ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಶೀಘ್ರ ಮೂರು ಹೊಸ ಶಾಖೆ: ಚಿತ್ತರಂಜನ್‌ ಬೋಳಾರ್‌

KannadaprabhaNewsNetwork | Published : Dec 31, 2023 1:30 AM

ಸಾರಾಂಶ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೊಟ್ಟಾರ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆ ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಕೊಟ್ಟಾರ ಶಾಖೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರುಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೊಟ್ಟಾರ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆ ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಕೊಟ್ಟಾರ ಶಾಖೆಯಲ್ಲಿ ನಡೆಯಿತು. ಸಂಘದ ಸದಸ್ಯರಾದ ಜಯರಾಮ್ ಕಾರಂದೂರು, ರಮಣಿ ಕೆ, ಪಿ. ಸುರೇಶ್, ಬಿ. ಜಯರಾಮ್, ಶುಭ ರಾಜೇಂದ್ರ, ಎಚ್. ಜನಾರ್ದನ ಗಡಿಯಾರ್ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು.ಸಂಘದ ಸದಸ್ಯೆ ಜಯರಾಮ್ ಕಾರಂದೂರು, ೨೦೨೩ ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಸಂಘದ ಅಧ್ಯಕ್ಷರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ನಮ್ಮ ಸಹಕಾರಿ ಸಂಘ ೨,೦೦೦ ಕೋಟಿ ರು. ವ್ಯವಹಾರ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ೩,೦೦೦ ಕೋಟಿ ರು. ವ್ಯವಹಾರ ಹೊಂದುವ ಗುರಿ ಹೊಂದಿದೆ. ಸಂಘ ಶೀಘ್ರದಲ್ಲಿ ೫ ಹೊಸ ಶಾಖೆಗಳನ್ನು ತೆರೆಯಲಿದೆ. ಸಂಘ ತನ್ನ ಶಾಖೆಯನ್ನು ಸ್ವಂತ ಕಟ್ಟಡದಲ್ಲಿ ಪ್ರಾರಂಭಿಸುವ ಯೋಜನೆಯನ್ನು ಹೊಂದಿದೆ. ಶಾಖೆಯಿಂದ ಹೆಚ್ಚಿನ ಠೇವಣಿಯನ್ನು ಸಂಗ್ರಹಿಸಿದ್ದು, ಆ ಠೇವಣಿಯಿಂದ ಹೆಚ್ಚಿನ ಸಾಲವನ್ನು ನೀಡಲು ಸಾಧ್ಯವಾಗಿದೆ ಎಂದರು.ಸಂಘದ ಪ್ರತಿ ಶಾಖೆಗಳಲ್ಲೂ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಕೊಟ್ಟಾರ ಪರಿಸರದಲ್ಲೂ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು. ಸಂಘದಲ್ಲಿ ಲಭ್ಯವಿರುವ ವಿಮಾ ಸೇವೆ, ಭವಿಷ್ಯ ಸುರಕ್ಷಾ ಯೋಜನೆಯ ಜೊತೆಗೆ ಎಲ್ಲ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು. ಗ್ರಾಹಕರ ಸಲಹೆ ಸಹಕಾರವನ್ನು ಸದಾ ಬಯಸುತ್ತಾ ಸಂಘವು ಇನ್ನಷ್ಟು ಎತ್ತರಕ್ಕೆ ಏರಲು ಇನ್ನು ಮುಂದೆಯೂ ಗಾಹಕರು ಕೈ ಜೋಡಿಸುವಂತೆ ಹೇಳಿದರು. ಜನವರಿ ೨೮ ಕ್ಕೆ ನಡೆಯುವ ಸಂಘದ ವಾರ್ಷಿಕೋತ್ಸವಕ್ಕೆ ಎಲ್ಲ ಗ್ರಾಹಕರನ್ನು ಆಮಂತ್ರಿಸಿದರು.ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ, ನಿರ್ದೇಶಕರಾದ ಸೀತಾರಾಮ್ ಎನ್, ಚಂದ್ರಹಾಸ್ ಮರೋಳಿ, ಬಿ.ಪಿ. ದಿವಾಕರ್, ಗೋಪಾಲ್ ಮತ್ತಿತರರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಸ್ವಾಗತಿಸಿದರು. ಶಾಖಾ ಸಿಬ್ಬಂದಿ ಪ್ರತೀಕ್ಷಾ ವಂದಿಸಿದರು. ಕೋಶಾಧಿಕಾರಿ ಸುಮನಾ ನಿರೂಪಿಸಿದರು.

Share this article