ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಮುಕ್ತ, ಪಾರದರ್ಶಕ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಅಗತ್ಯವಿರುವ ಸಿಬ್ಬಂದಿ ನಿಯೋಜನೆ ಕುರಿತು ರ‍್ಯಾಂಡಮೈಸೇಷನ್ ಕಾರ್ಯ ಶನಿವಾರ ನಡೆದಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯದ ಆದೇಶ ಪತ್ರಗಳನ್ನು ಸ್ವೀಕರಿಸಿ, ಚುನಾವಣಾ ಕರ್ತವ್ಯಕ್ಕೆ ತಪ್ಪದೇ ಹಾಜರಾಗುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಚುನವಣಾ ಕರ್ತವ್ಯಕ್ಕೆ ಸಿಬ್ಬಂದಿ ನಿಯೋಜನೆಯ ರ‍್ಯಾಂಡಮೈಸೇಷನ್ ನಡೆಸಿ ಮಾತನಾಡಿದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ವ್ಯಾಪ್ತಿಯಲ್ಲಿ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಿದ್ದು, ರ‍್ಯಾಂಡಮೈಸೇಷನ್ ಮೂಲಕ ಸಂಬಂಧಪಟ್ಟ ಮತಗಟ್ಟೆಗಳ ಕರ್ತವ್ಯಕ್ಕೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಈ ಕುರಿತು ಆದೇಶ ಪತ್ರಗಳನ್ನು ಸಂಬಂಧಪಟ್ಟ ತಹಸೀಲ್ದಾರ್ ಕಚೇರಿ ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಮೂಲಕ ಎಲ್ಲ ಸಿಬ್ಬಂದಿಗೆ ತಲುಪಿಸಲಾಗುವುದು ಎಂದರು.ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿರುವ ಎಲ್ಲ ಸಿಬ್ಬಂದಿ ಮೊದಲ ಹಂತದಲ್ಲಿ ಅವರು ಕರ್ತವ್ಯ ನಿರ್ವಹಿಸುವ ತಾಲೂಕುಗಳಲ್ಲಿ ಏ. 16ರಂದು ತರಬೇತಿ ಆಯೋಜಿಸಲಾಗಿದ್ದು, ತರಬೇತಿ ಸಮಯದಲ್ಲಿ ಸಿಬ್ಬಂದಿಗೆ ಇ.ವಿ.ಎಂ. ಮತ್ತು ವಿವಿ ಪ್ಯಾಟ್‌ಗಳ ಬಳಕೆ ಸೇರಿದಂತೆ ಎಲ್ಲ ರೀತಿಯ ಸಮಗ್ರ ತರಬೇತಿಯ ಜತೆಗೆ ಅಂಚೆ ಮತದಾನ ಮಾಡಲು ಅಗತ್ಯವಿರುವ ಫಾರಂಗಳ ವಿತರಣೆ ಕೂಡಾ ಮಾಡಲಾಗುವುದು ಎಂದರು.
ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವ ಎಲ್ಲ ಸಿಬ್ಬಂದಿ ತಮ್ಮ ಆದೇಶಪತ್ರಗಳನ್ನು ಸ್ವೀಕರಿಸಿ, ಕಡ್ಡಾಯವಾಗಿ ತರಬೇತಿಯಲ್ಲಿ ಭಾಗವಹಿಸಬೇಕು. ಈ ಕುರಿತಂತೆ ನಿರ್ಲಕ್ಷ್ಯ ವಹಿಸುವ ಸಿಬ್ಬಂದಿ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.