ಕನ್ನಡಪ್ರಭ ವಾರ್ತೆ ಅಥಣಿ
ನೆರೆಯ ಮಹಾರಾಷ್ಟ್ರದ ಪುನಾ ಪುರಸಭೆಯೊಂದಿಗೆ ಸ್ಥಾಪನೆಯಾದ ಈ ಪುರಸಭೆ ಮೇಲ್ದರ್ಜೆಗೆ ಏರಿಸಲು ಶತಮಾನವೇ ಕಳೆಯಬೇಕಾಯಿತು. ರಾಜ್ಯ ಸರ್ಕಾರ ಇತ್ತೀಚೆಗೆ ಅನೇಕ ಪುರಸಭೆ, ಪಟ್ಟಣ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಿದ್ದು, ಅವುಗಳ ಜೊತೆಗೆ ಅಥಣಿ ಪುರಸಭೆ ಹೆಸರು ಇಲ್ಲದಿರುವುದು ಈ ನಗರ ಸೇವಕರಿಗೆ ಮತ್ತು ನಾಗರಿಕರಿಗೆ ಬೇಸರ ತಂದಿತ್ತು. ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಶಾಸಕ ಲಕ್ಷ್ಮಣ ಸವದಿ ಅವರು ತಿಳಿಸುತ್ತಿದ್ದಂತೆ ಯುವ ಮುಖಂಡ ಶಿವಕುಮಾರ ಸವದಿ, ಪುರಸಭೆ ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ ನೇತೃತ್ವದಲ್ಲಿ ಪುರಸಭೆಯ ಸದಸ್ಯರು ಅಂಬೇಡ್ಕರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು
ಈ ಸಂದರ್ಭದಲ್ಲಿ ಯುವ ಮುಖಂಡ ಶಿವಕುಮಾರ ಸವದಿ ಮಾತನಾಡಿ, ಅಥಣಿ ಪುರಸಭೆ ನಗರ ಸಭೆಯಾಗಿ ಈ ಮೊದಲೇ ಮೇಲ್ದರ್ಜೆಗೇರಬೇಕಿತ್ತು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಹಿನ್ನಡೆಯಾಗಿತ್ತು. ಅಥಣಿ ಜನರು ಬಹುದಿನಗಳ ಬೇಡಿಕೆಯನ್ನು ಶಾಸಕರಾದ ಲಕ್ಷ್ಮಣ ಸವದಿ ಪ್ರಯತ್ನದ ಫಲವಾಗಿ ಈಡೇರಿದೆ ಪುರಸಭೆಯಿಂದ ನಗರ ಸಭೆಯಾಗಿ ಮೇಲ್ದರ್ಜೆಗೇರಿದ್ದು, ನಮಗೆಲ್ಲರಿಗೂ ಸಂತೋಷ ತಂದಿದೆ ಎಂದರು.ಶುಕ್ರವಾರ ಮಧ್ಯಾಹ್ನ ಪುರಸಭೆ ಕಚೇರಿ ಮುಂದೆ ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿಯ ಅಧ್ಯಕ್ಷ ದತ್ತಾ ವಾಸ್ಟರ ಸೇರಿದಂತೆ ಅನೇಕ ಪುರಸಭೆ ಸದಸ್ಯರು ಪೌರಕಾರ್ಮಿಕರಿಗೆ ಮತ್ತು ಪುರಸಭೆ ಸಿಬ್ಬಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು.ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ ಮಾತನಾಡಿ, 1853 ರಲ್ಲಿ ಕರ್ನಾಟಕದ ಮೊದಲ ಪುರಸಭೆಯಾಗಿ ಸ್ಥಾಪನೆಗೊಂಡಿದ್ದ ಅಥಣಿ ಪುರಸಭೆಯು ಇಂದು ನಗರ ಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿರುವ ವಿಷಯ ತಿಳಿದು ಸಂತೋಷವಾಗಿದೆ ಎಂದು ಅಭಿನಂದಿಸಿದರು.
-------
ಅಥಣಿ ಶಾಸಕರ ಪ್ರಯತ್ನದಿಂದ ಪುರಸಭೆ ಮೇಲ್ದರ್ಜೆಗೇರಿರುವುದು ಸಂತಸ ತಂದಿದೆ. 27 ವಾರ್ಡ್‌ಗಳಲ್ಲಿ ಮತ್ತು ಅನೇಕ ಹೊಸ ಬಡಾವಣೆಗಳನ್ನು ಹೊಂದಿರುವ ಅಥಣಿ ಪಟ್ಟಣ ವಿಸ್ತಾರವಾಗಿ ಬೆಳೆಯುತ್ತಿದೆ. ಇಲ್ಲಿ ನಗರಸಭೆ ಆಗುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ಮತ್ತು ಹೆಚ್ಚಿನ ಸಿಬ್ಬಂದಿ ಬರುವುದರಿಂದ ಸಾರ್ವಜನಿಕ ಸೇವೆಗಳನ್ನು ತ್ವರಿತಗತಿಯಲ್ಲಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.