ಚಿಕ್ಕಮಗಳೂರಿನ ಜ್ಯೂನಿಯರ್ ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಾಜದ ದುರ್ಬಲ ಹಾಗೂ ಅಸಹಾಯಕ ಜನರಿಗೆ ಅನ್ಯಾಯವಾದಾಗ ಅವರ ನೆರವಿಗೆ ಯಾರು ಬಾರದಿದ್ದಾಗ ಇಂತಹ ಪರಿಸ್ಥಿತಿಯಲ್ಲಿ ಉಚಿತ ಕಾನೂನು ನೆರವು ನೀಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಕಾನೂನು ಸೇವೆಗಳ ಪ್ರಾಧಿಕಾರದಿಂದ ದೊರೆಯುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್. ಸೋಮ ಹೇಳಿದ್ದಾರೆ. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವಾರ್ತಾ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಗೆ ಗುರುವಾರ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 1995 ನವೆಂಬರ್ 9 ರಂದು ಪ್ರಾಧಿಕಾರ ತನ್ನ ಸೇವೆ ಆರಂಭಿಸಿ ಇದರ ನೆನಪಿಗಾಗಿ ಪ್ರತಿ ವರ್ಷ ನ. 9 ರಂದು ಕಾನೂನು ಸೇವೆಗಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದ ಅವರು, ಪರಿಶಿಷ್ಟ ಜಾತಿ, ಪಂಗಡ ಸದಸ್ಯರು ಹಾಗೂ ಬಲಿಪಶು, ಮಹಿಳೆ ಅಥವಾ ಮಗು, ಅಂಗವಿಕಲ ವ್ಯಕ್ತಿ, ಸಾಮೂಹಿಕ ವಿಪತ್ತು, ಜನಾಂಗೀಯ ಹಿಂಸೆಗೆ ಜಾತಿ ದೌರ್ಜನ್ಯ ಮತೀಯ ಕಾರಣಗಳಿಂದ ಒಳಗಾದ ಹಾಗೂ 3 ಲಕ್ಷ ರು. ಗಳ ಒಳಗೆ ವಾರ್ಷಿಕ ಆದಾಯ ಇರುವಂತೆ ಜನರಿಗೆ ಉಚಿತ ಕಾನೂನು ನೆರವು ಪಡೆಯಬಹುದು ಎಂದರು. ಈ ದೇಶದ ಸಂಪತ್ತಾದ ಯುವ ಜನರು ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗದೆ ಸಮಾಜದಲ್ಲಿ ಉತ್ತಮ ವಾತಾವರಣದಿಂದ ತಮ್ಮ ಜೀವನ ಹಾಗೂ ಗುರಿಗಳನ್ನು ಪಡೆಯಲು ಮುಂದಾಗಬೇಕು ತಮ್ಮ ಸುತ್ತಮುತ್ತಲಿನಲ್ಲಿ ಘಟಿಸಬಹುದಾದ, ಬಾಲ್ಯ ವಿವಾಹ, ಸಮಾಜ ಘಾತುಕ ಕೆಲಸಗಳು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವ ಕೆಲಸ ಮಾಡಬೇಕೆಂದರು. ತಮ್ಮ ತಂದೆ-ತಾಯಿಗಳನ್ನು ನೋಡಿಕೊಳ್ಳಬೇಕು. ಕಾನೂನಿನ ಅರಿವಿನಿಂದ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಜೀವನ ನಡೆಸಬೇಕು ಎಂದು ಹೇಳಿದರು. ಉಪ ಪ್ರಧಾನ ಕಾನೂನು ನೆರವು ಅಭಿರಕ್ಷಕ ಡಿ. ನಟರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟನಾಯ್ಕ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಇಂಪಾ ಸಮಾರಂಭದಲ್ಲಿ ಮಾತನಾಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ವಿರೂಪಾಕ್ಷ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಕೀರ್ತಿ, ಚಂದನಾ ಪ್ರಾರ್ಥಿಸಿ, ಉಪನ್ಯಾಸಕರಿಂದ ಗಿರೀಶ್ ಅವರು ಸ್ವಾಗತಿಸಿ, ನಾಗಶ್ರೀ ವಂದಿಸಿದರು. ಉಪನ್ಯಾಸಕ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.9 ಕೆಸಿಕೆಎಂ 2ಚಿಕ್ಕಮಗಳೂರಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಗುರುವಾರ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನು ನ್ಯಾ. ಸೋಮ ಅವರು ಉದ್ಘಾಟಿಸಿದರು. ಪಿಯು ಡಿಡಿ ಪುಟ್ಟನಾಯ್ಕ, ವಿರೂಪಾಕ್ಷ ಇದ್ದರು.