ಕನ್ನಡಪ್ರಭ ವಾರ್ತೆ ಮಂಗಳೂರುಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲು ಸಮಸ್ಯೆಯಾದರೆ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಫಲಾನುಭವಿಗಳಿಗೆ ನೆರವು ನೀಡಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ.
ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸುಗಳು ಪರವಾನಗಿ ದುರುಪಯೋಗ ಪಡಿಸಿಕೊಂಡು ಓಡಾಡುತ್ತಿದ್ದು, ಬಸ್ಸಿನ ಪರವಾನಗಿ ರದ್ದು ಮಾಡುವಂತೆ ಹಾಗೂ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.ಯುವನಿಧಿ ಯೋಜನೆಯಡಿ ತಾಲೂಕು ಮಟ್ಟದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಬೇಕು. ಯುವನಿಧಿ ಬಗ್ಗೆ ಅರಿವು ಮೂಡಿಸಲು ಯುವ ಜನತೆಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 3,79,557 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅನುಕೂಲವಾದ ಬಗ್ಗೆ ಯಶೋಗಾಥೆ, ಪ್ರತಿ ತಾಲೂಕಿನಿಂದ ಸಾಕ್ಷ್ಯ ಚಿತ್ರಗಳನ್ನು ಮಾಡಬೇಕು ಎಂದು ಭರತ್ ಮುಂಡೋಡಿ ಸೂಚಿಸಿದರು. ಇದೇ ಸಂದರ್ಭದಲ್ಲಿ ಮೈಸೂರು ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಭಾರಿ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಯಲಕ್ಷ್ಮಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಸುಷ್ಮಾ ಕೆ.ಎಸ್., ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಜೋಕಿಂ ಡಿಸೋಜ, ಸುರೇಖಾ ಚಂದ್ರಹಾಸ್, ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿ.ಎ, ಶಾಹುಲ್ ಹಮೀದ್ ಕೆ, ಉಮಾನಾಥ್ ಶೆಟ್ಟಿ, ಬಿ. ಪದ್ಮನಾಭ ಸಾಲ್ಯಾನ್, ಸುರೇಂದ್ರ ಕಂಬಳಿ, ರಂಜಿತ್ ರೈ, ಆಲ್‍ಸ್ಟನ್ ಕ್ಲೈವ್ ಡಿಕುನ್ಹ, ವಿವಿಧ ಇಲಾಖಾಧಿಕಾರಿಗಳು ಇದ್ದರು.