ಅವಶ್ಯಕತೆ ಇರುವಷ್ಟು ರಕ್ತ ಸಂಗ್ರಹಕ್ಕೆ ಸಹಕರಿಸಿ

KannadaprabhaNewsNetwork |  
Published : Jun 15, 2024, 01:03 AM ISTUpdated : Jun 15, 2024, 01:04 AM IST
ಅವಶ್ಯಕತೆ ಇರುವಷ್ಟು ರಕ್ತ ಸಂಗ್ರಹಕ್ಕೆ ಸಹಕರಿಸಿ-ಶಿಲ್ಪಾನಾಗ್ | Kannada Prabha

ಸಾರಾಂಶ

ಜಿಲ್ಲೆಯ ಜನಸಂಖ್ಯೆಗನುಗುಣವಾಗಿ ಅವಶ್ಯಕತೆಯಿರುವಷ್ಟು ರಕ್ತ ಸಂಗ್ರಹಣೆ ಇಲ್ಲ. ಆದ್ದರಿಂದ ಜಾಗೃತಿ ಮೂಡಿಸಿ ಅವಶ್ಯಕತೆ ಇರುವಷ್ಟು ರಕ್ತ ಸಂಗ್ರಹಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯ ಜನಸಂಖ್ಯೆಗನುಗುಣವಾಗಿ ಅವಶ್ಯಕತೆಯಿರುವಷ್ಟು ರಕ್ತ ಸಂಗ್ರಹಣೆ ಇಲ್ಲ. ಆದ್ದರಿಂದ ಜಾಗೃತಿ ಮೂಡಿಸಿ ಅವಶ್ಯಕತೆ ಇರುವಷ್ಟು ರಕ್ತ ಸಂಗ್ರಹಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ನಗರದ ರೋಟರಿ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ರೋಟರಿ ಸಿಲ್ಕ್ ಸಿಟಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಭಾರತ್‌ ಸ್ಕೌಟ್ಸ್‌ ಆ್ಯಂಡ್ ಗೈಡ್ಸ್ ಮತ್ತು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ ಜನಸಂಖ್ಯೆಗನುಗುಣವಾಗಿ ಸುಮಾರು ೧೨ ಸಾವಿರ ಯೂನಿಟ್ ರಕ್ತ ಸಂಗ್ರಹಣೆ ಬೇಕು. ಆದರೆ ಈಗ ನಮ್ಮಲ್ಲಿ ೬ ರಿಂದ ೭ ಸಾವಿರ ಯೂನಿಟ್ ರಕ್ತ ಮಾತ್ರ ಸಂಗ್ರಹವಾಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಗುರಿ ಮುಟ್ಟಲು ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದ್ದು ಇದಕ್ಕೆ ಜಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ರಕ್ತದಾನ ಮಹಾದಾನ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬೇರೆಯವರ ಜೀವ ಉಳಿಸಲು ರಕ್ತ ನೀಡುವುದು ಪುಣ್ಯದ ಕೆಲಸ. ರಕ್ತ ನೀಡುವುದರಿಂದ ಯಾವುದೇ ಅಪಾಯವಿಲ್ಲವೆಂದು ಈಗಾಗಲೇ ವಿಜ್ಞಾನಿಗಳು ತಿಳಿಸಿದ್ದಾರೆ, ಆದ್ದರಿಂದ ರಕ್ತದಾನಿಗಳು ಮುಂದೆ ಬಂದು ಅದರಲ್ಲೂ ಯುವಕರು ಮುಂದೆ ರಕ್ತದಾನ ಮಾಡಿದರೆ ಹಲವಾರು ಜೀವಗಳನ್ನು ಉಳಿಸಬಹುದು. ಜಿಲ್ಲೆಯಲ್ಲಿ ಸಿಮ್ಸ್, ಜಿಲ್ಲಾಸ್ಪತ್ರೆ ಹಾಗೂ ಖಾಸಗಿಯಾಗಿ ಎರಡು ರಕ್ತ ಸಂಗ್ರಹ ಘಟಕಗಳಿವೆ ಎಂದರು.

ಈ ನಿಟ್ಟಿನಲ್ಲಿ ರೋಟರಿ ಸಿಲ್ಕ್ ಸಿಟಿ ರಕ್ತದಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದರು. ಈ ಸಂದರ್ಭದಲ್ಲಿ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳಿಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನ ಮಾಡಲಾಯಿತು. ಜೊತೆಗೆ ರಕ್ತದಾನ ಮಾಡಿದ ರಕ್ತದಾನಿಗಳು ಪ್ರಮಾಣ ಪತ್ರ ವಿತರಿಸಲಾಯಿತು.

ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷ ಡಿ.ಎಸ್.ಗಿರೀಶ್ ದೊಡ್ಡರಾಯಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ರೋಟರಿ ಸಿಲ್ಕ್ ಸಿಟಿ ವತಿಯಿಂದ ಕಳೆದ ೭-೮ ವರ್ಷಗಳಿಂದಲೂ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದ್ದು ಸುಮಾರು ೨ ಸಾವಿರಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದ್ದಾರೆ ಎಂದರು.

೨೦೦೪ರಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಪ್ರಪಂಚದಾದ್ಯಂತ ಆಚರಣೆ ಮಾಡಲಾಗುತ್ತಿದೆ. ರೋಟರಿಯ ಪ್ರಮುಖ ಉದ್ದೇಶ ಶಿಕ್ಷಣ, ಆರೋಗ್ಯವಾಗಿದೆ. ೨೦೧೪ರಲ್ಲಿ ರೋಟರಿ ಸಂಸ್ಥೆ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿರುವ ರಕ್ತನಿಧಿ ಕೇಂದ್ರಕ್ಕೆ ೬೦ ಲಕ್ಷ ಬೆಲೆ ಬಾಳುವ ಉಪಕರಣಗಳನ್ನು ನೀಡಲಾಗಿದೆ. ಹೆಚ್ಚು ಹೆಚ್ಚು ಜನರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಬೇಕು ಎಂದರು.

ಜಾಗೃತಿ ಜಾಥಾ: ಕಾರ್ಯಕ್ರಮಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ರೋಟರಿ ಭವನದವರರೆಗೆ ನಡೆದ ಜಾಗೃತಿ ಜಾಥಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಬರಂ, ನೋಡಲ್ ಅಧಿಕಾರಿ ಡಾ. ಜಯರಾಜ್ ಡಿ. ಡಾ.ಬಸವರಾಜೇಂದ್ರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಜಾಥಾದಲ್ಲಿ ಸರ್ಕಾರಿ ನರ್ಸಿಂಗ್ , ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ, ಜಾಥಾಯುದಕ್ಕೂ ರಕ್ತದಾನ ಶ್ರೇಷ್ಠದಾನ, ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಿ ಎಂಬ ಘೋಷಣೆಗಳನ್ನು ಕೂಗಿದರು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಡಾ.ನಾಗಾರ್ಜುನ್, ಪ್ರಕಾಶ್, ರೋಟಿರಿ ಸಿಲ್ಕ್ ಸಿಟಿಯ ಅಕ್ಷಯ್, ಮಾಣಿಕ್‌ಚಂದ್, ಪ್ರಶಾಂತ್, ಅಜಯ್, ಚೈತನ್ಯ ಹೆಗ್ಗಡೆ, ಡಿ.ಪಿ. ವಿಶ್ವಾಸ್, ಆರ್.ರಾಜು, ಮುರುಗೇಂದ್ರಸ್ವಾಮಿ, ಶಮಿತ್, ರಕ್ತನಿಧಿ ಘಟಕದ ಡಾ.ದಿವ್ಯ, ಡಾ.ಅಕ್ಷಯ್, ಡಾ.ರವಿಕುಮಾರ್, ಮಹದೇವಪ್ರಸಾದ್ ಎನ್.ಜಿ. ದೊರೆಸ್ವಾಮಿನಾಯಕ, ರಘು, ಜಗದೀಶ್, ದೊಡ್ದಮ್ಮ ಇತರರು ಭಾಗವಹಿಸಿದ್ದರು. ರಕ್ತದಾನ ಶಿಬಿರದಲ್ಲಿ ೭೮ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ