ಕನ್ನಡಪ್ರಭ ವಾರ್ತೆ ಮೈಸೂರು
ಗ್ರಾಮೀಣ ಪ್ರದೇಶದ ಆರ್ಥಿಕ ಹಿಂದುಳಿದ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜಾರಿಗೆ ತಂದ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಿದೆ.ಗ್ರಾಮೀಣಾಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮಹತ್ವವಾದುದು. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಈಗಲೂ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಅಸಮಾನತೆ ಕಾಣುತ್ತೇವೆ. ಮೂಲ ಸೌಕರ್ಯ ಕೊರತೆ, ಬಡತನ ಇದಕ್ಕೆ ಪ್ರಮುಖ ಕಾರಣ.
ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಸಂಪೂರ್ಣವಾಗಿ ನೀಗಿಸಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಈ ಯೋಜನೆ ಜಾರಿಗೆ ತಂದಿದ್ದಾರೆ.ಜಿಲ್ಲಾ ನಿರ್ದೇಶಕ ವಿ. ವಿಜಯ್ ಕುಮಾರ್ ನಾಗನಾಳ ಮಾತನಾಡಿ, ಉದ್ಯೋಗದಲ್ಲಿ ಅತಿ ಶ್ರೇಷ್ಠವಾದ ಮತ್ತು ಗೌರವದ ಸ್ಥಾನ- ಮಾನದ ಹುದ್ದೆ ಎಂದರೆ ಶಿಕ್ಷಕ ಹುದ್ದೆ. ಈ ಹುದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಹಂಚುವುದಲ್ಲದೇ ವಿದ್ಯಾರ್ಥಿಗಳನ್ನು ಪ್ರೇರೆಪಿಸುವ ಮತ್ತು ಪ್ರೋತ್ಸಾಹಿಸುವ ವ್ಯಕ್ತಿ. ಅವರು ಎಲ್ಲಾ ವಿಷಯದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರಬೇಕು ಮತ್ತು ಸಂಕೀರ್ಣ ವಿಷಯಗಳನ್ನು ಸರಳವಾಗಿ ವಿವರಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ತಾಳ್ಮೆ, ಸಹಾನುಭೂತಿ ಮತ್ತು ಉತ್ತಮ ಸಂವಹನ ಕೌಶಲ್ಯಗಳು ಆದರ್ಶ ಶಿಕ್ಷಕರ ಉತ್ತಮ ಗುಣಗಳಾಗಿರುತ್ತವೆ ಹಾಗೂ ಶಿಕ್ಷಕರು ಶಿಲ್ಪಿ ಇದ್ದ ಹಾಗೆ ಮಕ್ಕಳಲ್ಲಿರುವ ಉತ್ತಮ ಮತ್ತು ನ್ಯೂನ್ಯತೆಗಳನ್ನು ಕಂಡುಹಿಡಿದು ಸಮಾಜಕ್ಕೆ ಉತ್ತಮ ಪ್ರಜೆಯಾಗಿ ನಿರ್ಮಾಣ ಮಾಡಲು ಅವಕಾಶವಿರುವ ಏಕೈಕ ವ್ಯಕ್ತಿ ಎಂದರೆ ಅದು ಶಿಕ್ಷಕ ವೃತ್ತಿ ಎಂದು ತಿಳಿಸಿದರು.
ಶಾಲೆಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯ ಅನುಪಾತ ಗಮನಿಸಿ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ. ಈ ಶಿಕ್ಷಕರ ಸೇವೆ ಗ್ರಾಮೀಣ ಶಾಲಾ ಮಕ್ಕಳು ಪಾಠ ಪ್ರವಚನದಿಂದ ವಂಚಿತರಾಗುವುದನ್ನು ತಡೆಗಟ್ಟಲು ಸಂಸ್ಥೆ ವತಿಯಿಂದ ರೂಪಿಸಿದ ತಾತ್ಕಾಲಿಕ ವ್ಯವಸ್ಥೆ. ಈ ಶಿಕ್ಷಕರಿಗೆ ಮಾಸಿಕ ಗೌರವಧನವನ್ನು ಸಂಸ್ಥೆ ವತಿಯಿಂದ ಪಾವತಿಸಲಾಗುತ್ತಿದ್ದು ಇದುವರೆಗೆ 21.33 ಕೋಟಿ ರೂ. ವಿನಿಯೋಗಿಸಲಾಗಿದೆ.ಪ್ರಸ್ತುತ ವರ್ಷದಲ್ಲಿ ಮೈಸೂರು ಜಿಲ್ಲೆಯಲ್ಲಿ ಆಯ್ಕೆಯಾದ 43 ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ನಿಯೋಜಿಸಲಾಗಿದೆ. ರಾಜ್ಯಾದ್ಯಾಂತ ನಾನಾ ಶಾಲೆಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 1075 ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರನ್ನು ನಿಯೋಜಿಸಲಾಗಿದೆ. ಈ ಪೈಕಿ 240 ಶಾಲೆಗಳು ಏಕೋಪಾಧ್ಯಾಾಯ ಶಾಲೆಗಳಾಗಿರುವುದು ಉಲ್ಲೇಖನೀಯ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಶಿಕ್ಷಕರು ಆಯಾ ಶಾಲೆಗಳಿಗೆ ಮಹತ್ತರ ಕೊಡುಗೆ ನೀಡಲಿದ್ದಾರೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಜ್ಞಾನದೀಪ ಶಿಕ್ಷಕರ ಪ್ರೇರಣಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಹಾಬಲ ಕುಲಾಲ್, ವಿ. ವಿಜಯ್ ಕುಮಾರ್ ನಾಗನಾಳ, ಮಮತಾ ರಾವ್, ವೈ. ಶೇಖರ್, ಬಿ. ಮಾಧವ್ ಹಾಗೂ ಜ್ಞಾನದೀಪ ಶಿಕ್ಷಕರು ಇದ್ದಾರೆ.