ಪ್ರಸ್ತುತ ಮನುಷ್ಯನ ಮನಸ್ಸು ವಿಕಾಸಗೊಳ್ಳುತ್ತಿಲ್ಲ, ವಿಕೃತಗೊಳ್ಳುತ್ತಿದೆ: ಪ್ರೊ. ರಾಮಪ್ಪಗೌಡ

KannadaprabhaNewsNetwork | Published : Feb 18, 2025 12:30 AM

ಸಾರಾಂಶ

ಮನುಷ್ಯ ಆರ್ಥಿಕ ಬಲಾಢ್ಯನಾಗಿ, ವಿದ್ಯಾವಂತನಾಗಿದ್ದರೂ ಸಹ, ಪ್ರಸ್ತುತ ಆತನ ಮನಸ್ಸು ವಿಕಾಸಗೊಳ್ಳದೆ ವಿಕೃತಗೊಳ್ಳುತ್ತಿದೆ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ.ರಾಮಪ್ಪಗೌಡ ಕಳವಳ ವ್ಯಕ್ತಪಡಿಸಿದರು.

ತಿಂಗಳ ಕಾರ್ಯಕ್ರಮ । ಸಾಹಿತ್ಯ ಹುಣ್ಣಿಮೆಯ 234ನೇ ಸಮಾರಂಭ । ಹವ್ಯಾಸಿ ಗಾಯಕರಿಂದ ಹಾಡು, ಭಜನೆ । ಕವನ ವಾಚನ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮನುಷ್ಯ ಆರ್ಥಿಕ ಬಲಾಢ್ಯನಾಗಿ, ವಿದ್ಯಾವಂತನಾಗಿದ್ದರೂ ಸಹ, ಪ್ರಸ್ತುತ ಆತನ ಮನಸ್ಸು ವಿಕಾಸಗೊಳ್ಳದೆ ವಿಕೃತಗೊಳ್ಳುತ್ತಿದೆ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ.ರಾಮಪ್ಪಗೌಡ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಸ್ವಾಮಿ ವಿವೇಕಾನಂದ ಬಡಾವಣೆ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ಸಾಹಿತ್ಯ ಹುಣ್ಣಿಮೆಯ 234ನೇ ತಿಂಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಜ್ಜನರು, ಸತ್ಪ್ರಜೆಗಳನ್ನು ರೂಪಿಸುವ ಮನಸ್ಸು ಕಟ್ಟುವ ಕೆಲಸ ಆಗಬೇಕು. ನೂರಾರು ವಿದ್ಯಾಸಂಸ್ಥೆಗಳಿವೆ, ವಿಶ್ವವಿದ್ಯಾಲಯಗಳಿವೆ. ಅವುಗಳ ಕೆಲಸವನ್ನು ಇಂತಹ ಸಂಸ್ಥೆಗಳು ಮಾಡುತ್ತಿವೆ. ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಎಲ್ಲಾ ಜಂಜಾಟ ಮರೆತು ಹಾಡು, ಸಂಗೀತ ಸಾಹಿತ್ಯ ಸಹವಾಸದಿಂದ ಉಲ್ಲಾಸಿತರಾಗಿದ್ದೇವೆ. ನಾವೆಲ್ಲರೂ ಒಂದೇ, ಇಲ್ಲಿ ಯಾವುದೇ ಭೇದವಿಲ್ಲದೆ ಸೇರಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಮಂಜುನಾಥ, ಸಾಹಿತ್ಯ ಹುಣ್ಣಿಮೆ ಜನರ ಬಳಿಹೋಗಿ ಸಾಹಿತ್ಯ, ಸಂಗೀತದ ಮೂಲಕ ಮನಸ್ಸು ಕಟ್ಟುವ ಉದ್ದೇಶ ಹೊಂದಿದೆ. ಇಪ್ಪತ್ತು ವರ್ಷಗಳ ಹಿಂದೆ ಆರಂಭಿಸಿದ ಈ ಕಾರ್ಯಕ್ರಮ ಸಾವಿರಾರು ಪ್ರತಿಭೆಗಳಿಗೆ ವೇದಿಕೆಯಾಗಿದೆ. ನಮ್ಮ ಜಿಲ್ಲೆಯ ಸಾಕ್ಷಿ ಪ್ರಜ್ಞೆಯಾಗಿದೆ. ಅದು ಈ ನೆಲದ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹೇಳಿದರು.

ಯುವ ಮುಖಂಡ ಜಿ.ಡಿ.ಮಂಜುನಾಥ ಮಾತನಾಡಿ, ಜನರಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸಲು ನಿರಂತರ ಪ್ರಯತ್ನವಾಗಿದೆ. ಕರ್ನಾಟಕ ಜಾನಪದ ಪರಿಷತ್ತು ಕಟ್ಟಿ ಬೆಳೆಸುವ ಮೂಲಕ ಜನಪದ ಕ್ಷೇತ್ರಕ್ಕೆ ಅವರ ಸಂಘಟನಾ ಶಕ್ತಿ ಕೊಡುಗೆಯಾಗಿದೆ ಎಂದರು.

ಪೋಲಿಸ್ ನಿವಾಸಿಗಳ ಸಂಘದ ಅಧ್ಯಕ್ಷ ಟಿ. ಕುಪ್ಪಯ್ಯ, ತಂದೆ ತಾಯಿ ಗಳು ಕನ್ನಡ ಪ್ರೇಮ ಹೊಸ ತಲೆಮಾರಿನ ಇಂಗ್ಲಿಷ್ ವ್ಯಾಮೋಹದಿಂದ ನಮ್ಮ ಸಂಸ್ಕೃತಿಯನ್ನು ನಾವೆ ಕಡೆಗಣಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಅಧ್ಯಕ್ಷ ಶಾಂತಾಶೆಟ್ಟಿ, ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳಸಲು ಹಿರಿಯರಾದ ನಾವೇ ಜವಾಬ್ದಾರಿ ಹೊರಬೇಕಿದೆ ಎಂದರು.

ತುರುವನೂರು ಮಲ್ಲಿಕಾರ್ಜುನ ಸೋರುತಿಹುದು ಮನೆಯ ಮಾಳಿಗೆ ಕಥೆ ಹೇಳಿದರು. ಹವ್ಯಾಸಿ ಗಾಯಕರ ಬಳಗದ ಬಸವರಾಜ್ ಕೆ. ಪಿ. ತಂಡದ ಆರ್ಮಿ ಬಸವರಾಜ್ ನಾಯ್ಕ, ಭಾಗ್ಯ ನಂಜಪ್ಪ, ಪ್ರತಿಮಾಗೌಡ, ಸುರೇಶ್ ಶೇಟ್ ಹಾಡು ಹೇಳಿದರು. ಶಾರದಾ ಶಂಕರ ಭಜನಾಮಂಡಳಿ ಸದಸ್ಯರು ಭಜನೆ ಹಾಡಿದರು.

ಕವಿಗಳಾದ ಪ್ರೊ. ಸತ್ಯನಾರಾಯಣ ಹನಿಗವನ, ಎಂ. ನವೀನ ಕುಮಾರ್, ಅನಿತಾಸೂರ್ಯ, ಭಾರತಿಬಾಯಿ, ಎಂ. ಬಾಲರಾಜ್, ವಾಗೀಶ್ ಆರಾಧ್ಯ ಅವರು ಕವನ ವಾಚಿಸಿದರು. ಕುವೆಂಪು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು, ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸುಜಾತಾ ಅವರು ಪ್ರಾರ್ಥನೆ ಹಾಡಿದರು. ಡಿ.ಗಣೇಶ್ ಸ್ವಾಗತಿಸಿದರು. ಕೆ.ಎಸ್.ಮಂಜಪ್ಪ ನಿರೂಪಿಸಿದರು. ಭೈರಾಪುರ ಶಿವಪ್ಪಗೌಡ ವಂದಿಸಿದರು, ಅರ್ಚಕ ಸಂದೇಶ ಭಟ್ ಇದ್ದರು.

Share this article