಮಾಜ ನಿರ್ಮಾಣ, ಸರ್ಕಾರಿ ಉತ್ಪಾದನಾ ವ್ಯವಸ್ಥೆಗೆ ಬೆಂಬಲ- ಇಂತಹ ಸಮಾಜವಾದಿ ಪರಿಕಲ್ಪನೆಯನ್ನು ಪರಿಚಯಿಸಿದರು. ಸಮಾಜವಾದ, ಸಮತವಾದ, ಸರ್ವೋದಯ ಪರಿಕಲ್ಪನೆಯಲ್ಲಿ ಬದುಕಬೇಕೆಂದು ಹೋರಾಡಿದರು ಎಂದು ತಿಳಿಸಿದರು.

ಸಂವಿಧಾನ ಸಮಾನತೆಯನ್ನು ಕಲ್ಪಿಸಿಕೊಟ್ಟರೂ ಸಹ ಸಾಮಾಜಿಕ ವ್ಯವಸ್ಥೆ ಬಡವರನ್ನು ಅಸಮಾನತೆಯಿಂದ ನಡೆಸಿಕೊಳ್ಳುತ್ತಿದೆ. ಬಡ ರೈತನ ಕಷ್ಟಗಳನ್ನು ಗಾಳಿಗೆ ತೂರಿ, ಕಂಪನಿಯ ಅಧೀನದಲ್ಲಿರುವ ಸರ್ಕಾರಗಳು, ಐಷಾರಾಮಿ ಕೊಠಡಿಗಳಲ್ಲಿ ಕೂತು ನಿಯಮಗಳನ್ನು, ಕಾನೂನುಗಳನ್ನು ರಚಿಸುವ ಅಧಿಕಾರಶಾಹಿಗಳ ವಿರುದ್ಧ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಹೋರಾಡಿದರು ಎಂದರು.

ಪ್ರಭುತ್ವದ ವಿರುದ್ಧ ಹೋರಾಡಿ ಸಮಾನತೆಯ ಸಮಾಜವನ್ನು ನಿರ್ಮಿಸಲು ಪ್ರೊ.ಎಂ.ಡಿ. ನಂಜುಂಡಸ್ವಾಮಿ ದಶಕಗಳ ಹೋರಾಟ ನಡೆಸಿದರು. ಭವಿಷ್ಯದಲ್ಲಿ ಭೂಮಿರಹಿತ ರೈತರಾಗಿ, ಬೇರೊಂದು ದೇಶದ ಅಡಿಯಾಳಾಗಿ ದುಡಿಯುವ ಪರಿಸ್ಥಿತಿ ಬರುತ್ತದೆ ಎಂದು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಸರ್ಕಾರಗಳಿಗೆ ಎಚ್ಚರಿಕೆಯನ್ನು ನೀಡುತ್ತಲೇ ಬಂದರು. ಗ್ರಾಮ ಕೇಂದ್ರಿತವಾಗಿ ಚಿಂತಿಸಿದ ನಾಯಕರಾಗಿದ್ದ ಅವರು, ರೈತರ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಲು ಹಗಲಿರುಳು ದುಡಿದರು ಎಂದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಹಲವಾರು ರೈತರು ಸ್ವಂತ ಜಮೀನು ಮಾರಿ ಅದೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಫಸಲು ಬರುವ ಹೊಲಗಳು ಐಷಾರಾಮಿ ರೆಸಾರ್ಟ್‌ಗಳು ತಲೆಯೆತ್ತುತ್ತಿವೆ. ಪರಿಸರ, ಆಹಾರ, ನೀರು, ಮಣ್ಣು, ಮನಸ್ಸುಎಲ್ಲವೂ ಮಲಿನವಾಗಿದೆ ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್‌ ಕೆ., ವಿವಿಯಪ್ರೊ. ನಂಜುಂಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಡಾ. ಮುನಿರಾಜುಎಂ., ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ಜಯಶೀಲ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ.ರವೀಂದ್ರಕುಮಾರ್ ಬಿ. ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!