ಕನ್ನಡಪ್ರಭ ವಾರ್ತೆ ಅರಸೀಕೆರೆ
ಶಾಸಕರು ಮತ್ತು ನಗರಸಭಾ ಅಧ್ಯಕ್ಷ ಸಮೀವುಲ್ಲಾ ಅವರ ಕುತಂತ್ರದಿಂದ ಪ್ರಕರಣ ದಾಖಲಿಸಲಾಗಿದ್ದು, ಇದನ್ನು ವಿರೋಧಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಭಾನುವಾರ ರಾತ್ರಿಯಿಂದ ಅಹೋರಾತ್ರಿ ಧರಣಿ ನಡೆಸಿದರು. ಡಿವೈಎಸ್ಪಿ ಲೋಕೇಶ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಐದು ದಿನಗಳಲ್ಲಿ ಪ್ರಕರಣವನ್ನು ಇತ್ಯರ್ಥ ಪಡಿಸುವುದಾಗಿ ಆಶ್ವಾಸನೆ ನೀಡಿದ ನಂತರ ಪ್ರತಿಭಟನೆಯನ್ನು ಸೋಮವಾರ ಸಂಜೆ ಹಿಂಪಡೆಯಲಾಯಿತು.
ಎನ್. ಆರ್. ಸಂತೋಷ್ ಮತ್ತು ಮಾಜಿ ನಗರಸಭಾ ಅಧ್ಯಕ್ಷ ಹಾಲಿ ಸದಸ್ಯ ಗಿರೀಶ್ ನೇತತ್ವದಲ್ಲಿ ನಗರಸಭೆಯಲ್ಲಿನ ಭ್ರಷ್ಟಾಚಾರ ವಿರೋಧಿಸಿ ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರ ಬೆಂಬಲಿತರು ಹಾಗೂ ಎನ್. ಆರ್ ಸಂತೋಷ್ ಬೆಂಬಲಿತರ ನಡುವೆ ವಾಗ್ವಾದ ನಡೆದಿತ್ತು, ಈ ಹಿನ್ನೆಲೆಯಲ್ಲಿ ಮನೋಹರ್ ನಮ್ಮ ಹಾಗೂ 13 ಜನರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.ಎನ್. ಆರ್. ಸಂತೋಷ್ ಮಾಧ್ಯಮದವರೊಂದಿಗೆ ಮಾತನಾಡಿ, ಘಟನೆ ನಡೆದು 7 ದಿವಸದ ನಂತರ ದೂರು ನೀಡಲಾಗಿದೆ. ಏಕೆ ಈ ಮೊದಲು ಕೊಡಲಿಲ್ಲ ಎಂದು ಪ್ರಶ್ನಿಸಿದರು. ಶಾಸಕರ ಮತ್ತು ನಗರಸಭಾ ಅಧ್ಯಕ್ಷರ ಬೆದರಿಕೆಗೆ ನಾನು ಜಗ್ಗುವನಲ್ಲ, ನ್ಯಾಯಕ್ಕಾಗಿ ಹೋರಾಡುತ್ತೇನೆ ನನಗೂ ಬೆಂಬಲಿತರು ಇದ್ದಾರೆ ಎಂದರು. ತಾಲೂಕಿನಲ್ಲಿ ಹಗರಣಗಳು, ಕಳಪೆ ಕಾಮಗಾರಿಗಳು ಹಾಗೂ ನಗರಸಭೆಯ ಅಖಂಡ ಭ್ರಷ್ಟಾಚಾರ ಬಯಲು ಮಾಡುತ್ತಿರುವ ನನ್ನ ಹಾಗೂ ಬೆಂಬಲಿಗರ ಮೇಲೆ ಕೇಸ್ ದಾಖಲಿಸಿ ನನ್ನ ದನಿಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ.
ಹಗರಣ ಹಾಗೂ ಭ್ರಷ್ಟಾಚಾರದ ಮಾಹಿತಿ ಕೇಳಿದರೆ ಅಧಿಕಾರಿಗಳು ತಬ್ಬಿಬ್ಬು ಆಗುತ್ತಿದ್ದಾರೆ. ನಮಗೆ ಸಮಯವೇ ನೀಡುತ್ತಿಲ್ಲ. ಇದರ ಬಗ್ಗೆ ಲೋಕಾಯುಕ್ತಗೆ ದೂರು ನೀಡಲಾಗಿದೆ. ನಾಳೆಯಿಂದ ಪ್ರತಿ ಹಳ್ಳಿಹಳ್ಳಿಗಳಿಗೆ ಪಾದಯಾತ್ರೆ ಸಾಗಿ ದಲಿತರ ಮನೆಯಲ್ಲಿ ಊಟ ಸೇವಿಸಿ ನ್ಯಾಯ ಅಲ್ಲೇ ಕೇಳುತ್ತೇವೆ. ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಜೊತೆಗೂಡಿ ಗೂಂಡಾ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಗರಸಭೆ ಉಪಾಧ್ಯಕ್ಷ ಮನೋಹರ್ ಮೇಸ್ತ್ರೀ ನೀಡಿದ ಜಾತಿ ನಿಂದನೆ ಪ್ರಕರಣ ದೂರಿನ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಸೇರಿ ಒಟ್ಟು ೧೪ ಬೆಂಬಲಿಗರ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಎ ೧ ಆರೋಪಿ ಎನ್.ಆರ್.ಸಂತೋಷ್, ಉಳಿದಂತೆ ಶಿವು, ಶೇಖರ್ ಯಾದವ್, ದಂಡೂರು ರವಿ, ಮೇಲಗಿರಿಯಪ್ಪ, ಜಯರಾಂ, ಎಸ್,ಎಮ್, ಎಸ್ ಕುಮಾರ್, ಪವನ ,ಸುಮಿತ್, ಅಭಿ ,ತೇಜಾ, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ಹರ್ಷವರ್ಧನ ಮತ್ತು ಉಮೇಶ್ ಬೋವಿ ವಿರುದ್ಧ ಕೇಸ್ ದಾಖಲಿಸಲಾಗಿದೆ.