ಇಂದಿನಿಂದ ಸಹೋದರತ್ವದ ಅಷ್ಟೂರ ದರ್ಗಾ ಜಾತ್ರೆ

KannadaprabhaNewsNetwork | Published : Apr 2, 2024 1:03 AM

ಸಾರಾಂಶ

ಹಿಂದಿನ ಅನೇಕ ವರ್ಷಗಳಿಂದ ನಡೆದುಕೊಂಡು ಬರುವ ಈ ಜಾತ್ರೆಗೆ ದೇವನೊಬ್ಬ ನಾಮ ಹಲವು ಎಂಬ ಗಾದೆಯಂತೆ ಅಷ್ಟೂರ ಗ್ರಾಮದ ಅಹ್ಮದ ಶಾ ಅಲಿ ವಲಿ ಬಹಮನಿ ದರ್ಗಾದ ಗುಂಬಜ್‌ ಹಿಂದು ಹಾಗೂ ಮುಸ್ಲಿಂ ಸಹೋದರತ್ವ ಸಾರುವ ಪ್ರತೀಕ ಎಂಬಂತಿವೆ.

ಮೌಲಾನಾಸಾಬ್

ಬೀದರ್: ಹಿಂದು-ಮುಸ್ಲಿಂರ ಸಹೋದರತ್ವ ಸಾರುವ ಅಷ್ಟೂರ ದರ್ಗಾದ ಜಾತ್ರೆ (ಸಂದಲ್) ಇಂದಿನಿಂದ ಆರಂಭಗೊಳ್ಳಲಿದೆ. ವಿಶೇಷವಾಗಿ ಕಲಬುರಗಿ ಜಿಲ್ಲೆಯ ಆಳಂದನಿಂದ ಅಲ್ಲಮಪ್ರಭು ಮಹಾರಾಜರಿಂದ ಜಾತ್ರೆಗೆ ಚಾಲನೆ ನೀಡುವ ಪರಂಪರೆ ಇನ್ನು ಜೀವಂತ ಇದೆ.

ಹಿಂದಿನ ಅನೇಕ ವರ್ಷಗಳಿಂದ ನಡೆದುಕೊಂಡು ಬರುವ ಈ ಜಾತ್ರೆಗೆ ದೇವನೊಬ್ಬ ನಾಮ ಹಲವು ಎಂಬ ಗಾದೆಯಂತೆ ಅಷ್ಟೂರ ಗ್ರಾಮದ ಅಹ್ಮದ ಶಾ ಅಲಿ ವಲಿ ಬಹಮನಿ ದರ್ಗಾದ ಗುಂಬಜ್‌ ಹಿಂದು ಹಾಗೂ ಮುಸ್ಲಿಂ ಸಹೋದರತ್ವ ಸಾರುವ ಪ್ರತೀಕ ಎಂಬಂತಿವೆ.

ಹಿಂದು ಮುಸ್ಲಿಂ ಸೇರಿದಂತೆ ವಿವಿಧ ಜಾತಿ ಜನಾಂಗದವರು ನಿತ್ಯ ಆಚರಿಸುವ ಈ ದರ್ಗಾದಲ್ಲಿ ಮುಸ್ಲಿಂಮರಿಗೆ ಅಹ್ಮದ ಶಾ ಅಲಿ ವಲಿ ಆದ್ರೆ ಹಿಂದುಗಳಿಗೆ ಅಲ್ಲಮಪ್ರಭುವಾಗಿ ನಿತ್ಯ ಆರಾಧಿಸಲ್ಪಡುತ್ತಾನೆ.

ನಿತ್ಯ ರಾಜ್ಯದ ವಿವಿಧೆಡೆಯಿಂದ ಅಲ್ಲದೆ ಪಕ್ಕದ ತೆಲಂಗಾಣ ಮತ್ತು ಮಹಾರಾಷ್ಟ್ರದಿಂದ ಸಾವಿರಾರು ಯಾತ್ರಾರ್ಥಿಗಳು, ಪ್ರವಾಸಿಗರು ಇಲ್ಲಿಗೆ ಆಗಮಿಸಿ ದರ್ಗಾಕ್ಕೆ ಹೂವಿನ ಚಾದರ್ ಸಮರ್ಪಿಸಿ, ಅಗರಬತ್ತಿ ಹಚ್ಚಿ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸುವ ಮೂಲಕ ಅಹ್ಮದ್ ಶಾಹ್‌ಗೆ ಭಕ್ತಿ ಸಮರ್ಪಿಸುತ್ತಾರೆ. ಇಲ್ಲಿ ಹಿಂದುಗಳು ಅಲ್ಲಮಪ್ರಭು ಗುಡಿ ಎಂದೂ ಮುಸ್ಲಿಮರು ವಲಿ ದರ್ಗಾ ಎಂದೂ ಪರಿಗಣಿಸುವ ಅಹ್ಮದ್ ಶಾಹ್ನ ಸಮಾಧಿಯು ಅಪರೂಪದ ಭಾವೈಕ್ಯತೆಯ ತಾಣಗಳಲ್ಲಿ ಒಂದಾಗಿದ್ದಂತೂ ಹೌದು.

ಅಹಮದ್ ಶಾಹನ ಈ ಗೋರಿಯ ಮೇಲ್ಭಾಗದಲ್ಲಿ ಅಂದರೆ ಗುಂಬಜ್‌ನ ಒಳಭಾಗದಲ್ಲಿ ಚಿನ್ನದ ಲೇಪನ ಹಾಗೂ ವೈವಿಧ್ಯಮಯ ಬಣ್ಣ ಬಳಸಿದ್ದು, ಆಕಷ೯ಕವಾಗಿದ್ದು ನೋಡುಗರ ಕಣ್ಮನ ಇಂದಿಗೂ ಸೆಳೆಯುತ್ತದೆ.

ಕೇಂದ್ರ ಸರ್ಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್ಐ) ವ್ಯಾಪ್ತಿಗೆ ಈ ಗುಂಬಜ್‌ಗಳು ಬರುತ್ತಿದ್ದು ಪ್ರವಾಸಿ ತಾಣಗಳನ್ನಾಗಿಸುವದಷ್ಟೇ ಇಲ್ಲಿ ಪುರಾತನ ಸ್ಮಾರಕ ಸ್ಥಳಗಳನ್ನು ಸಂರಕ್ಷಿಸುವತ್ತಲೂ ವಿಶೇಷ ಆಸಕ್ತಿ ವಹಿಸಲಾಗುತ್ತಿದೆ.

ಅಷ್ಟೂರ ದರ್ಗಾದ ಈ ಜಾತ್ರೆಗೆ ಪಕ್ಕದ ಕಲಬುರಗಿ ಜಿಲ್ಲೆಯ ಮಾಡಿಹಾಳ್ ಮತ್ತು ಆಳಂದದ ಅಲ್ಲಮಪ್ರಭು ಮಹಾರಾಜರು ಪ್ರತಿ ವರ್ಷ ಹೋಳಿ ಹಬ್ಬದ ನಂತರ ನಡೆಯುವ ಜಾತ್ರೆಯ ಸಂದರ್ಭ ಕಾಲ್ನಡಿಗೆಯಲ್ಲಿಯೇ ಆಗಮಿಸಿ ದರ್ಗಾ ಮುಂದೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡುತ್ತಾರೆ.

ಇಂದಿನಿಂದ ಅಷ್ಟೂರ ದರ್ಗಾದಲ್ಲಿ ಸಂದಲ್ ಆರಂಭ:

ಅಷ್ಟೂರ ದರ್ಗಾ ಹಜರತ್ ಸುಲ್ತಾನ್ ಅಹ್ಮದ ಶಾ ವಲಿ ಬಹಮನಿಯ 607ನೇ ಸಂದಲ್ ಆಚರಣೆ ಏ.2ರಿಂದ 4ರ ವರೆಗೆ ನಡೆಯಲಿದೆ. ಈ ಕುರಿತು ದರ್ಗಾದ ಸಜ್ಜಾದೆ ಹಾಗೂ ಮುತವಲ್ಲಿ ಮೊಹ್ಮದ ಶಹಾಬುದ್ದಿನ ಬಹಮನಿ ಅವರು ಪ್ರಕಟಣೆ ನೀಡಿ ಪ್ರತಿ ವರ್ಷದಂತೆ ಈ ವರ್ಷವು ಏ. 2ರಂದು ಶಾಹಪೂರ ಗೇಟ್‌ನಲ್ಲಿರುವ ದರ್ಗಾದ ಮುತವಲ್ಲಿ ಅವರ ನಿವಾಸದಿಂದ ಸಂದಲ್ ಮೆರವಣಿಗೆ ನಡೆಸಿ ಸಂಜೆ 6.50 ಗಂಟೆಗೆ ದರ್ಗಾದಲ್ಲಿ ಸಂದಲ್ ಶರೀಫ್ ನಡೆಯಲಿದೆ. ಈ ಸಂದಲ್ ಕಾರ್ಯಕ್ರಮದಲ್ಲಿ ಪಕ್ಕದ ರಾಜ್ಯದ ಜನರು, ಗಣ್ಯರು ಹಾಗೂ ರಾಜಕೀಯ ವ್ಯಕ್ತಿಗಳು ಕೂಡ ಭಾಗವಹಿಸುವ ನೀರಿಕ್ಷೆ ಇದೆ. ಏ.3ರಂದು ಸಂಜೆ 6.50ರ ನಂತರ ಚಿರಾಗಾ (ದೀಪ ಬೆಳಗುವ) ಕಾರ್ಯಕ್ರಮ ಜರುಗಲಿದೆ. ಏ.4ರಂದು ರಾತ್ರಿ 9.30 ಗಂಟೆಗೆ ಖವ್ವಾಲಿ ಕಾರ್ಯಕ್ರಮಗಳು ನಡೆಯಲಿವೆ ಏ.5ರಂದು ಕುಸ್ತಿ ಸ್ಪರ್ಧೆಗಳು ಜರುಗಲಿವೆ.

Share this article