ಬಳ್ಳಾರಿ: ಇಲ್ಲಿನ ಹೊಸಪೇಟೆ ರಸ್ತೆಯ ಸುಧಾ ಕ್ರಾಸ್‌ನಲ್ಲಿರುವ ಮನಪ್ರಭ ಪ್ರೊಜೆಕ್ಟ್ ಬಿಲ್ಡಿಂಗ್‌ನ ಮೂರನೇ ಮಹಡಿಯಲ್ಲಿ ನಡೆಯುತ್ತಿದ್ದ ಕ್ಲಬ್ ಮತ್ತು ರೆಕಾನ್ ಕ್ರಿಯೇಷನ್ ಕಟ್ಟಡದಲ್ಲಿ ನಡೆಯುತ್ತಿದ್ದ ಕ್ಲಬ್‌ಗಳ ಮೇಲೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ನಡೆಸಿ 46 ಜನರ ವಿರುದ್ಧ ಪ್ರಕರಣ ದಾಖಲಿಸಿವೆ.
ಮನರಂಜನೆ, ಕ್ರೀಡೆ ಹೆಸರಿನಲ್ಲಿ ಎರಡು ತಿಂಗಳಿನಿಂದ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆದಿದೆ. ದಾಳಿ ವೇಳೆ ₹3.58 ಲಕ್ಷ ನಗದು, 53 ಇಸ್ಪೀಟ್ ಕಾರ್ಡ್‌ಗಳು, 38 ಮೊಬೈಲ್‌ಗಳು, ಮದ್ಯದ ಬಾಟಲಿಗಳು ಸಿಕ್ಕಿವೆ. ದಾಳಿ ವೇಳೆ ಎರಡು ಡೈರಿಗಳು ಪೊಲೀಸರಿಗೆ ಲಭ್ಯವಾಗಿದ್ದು, ಪ್ರತಿ ತಿಂಗಳು ಯಾರು ಯಾರಿಗೆ ಮಾಮೂಲಿ ರೂಪದಲ್ಲಿ ಹಣ ಸಂದಾಯ ಮಾಡಲಾಗುತ್ತಿದೆ. ಯಾರ ಬೆಂಬಲದೊಂದಿಗೆ ಇಸ್ಪೀಟ್ ಕ್ಲಬ್ ನಡೆಯುತ್ತಿದೆ ಎಂಬ ಮಾಹಿತಿ ಗೊತ್ತಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿಗಳು, ರಾಜಕೀಯ ನಾಯಕರು ಹಾಗೂ ಮಾಧ್ಯಮ ಹೆಸರಿನಲ್ಲಿ ದಂಧೆ ನಡೆಸುವವರ ಹೆಸರು ಡೈರಿಯಲ್ಲಿ ಇದೆಯೆಂದು ತಿಳಿದು ಬಂದಿದೆ. ಆದರೆ, ಪ್ರಭಾವಿತರ ಹೆಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೊರ ಹಾಕಿಲ್ಲ. ಮಾಧ್ಯಮ ಹೆಸರಿನ ದಂಧೆಕೋರರನ್ನು ಕರೆಸಿ ಎಚ್ಚರಿಕೆ ನೀಡಲಾಗಿದೆ ಎಂದು ಎಸ್ಪಿ ಡಾ. ಶೋಭಾರಾಣಿ ''''ಕನ್ನಡಪ್ರಭ''''ಕ್ಕೆ ತಿಳಿಸಿದರು. ಕೆಲವರು ಮಾಧ್ಯಮಗಳ ಹೆಸರಿನಲ್ಲಿರುವ ದಂಧೆಕೋರರ ಹೆಸರಿದೆ. ಶೀಘ್ರದಲ್ಲಿಯೇ ಬಯಲು ಮಾಡಲಾಗುವುದು ಎಂದು ಎಸ್ಪಿ ಅವರು ತಿಳಿಸಿದರು.ದಾಳಿ ಸಂಬಂಧ ಕೌಲ್‌ಬಜಾರ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಸುಧಾ ಕ್ರಾಸ್‌ನಲ್ಲಿರುವ ಇಸ್ಪೀಟ್ ಕ್ಲಬ್ ಮೇಲೆ ದಾಳಿಯನ್ನು ಮೊದಲು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆರಂಭಿಸಿದರು. ಬಳಿಕ ಎಸ್ಪಿ ಅವರಿಗೆ ಮಾಹಿತಿ ತಿಳಿದಿದ್ದು, ದಾಳಿಯ ಭಾಗವಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ನಿರಾಕರಿಸಿದ ಎಸ್ಪಿ ಡಾ. ಶೋಭಾರಾಣಿ, ಡಿಸಿ ಹಾಗೂ ನಾವು ಸೇರಿಕೊಂಡೇ ದಾಳಿ ಮಾಡಿದ್ದೇವೆ ಎಂದು ತಿಳಿಸಿದರು. ಇಸ್ಪೀಟ್ ಜೂಜಾಟದ ಕೇಂದ್ರದ ಮೇಲೆ ಜಿಲ್ಲಾಧಿಕಾರಿಯೇ ದಾಳಿ ಮಾಡಿದ್ದು ಇದೇ ಮೊದಲು ಎನ್ನಲಾಗುತ್ತಿದೆ. ಕ್ಲಬ್‌ನಲ್ಲಿ ನಡೆಯುತ್ತಿರುವ ದಂಧೆ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿಯೇ ಜಿಲ್ಲಾಧಿಕಾರಿ ದಾಳಿ ನಡೆಸಿದ್ದಾರೆ. ಹದಿನೈದು ದಿನಗಳಿಂದ ಸುಧಾಕ್ರಾಸ್‌ನಲ್ಲಿ ಜೂಜಾಟದ ಕ್ಲಬ್‌ಗಳು ಸಕ್ರಿಯವಾಗಿವೆ ಎಂದು ದಾಳಿ ವೇಳೆ ಗೊತ್ತಾಗಿದೆ. ಈ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ಅಕ್ರಮ ಜೂಜಾಟಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಬಳ್ಳಾರಿ ಜಿಲ್ಲೆ ಎಸ್ಪಿ ಡಾ. ಶೋಭಾರಾಣಿ ಹೇಳಿದರು.ಡೈರಿಯಲ್ಲಿರುವ ಹೆಸರು ಬಹಿರಂಗಪಡಿಸಲು ಆಗ್ರಹ: ಸುಧಾಕ್ರಾಸ್‌ನ ಇಸ್ಪೀಟ್ ಕ್ಲಬ್ ಮೇಲೆ ನಡೆದಿದ ದಾಳಿ ವೇಳೆ ಸಿಕ್ಕ ಡೈರಿಯಲ್ಲಿ ಯಾರು ಯಾರ ಹೆಸರಿದೆ ಎಂಬುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹಿರಂಗಪಡಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಆಗ್ರಹಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ನಗರದಲ್ಲಿ ಜೂಜುದಂಧೆ ಮಿತಿ ಮೀರಿದೆ. ಆಡಳಿತಾರೂಢ ಪಕ್ಷ ಬಾಯಲ್ಲಿ ಮಾತ್ರ ಭ್ರಷ್ಟಾಚಾರಮುಕ್ತ ಬಳ್ಳಾರಿ ಎನ್ನುತ್ತಿದೆ. ಆದರೆ, ನಗರದಲ್ಲಿ ಇಸ್ಪೀಟ್, ಮಟ್ಕಾ, ಜೂಜಾಟಗಳು ನಿರಂತರವಾಗಿ ನಡೆದಿವೆ. ಜಿಲ್ಲಾಡಳಿತ ಕೂಡಲೇ ಇವುಗಳ ನಿಯಂತ್ರಿಸಬೇಕು. ಡೈರಿಯಲ್ಲಿರುವ ಎಲ್ಲ ಹೆಸರುಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.