ಅಸಿಸ್ಟೆಂಟ್‌ ಪ್ರೊಫೆಸರ್‌ ಕೊಲೆ : ಮೂವರ ಬಂಧನ

KannadaprabhaNewsNetwork |  
Published : Jun 30, 2025, 12:34 AM ISTUpdated : Jun 30, 2025, 12:47 PM IST
Crime news

ಸಾರಾಂಶ

ಲಂಡನ್ ನಲ್ಲಿ‌ ಕೆಲಸ ಕೊಡಿಸುವುದಾಗಿ ನಂಬಿಸಿ ಸ್ನೇಹಿತನಿಂದ ಲಕ್ಷ ಲಕ್ಷ ಹಣ ಪಡೆದು ಕೊನೆಗೆ ಆತನನ್ನೇ ಕೊಲೆ ಮಾಡಿ ಬಾವಿಗೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಜಿಲ್ಲೆಯ ಚಿಂತಾಮಣಿ ಪೋಲಿಸರು ಬಂಧಿಸಿದ್ದಾರೆ.

 ಚಿಕ್ಕಬಳ್ಳಾಪುರ :  ಲಂಡನ್ ನಲ್ಲಿ‌ ಕೆಲಸ ಕೊಡಿಸುವುದಾಗಿ ನಂಬಿಸಿ ಸ್ನೇಹಿತನಿಂದ ಲಕ್ಷ ಲಕ್ಷ ಹಣ ಪಡೆದು ಕೊನೆಗೆ ಆತನನ್ನೇ ಕೊಲೆ ಮಾಡಿ ಬಾವಿಗೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಜಿಲ್ಲೆಯ ಚಿಂತಾಮಣಿ ಪೋಲಿಸರು ಬಂಧಿಸಿದ್ದಾರೆ.

ಕೊಲೆಯಾದ ವ್ಯಕ್ತಿ ಚಿಂತಾಮಣಿ ತಾಲೂಕಿನ ಜಿ. ರಾಮಾಪುರ ಗ್ರಾಮದ ಅಸಿಸ್ಟೆಂಟ್‌ ಪ್ರೊಫೆಸರ್‌ ರಾಮಾಂಜಿ(31). ಕೊಲೆ ಮಾಡಿದ ಆರೋಪಿಗಳನ್ನು ಚಿಂತಾಮಣಿ ತಾಲೂಕಿನ ದೊಡ್ಡಗುಟ್ಟಹಳ್ಳಿ ನಿವಾಸಿ ಸುಧಾಕರ್, ಈತನ ತಮ್ಮ ಮನೋಜ್ ಮತ್ತು ಗೆಳೆಯ ಮಂಜುನಾಥ್ ಎಂದು ಗುರ್ತಿಸಲಾಗಿದೆ.

ಘಟನೆಯ ವಿವರ:

ಜೂನ್‌ 23 ರಂದು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿನ ಕೆಂಪದೇನಹಳ್ಳಿ ಗ್ರಾಮದ ವಾಸಿ ವೀರಣ್ಣ ಎಂಬುವರು ತಮ್ಮ ಜಮೀನಿನಲ್ಲಿರುವ ಬಾವಿಯಲ್ಲಿ ಶವ ಇರುವುದಾಗಿ ಚಿಂತಾಮಣಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.

ಸಹೋದರನಿಂದ ಠಾಣೆಗೆ ದೂರು

ಜೂ. 27 ರಂದು ಚಿಂತಾಮಣಿ ತಾಲೂಕು ರಾಂಪುರ ವಿಶ್ವನಾಥ ಎಂಬುವರು ತನ್ನ ತಮ್ಮ ರಾಮಾಂಜಿ ಬೆಂಗಳೂರಿನ ಯಲಹಂಕದ ನಿವೇದ ಇನ್‌ಸ್ಟಿಟ್ಯೂಟ್‌ಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದು, ಗ್ರಾಮಕ್ಕೆ ಬಂದಿದ್ದ ಆತನನ್ನು ಜೂ.18 ರಂದು ರಾತ್ರಿ ದೊಡ್ಡಗುಟ್ಟಹಳ್ಳಿ ಗ್ರಾಮದ ಸುಧಾಕರ್ ಎಂಬುವವರೊಂದಿಗೆ ಹೋಗಿದ್ದು, ನಂತರ ಆತನ ಸುಳಿವೇ ಸಿಕ್ಕಿಲ್ಲ ಎಂದು ದೂರು ನೀಡಿದಾಗ, ಪೋಲಿಸರು ಕೆಂಪದೇನಹಳ್ಳಿ ಪ್ರಕರಣದ ಮೃತನ ಪೋಟೋ ಮತ್ತು ಬಟ್ಟೆಗಳನ್ನು ತೋರಿಸಿದಾಗ ಇದು ತನ್ನ ತಮ್ಮ ರಾಮಾಂಜಿಯದೇ ಎಂದು ಗುರ್ತಿಸಿದ್ದರು.

ಬಳಿಕ ಪೋಲಿಸರು ಸಿಸಿ ಕ್ಯಾಮೆರಾಗಳ ಫೂಟೇಜ್‌ಗಳನ್ನು ಸಂಗ್ರಹಿಸಿ, ಕೊಲೆ ಆರೋಪಿಯನ್ನು ಗುರ್ತಿಸಿ, ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆಯಾದ ರಾಮಾಂಜಿಗೆ ಲಂಡನ್‌ನಲ್ಲಿ ಕೆಲಸವನ್ನು ಕೊಡಿಸುವುದಾಗಿ ಪಡೆದುಕೊಂಡಿದ್ದ ಹಣವನ್ನು ವಾಪಾಸ್‌ ಕೇಳಿದ್ದೇ ಕೊಲೆಗೆ ಕಾರಣ ಎಂಬುದು ಬೆಳಕಿಗೆ ಬಂದಿದೆ.

ಲಂಡನ್‌ನಲ್ಲಿ ಕೆಲಸ ಕೊಡಿಸುವ ಆಮಿಷ

ರಾಮಾಂಜಿಗೆ ಪರಿಚಯವಾಗಿದ್ದ ಚಿಂತಾಮಣಿ ತಾಲೂಕಿನ ದೊಡ್ಡಗುಟ್ಟಹಳ್ಳಿ ನಿವಾಸಿ ಸುಧಾಕರ್, ನಿನಗೆ ಲಂಡನ್‌ನಲ್ಲಿ‌ ಕೆಲಸ ಕೊಡಿಸುತ್ತೇವೆ. ಅಲ್ಲಿ ಲಕ್ಷ ಲಕ್ಷಗಳಲ್ಲಿ ಸಂಬಳ ಬರುತ್ತದೆ ಎಂದು ನಂಬಿಸಿ, ಲಂಡನ್‌ ಗೆ ಹೋಗಲು ಪಾಸ್‌ಪೋರ್ಟ್‌ ಸಹ ಮಾಡಿಸಿದ್ದರಂತೆ, ಇದಕ್ಕಾಗಿ ಸುಮಾರು 11 ಲಕ್ಷ ವಸೂಲಿ ಮಾಡಿ ಕೊನೆಗೆ ವಂಚಿಸಿದ್ದಾರೆ.

ನಿಜ ಸಂಗತಿ ಅರಿತ ರಾಮಾಂಜಿ ಹಣ ವಾಪಸ್ ಕೇಳಿದ್ದಾನೆ. ಹಣ ಕೊಡಲು ಹಿಂದೇಟು ಹಾಕಿದ ಸುಧಾಕರ್‌, ರಾಮಾಂಜಿಯನ್ನು ಮುಗಿಸಲು ತನ್ನ ತಮ್ಮ ಮನೋಜ್ ಹಾಗೂ ಸ್ನೇಹಿತ ಮಂಜುನಾಥ್ ನೊಂದಿಗೆ ಸೇರಿ ಸಂಚು ರೂಪಿಸಿದ್ದಾನೆ. ಇದೇ ವೇಳೆ ರಾಮಾಂಜಿಗೆ ಪ್ಲೈಟ್ ಟಿಕೆಟ್ ಬುಕ್ ಆಗಿದೆ ಎಂದು ನಂಬಿಸಿ ಐಷಾರಾಮಿ ಕಾರಿನಲ್ಲಿ ಕರೆದೊಯ್ದು ಕೊಲೆ ಮಾಡಿ, ಶವಕ್ಕೆ ಕಲ್ಲು ಕಟ್ಟಿ ಬಾವಿಗೆ ಬೀಸಾಡಿದ್ದಾರೆ.

PREV
Read more Articles on

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ