ನೀರಾವರಿ ಅನುಷ್ಠಾನ ಸಮಿತಿಯಿಂದ ಸಚಿವ ಸುಧಾಕರ್, ಶಾಸಕದ್ವಯರಿಗೆ ಪತ್ರ ಹಸ್ತಾಂತರಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿನ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್,ಶಾಸಕರಾದ ಟಿ.ರಘುಮೂರ್ತಿ, ವೀರೇಂದ್ರ ಪಪ್ಪಿ ಅವರಿಗೆ ಈ ಸಂಬಂಧ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯದ ಪತ್ರ ಹಸ್ತಾಂತರಿಸಿ ಬಜೆಟ್ ನಲ್ಲಿ ಹಣ ಮೀಸಲಿಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವಂತೆ ಕೋರಲಾಯಿತು.
ಭದ್ರಾ ಮೇಲ್ದಂಡೆ ಕಾಮಗಾರಿ ಅನುದಾನ ಕೊರತೆ ಕಾರಣಕ್ಕೆಆಮೆಗತಿಯಲ್ಲಿ ಸಾಗಿದೆ.ಯೋಜನೆ ಆರಂಭಿಸಿದಾಗ ಇದ್ದ ಉತ್ಸಾಹ ಹಾಗೆಯೇ ಮುಂದುವರಿದಿದ್ದರೆ ಇಷ್ಟೊತ್ತಿಗೆ ಕಾಮಗಾರಿ ಪೂರ್ಣಗೊಂಡು ಬಯಲು ಸೀಮೆ ರೈತರ ಉತ್ಪಾದನಾ ಸಾಮರ್ಥ್ಯ ಮತ್ತಷ್ಟು ಇಮ್ಮಡಿಯಾಗುತ್ತಿತ್ತು. ಆಳುವ ಸರ್ಕಾರಗಳ ಇಚ್ಚಾಶಕ್ತಿ ಕೊರತೆ ಕಾರಣಕ್ಕೆ ಸಾಧ್ಯವಾಗದೇ ಹೋಗಿದೆ. 2018 ರ ದರಪಟ್ಟಿ ಅನುಸಾರ ಭದ್ರಾ ಮೇಲ್ದಂಡೆ ಕಾಮಗಾರಿಯ 21 ಸಾವಿರ ಕೋಟಿ ರು. ವೆಚ್ಚಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ದರಪಟ್ಟಿ ಪರಿಷ್ಕರಣೆ ಹಂತದಲ್ಲಿದ್ದು ಪರಿಷ್ಕೃತವಾದಲ್ಲಿ ಯೋಜನಾ ವೆಚ್ಚಕ್ಕೆ ಮತ್ತೆ ಸಾವಿರಾರು ಕೋಟಿ ರು. ಸೇರ್ಪಡೆಯಾಗುತ್ತದೆ. ಸಾಲದೆಂಬಂತೆ ಅರ್ಧಕ್ಕೆ ನಿಂತ ಕಾಮಗಾರಿಗಳು ದೀರ್ಘಕಾಲದವರೆಗೆ ಗುಣಮಟ್ಟ ಕಾಯ್ದುಕೊಳ್ಳುತ್ತವೆ ಎಂಬ ಗ್ಯಾರಂಟಿ ಇಲ್ಲವಾಗಿದೆ. ಬಿಸಿಲಿಗೆ ಬಾಯ್ದೆರೆದಿರುವ ಕಾಲುವೆಗಳಲ್ಲಿ ನೀರು ತುಂಬದಿದ್ದರೆ ಹಾಳಾಗುವ ಸಾಧ್ಯತೆಗಳೇ ಹೆಚ್ಚು ಎಂದು ಹಕ್ಕೊತ್ತಾಯ ಪತ್ರದಲ್ಲಿ ತಿಳಿಸಲಾಗಿದೆ.
ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಈಗಾಗಲೇ ಜಲಶಕ್ತಿ ರಾಜ್ಯ ಸಚಿವ ಹಾಗೂ ಭದ್ರಾ ಮೇಲ್ದಂಡೆ ಯೋಜನಾ ವ್ಯಾಪ್ತಿ ಜಿಲ್ಲೆ ಪ್ರತಿನಿಧಿಸುವ ವಿ.ಸೋಮಣ್ಣ ಅವರಿಗೂ ಮನವಿ ಮಾಡಿದೆ. ಕಳೆದ ಗಾಂಧಿ ಜಯಂತಿಯಂದು ಚಿತ್ರದುರ್ಗಕ್ಕೆ ಆಗಮಿಸಿದ್ದ ಸಚಿವ ವಿ.ಸೋಮಣ್ಣ 45 ದಿನದ ಒಳಗಾಗಿ ಮೊದಲನೇ ಕಂತು ಬಿಡುಗಡೆ ಮಾಡಿಸುವುದಾಗಿ ಹೇಳಿ ಹೋದವರು ಮತ್ತೆ ಹಿಂತಿರುಗಿ ನೋಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಪದೇ ಪದೆ ವಂಚನೆ, ದ್ರೋಹಕ್ಕೆ ಒಳಗಾಗುತ್ತಿದೆ. ರಾಜ್ಯ ಸರ್ಕಾರ ಕೂಡಾ ಇದೇ ಹಾದಿ ಹಿಡಿಯಬಾರದೆಂಬುದು ಸಮಿತಿ ಎಚ್ಚರಿಸಿದೆ.
ಹಕ್ಕೊತ್ತಾಯ ಪತ್ರ ಸ್ವೀಕರಿಸಿ ಮಾತನಾಡಿದ ಸಚಿವ ಡಿ.ಸುಧಾಕರ್, ಜಿಲ್ಲೆಯ ಎಲ್ಲ ಶಾಸಕರು ಈಗಾಗಲೇ ಸಿಎಂ ಭೇಟಿ ಮಾಡಿ ಬಾಕಿ ಬಿಲ್ ಹೊರತು ಪಡಿಸಿ 3 ಸಾವಿರ ಕೋಟಿ ರು. ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿದ್ದೇವೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನೀರಾವರಿ ಅನುಷ್ಠಾನ ಹೋರಾಟ ಸಮಿತಿಯವರು ಅನುದಾನ ಬಿಡುಗಡೆಗೆ ಸಂಸದರ ಮೇಲೆ ಒತ್ತಡ ಹಾಕುವಂತೆ ಸಲಹೆ ಮಾಡಿದರು.
ಶಾಸಕ ವಿರೇಂದ್ರ ಪಪ್ಪಿ ಮಾತನಾಡಿ, ಭದ್ರಾ ಕಾಮಗಾರಿ ಪೂರ್ಣಗೊಳ್ಳುವ ತನಕ ಜನರ ಹೋರಾಟದ ಪರವಾಗಿ ನಿಲ್ಲುವುದಾಗಿ ಹೇಳಿದರು.