ಸಮಾಜದ ಆರೋಗ್ಯ, ಮಣ್ಣಿನ ಫಲವತ್ತತೆಗಾಗಿ ಎಣ್ಣೆಕಾಳುಗಳನ್ನು ಬೆಳೆಯಿರಿ

KannadaprabhaNewsNetwork | Published : Jul 7, 2024 1:18 AM

ಸಾರಾಂಶ

ಬರಗಾಲದ ಸನ್ನಿವೇಶದಲ್ಲಿ ತೇವಾಂಶದ ಕೊರತೆ ನೀಗಿಸುವುದರ ಜೊತೆಗೆ ಉತ್ತಮ ಇಳುವರಿ ಪಡೆಯಲು ರೈತರು ಸಾವಯವ ಕೃಷಿ, ಬೆಳೆ ಪರಿವರ್ತನೆ ಮತ್ತು ಮಿಶ್ರ ಬೆಳೆ ಪದ್ಧತಿಗಳನ್ನು ಅಳವಡಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜದ ಆರೋಗ್ಯ ಮತ್ತು ಮಣ್ಣಿನ ಫಲವತ್ತತೆಗಾಗಿ ಎಣ್ಣೆಕಾಳುಗಳನ್ನು ಬೆಳೆಯಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಎಸ್.ಬಿ. ಮಮತಾ ಅವರು ರೈತರಿಗೆ ಸಲಹೆ ನೀಡಿದರು.

ಮೈಸೂರು ತಾಲೂಕು ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ಶುಕ್ರವಾರ ಮತ್ತು ಶನಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಎಣ್ಣೆಕಾಳು ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳು ಮತ್ತು ಮೌಲ್ಯವರ್ಧನೆಗೆ ಇರುವ ಅವಕಾಶ ಕುರಿತ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಬರಗಾಲದ ಸನ್ನಿವೇಶದಲ್ಲಿ ತೇವಾಂಶದ ಕೊರತೆ ನೀಗಿಸುವುದರ ಜೊತೆಗೆ ಉತ್ತಮ ಇಳುವರಿ ಪಡೆಯಲು ರೈತರು ಸಾವಯವ ಕೃಷಿ, ಬೆಳೆ ಪರಿವರ್ತನೆ ಮತ್ತು ಮಿಶ್ರ ಬೆಳೆ ಪದ್ಧತಿಗಳನ್ನು ಅಳವಡಿಸಬೇಕು ಎಂದರು.

ಈ ಕಾರ್ಯಾಗಾರದಲ್ಲಿ ಮಂಡ್ಯದ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಪಿ. ತಿಮ್ಮೇಗೌಡ ಅವರು, ವಿವಿಧ ಎಣ್ಣೆಕಾಳು ಬೆಳೆಗಳ ಸುಧಾರಿತ ತಳಿಗಳು ಮತ್ತು ಬೇಸಾಯ ಕ್ರಮಗಳ ಬಗ್ಗೆ ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು.

ಎಣ್ಣೆಕಾಳು ಬೆಳೆಗಳಲ್ಲಿ ಮೌಲ್ಯವರ್ಧನೆ ಮತ್ತು ಕಲಬೆರೆಕೆ ಎಣ್ಣೆ ಕಂಡು ಹಿಡಿಯುವ ವಿಧಾನಗಳ ಕುರಿತು ಸಿ.ಎಫ್.ಟಿ.ಆರ್.ಐ. ಹಿರಿಯ ವಿಜ್ಞಾನಿ ಡಾ.ಕೆ. ಗೋವಿಂದರಾಜು ಅವರು ಪ್ರಾತ್ಯಕ್ಷತೆ ಮೂಲಕ ರೈತರಿಗೆ ತೋರಿಸಿಕೊಟ್ಟರು.

ನಂತರ ರೋಗತಜ್ಞೆ ಡಾ.ಆರ್.ಎನ್. ಪುಷ್ಪಾ ಅವರು, ಬೀಜೋಪಚಾರ, ಸಮಗ್ರ ರೋಗ- ಕೀಟ ನಿರ್ವಹಣೆ ಮತ್ತು ದಾಸ್ತಾನು ಕೀಟಗಳ ನಿರ್ವಹಣೆ ಕುರಿತು ತಾಂತ್ರಿಕ ಉಪನ್ಯಾಸ ನೀಡಿದರು.

ತೆಂಗಿನ ಹಾಲಿನಿಂದ ಐಸ್ ಕ್ರೀಮ್ ತಯಾರಿಕೆ ಮತ್ತು ಮೌಲ್ಯವರ್ಧನೆ ಕುರಿತು ಪ್ರಗತಿಪರ ರೈತ ಸುರೇಶ್ ಭಟ್ ಅನುಭವ ಹಂಚಿಕೊಂಡರು.

ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ. ಮಧುಲತಾ ಅವರು, ಜೈವಿಕ ಗೊಬ್ಬರಗಳ ಮಹತ್ವ ಮತ್ತು ಬೆಳೆವಿಮೆ ಮತ್ತು ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು.

ಸಹಾಯಕ ಕೃಷಿ ನಿರ್ದೇಶಕಿ ಎಸ್. ವಜ್ರೇಶ್ವರಿ ಅವರು, ಮಣ್ಣು ಮಾದರಿಗಳ ಸಂಗ್ರಹಣೆ ಮತ್ತು ಫಲಿತಾಂಶ ಆಧಾರಿತ ರಸಗೊಬ್ಬರಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು.

ಗಾಣದ ಮೂಲಕ ಎಣ್ಣೆ ತೆಗೆದು ಆರೋಗ್ಯ ಯುಕ್ತ ಅಡುಗೆ ಎಣ್ಣೆ ಉತ್ಪಾದನೆ ಮತ್ತು ಮಾರುಕಟ್ಟೆಗಿರುವ ಅವಕಾಶಗಳ ಕುರಿತು ಉದಯೋನ್ಮೂಖ ಉದ್ಯಮಿ ಬಿ.ಸಿ. ಮೋಹನ್ ಕುಮಾರ್ ಅನುಭವ ಹಂಚಿಕೊಂಡರು.

ತರಬೇತಿ ಸಂಯೋಜಕ ಹಾಗೂ ಕೃಷಿ ಅಧಿಕಾರಿ ಎಂ.ಬಿ. ಮಂಜುಳಾ ಅವರು, ಪಿ.ಎಂ. ಕಿಸಾನ್ ಯೋಜನೆ ಬಗ್ಗೆ ತಿಳಿಸಿದರು.

ಈ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳ 30 ಜನ ರೈತರು ಭಾಗವಹಿಸಿದ್ದರು. ತರಬೇತಿ ಮುಕ್ತಾಯದ ನಂತರ 25 ಅಂಕಗಳಿಗೆ ಪರೀಕ್ಷೆ ನೆಡೆಸಲಾಗಿ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೆಚ್ಚಿನ ಅಂಕ ಪಡೆದ ರೈತರಾದ ಕೆ.ಎಂ. ದೇವಮ್ಮ, ಕೆ.ಎನ್. ರತ್ನೇಶ್ವರ ಅವರಿಗೆ ಪುಸ್ತಕಗಳನ್ನು ನೀಡಿ ಅಭಿನಂದಿಸಲಾಯಿತು.

ಕೃಷಿ ಅಧಿಕಾರಿಗಳಾದ ಎಚ್.ಆರ್. ರಾಜಶೇಖರ, ಜಿ.ಕೆ. ಶಿಲ್ಪಾ ಇದ್ದರು.

Share this article