ಸುಗ್ಗಿಯ ವೇಳೆ ಕೂಲಿ ಆಳುಗಳು ಸಿಗದೇ ಹೊಲದಲ್ಲೇ ಉಳಿದ ಹತ್ತಿ

KannadaprabhaNewsNetwork |  
Published : Mar 01, 2025, 01:06 AM IST
ಫೋಟೋ ಇದೆ. | Kannada Prabha

ಸಾರಾಂಶ

ಬೆಳೆಗಾರರಿಗೆ ಸಮಸ್ಯೆ, ಕಾರ್ಮಿಕರ ಕೊರತೆ, ಬೆಳೆಗೆ ಮಳೆ ಆತಂಕ, ಕೂಲಿ ಆಳುಗಳ ತೀವ್ರ ಸಮಸ್ಯೆ

ಶಿವಾನಂದ ಅಂಗಡಿ

ಹುಬ್ಬಳ್ಳಿ: ಕಡಲೆಕಾಳು, ಗೋದಿ, ಜೋಳದ ಸುಗ್ಗಿ ಮುಗಿಯುತ್ತಾ ಬಂದಿದೆ. ಆದರೆ ಕೂಲಿ ಆಳುಗಳ ಸಮಸ್ಯೆಯಿಂದಾಗಿ ಹತ್ತಿ ಬಿಡಿಸಲು ಆಗದೇ ಧಾರವಾಡ, ಗದಗ ಬೆಳೆಗಾರರು ತೀವ್ರ ಚಿಂತೆಗೀಡಾಗಿದ್ದಾರೆ.

ಗದಗ-ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ-67ರಲ್ಲಿ ಹೊರಟರೆ ಸಾಕು, ಅಲ್ಲಲ್ಲಿ ಹತ್ತಿ ಹೊಲಗಳಲ್ಲಿ ಹತ್ತಿ ಹಾಗೆ ಇದೆ. ಅರೇ ಸುಗ್ಗಿ ಮುಗಿಯುತ್ತ ಬಂತು, ಹತ್ತಿ ಬಿಡಿಸುವುದು ಇನ್ನೂ ಮುಗಿದಿಲ್ಲವೇ? ಎಂಬ ಪ್ರಶ್ನೆ ಕೃಷಿಕರಲ್ಲಿ ಮೂಡದೇ ಇರಲಾರದು.

ಸೆಪ್ಟೆಂಬರ್‌ನಲ್ಲಿಯೇ ಹತ್ತಿ ಸುಗ್ಗಿ ಆರಂಭವಾಗುತ್ತದೆ. ಹೀಗೆ ಹತ್ತಿ ಬರಲು ಆರಂಭವಾದ ಮೇಲೆ ಒಂದೇ ಬೆಳೆಯಲ್ಲಿಯೇ ಮೂರ್ನಾಲ್ಕು ಬಾರಿ ಹತ್ತಿ ಅರಳುತ್ತದೆ. ವಿಶೇಷವಾಗಿ ನಲವಡಿ, ಅಣ್ಣಿಗೇರಿಯಂಥ ಪ್ರದೇಶಗಳಲ್ಲಿ ಹೆಚ್ಚು ಜಮೀನು ಹೊಂದಿದ ದೊಡ್ಡ ಹಿಡುವಳಿಗಾರರಿಗೆ ಆಳುಗಳ ಸಿಗುತ್ತಿಲ್ಲ. ಹತ್ತಾರು ಕೂರಿಗೆ ಹೊಲಗಳಲ್ಲಿ ಹತ್ತಿ ಹಾಗೆ ಇದೆ. ಈಗ ಗೋದಿ, ಜೋಳ, ಕಡಲೆ ಸುಗ್ಗಿ ಏಕಕಾಲದಲ್ಲಿ ಆರಂಭವಾಗಿರುವುದರಿಂದ ಕೊನೆಯ ಹಂತದ ಹತ್ತಿ ಬಿಡಿಸುವುದಕ್ಕೆ ಕೂಲಿ ಆಳುಗಳ ಕೊರತೆಯಿಂದಾಗಿ ವಿಳಂಬವಾಗುತ್ತಿದ್ದು, ಬೆಳೆಗಾರರಿಗೆ ಆತಂಕವಾಗುತ್ತಿದೆ.

ಭಾರತ ಹುಣ್ಣಿಮೆ ಹಿನ್ನೆಲೆಯಲ್ಲಿ ಮೈಲಾರ, ಯಲ್ಲಮ್ಮನಗುಡ್ಡ, ಉಳವಿಯಲ್ಲಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವಗಳು ನೆರವೇರಿದ್ದು, ಕೂಲಿಕಾರ್ಮಿಕರ ಕುಟುಂಬ ಸದಸ್ಯರು ಎಲ್ಲೆಡೆ ವಾರಗಟ್ಟಲೇ ಜಾತ್ರೆಗೆ ತೆರಳಿದ್ದಾರೆ. ಹೀಗಾಗಿ ಕೂಲಿ ಆಳುಗಳ ತೀವ್ರ ಸಮಸ್ಯೆಯಾಗಿದೆ ಎನ್ನುತ್ತಾರೆ ನಲವಡಿಯ ಹತ್ತಿ ಬೆಳೆಗಾರರು.

ಬಿಳಿ ಬಂಗಾರಕ್ಕೆ ಮಳೆ ಆತಂಕ

ಬಿಸಿಲಿನ ತಾಪಕ್ಕೆ ಅಲ್ಲಲ್ಲಿ ಅಕಾಲಿಕ ಮಳೆ ಆಗುತ್ತಿದ್ದು, ಬಿಳಿ ಬಂಗಾರದ ಖ್ಯಾತಿಯ ಹತ್ತಿ ಮಳೆಗೆ ತೊಯ್ದರೆ ಮಣ್ಣು ಪಾಲಾಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರುತ್ತದೆಯೋ ಎಂಬ ಭಯ ಶುರುವಾಗಿದೆ.

ಧಾರವಾಡ, ಗದಗ ಜಿಲ್ಲೆಯಲ್ಲಿ ಈ ಬಾರಿ ಹತ್ತಿ ಬಂಪರ್‌ ಇಳುವರಿ ಬಂದಿದ್ದು, ಕೇಂದ್ರ ಸರ್ಕಾರದ ಆಧೀನ ಸಂಸ್ಥೆ ಭಾರತಿ ಹತ್ತಿ ನಿಗಮದವರು ಕಾಟನ್ ಇಂಡಸ್ಟ್ರೀಜ್‌ಗಳ ಮೂಲಕ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಸಿದ್ದಾರೆ. ಹೀಗಾಗಿ ಈಗಾಗಲೇ 8ರಿಂದ 10 ಕ್ವಿಂಟಲ್‌ ಹತ್ತಿಯನ್ನು ರೈತರು ಮಾರಿದ್ದಾರೆ. ಇನ್ನುಳಿದ ಎರಡ್ಮೂರು ಕ್ವಿಂಟಲ್‌ ಹತ್ತಿ ಬಿಡಿಸಿ ಮನೆಗೆ ತರುವುದು ಬೆಳೆಗಾರರಿಗೆ ತೊಂದರೆಯಾಗಿದೆ.

ರಾಣಿಬೆನ್ನೂರು ಹೊರತುಪಡಿಸಿ ಈಗ ಬಹುತೇಕ ಎಪಿಎಂಸಿಗಳಲ್ಲಿ ಹತ್ತಿ ಟೆಂಡರ್‌ ನಡೆಯುತ್ತಿಲ್ಲ. ಬೆಂಬಲ ಬೆಲೆ ಹತ್ತಿ ಖರೀದಿಯೂ ಈಗ ಬಂದ್‌ ಆಗಿರುವುದರಿಂದ ಖಾಸಗಿ ವ್ಯಾಪಾರಸ್ಥರಿಗೆ ಹತ್ತಿ ಮಾರುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಬೆಳೆಗಾರರು.ಆಳುಗಳ ಸಮಸ್ಯೆ

ಕಡಲೆಕಾಳು, ಗೋದಿ, ಜೋಳದ ಸುಗ್ಗಿ ಹಿನ್ನೆಲೆಯಲ್ಲಿ ನಾವು ಹತ್ತಿ ಬಿಡಿಸಲು ಆಗಿಲ್ಲ. ರಸ್ತೆಯಲ್ಲಿ ಹೋಗುವವರೆಲ್ಲ ಕೇಳುತ್ತಿದ್ದಾರೆ. ಕೂಲಿ ಆಳುಗಳ ಸಮಸ್ಯೆಯಿಂದಲೂ ಹತ್ತಿ ಸುಗ್ಗಿ ಪೂರ್ಣಗೊಳಿಸಲು ಆಗಿಲ್ಲ.

- ಹನುಮಂತ ಮಾಡೊಳ್ಳಿ, ನಲವಡಿ ಹತ್ತಿ ಬೆಳೆಗಾರಬೆಂಬಲ ಬೆಲೆ ಬಂದ್

ಎರಡನೇ ದರ್ಜೆಯ ಹತ್ತಿಯನ್ನು ಭಾರತೀಯ ಹತ್ತಿ ನಿಗಮದವರು ಖರೀದಿಸುವುದಿಲ್ಲ. ಹೀಗಾಗಿ ಬೆಂಬಲ ಖರೀದಿ ಪ್ರಕ್ರಿಯೆ ಬಂದ್ ಆಗಿದೆ. ಕಾಟನ್‌ ಇಂಡಸ್ಟ್ರೀಯವರು ಹತ್ತಿ ಖರೀದಿಸುತ್ತಿದ್ದು, ಕ್ವಿಂಟಲ್‌ ₹6100ರಿಂದ 6400 ವರೆಗೆ ಮಾರಾಟವಾಗುತ್ತಿದೆ.

- ರಮೇಶ ಅಂಗಡಿ, ವೀರಭದ್ರೇಶ್ವರ ಕಾಟನ್‌ ಇಂಡಸ್ಟ್ರೀಜ್‌ ಮಾಲೀಕ ಅಣ್ಣಿಗೇರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ