ಕಾರ್ಯಾಚರಣೆನಿರತ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ

KannadaprabhaNewsNetwork | Published : Mar 5, 2025 12:30 AM

ಸಾರಾಂಶ

ಸರ್ಕಾರದ ಸೂಚನೆಯ ಮೇರೆಗೆ ಆನೆ ಕಾರ್ಯಾಚರಣೆ ಪಡೆಗೆ ನಿಯೋಜನೆಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಿಡಿಗೇಡಿಗಳ ಗುಂಪೊಂದು ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಕನಕಪುರ

ಸರ್ಕಾರದ ಸೂಚನೆಯ ಮೇರೆಗೆ ಆನೆ ಕಾರ್ಯಾಚರಣೆ ಪಡೆಗೆ ನಿಯೋಜನೆಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಿಡಿಗೇಡಿಗಳ ಗುಂಪೊಂದು ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿಗಳು ಕನಕಪುರ ತಾಲೂಕಿನ ಸಾತನೂರು ಹೋಬಳಿ ಹಲಸಿನಮರ ದೊಡ್ಡಿ ಗ್ರಾಮದ ಕಿರಣ್, ಗುರು, ತಿಮ್ಮೇಶ್ ಹಾಗೂ ಕುರುಬಳ್ಳಿದೊಡ್ಡಿ ಗ್ರಾಮದ ಸುಂದರ್, ಪ್ರತಾಪ್ ಎಂದು ತಿಳಿದು ಬಂದಿದೆ. ಫೆ. 28ನೇ ತಾರೀಖು ರಾತ್ರಿ ಸುಮಾರು ಒಂದು ಗಂಟೆ ಹತ್ತು ನಿಮಿಷದ ಸಮಯದಲ್ಲಿ ಕುರುಬಳ್ಳಿದೊಡ್ಡಿ ಸುಂದರ್ ಅವರ ಇಟ್ಟಿಗೆ ಫ್ಯಾಕ್ಟರಿ ಹತ್ತಿರ ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಸುಂದರ್ ಮಾತನಾಡುತ್ತಿದ್ದರು. ಈ ವೇಳೆ ಕಬ್ಬಾಳು ಕಡೆಯಿಂದ ಕಾರಿನಲ್ಲಿ ಬಂದ ಕೊಲೆ ಆರೋಪಿ ಕಿರಣ್ ಮತ್ತವರ ಗುಂಪು ಇಟ್ಟಿಗೆ ಫ್ಯಾಕ್ಟರಿಗೆ ನುಗ್ಗಿ ಏಕಾಏಕಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಅವರ ಸಮವಸ್ತ್ರಗಳನ್ನು ಹರಿದು ಅವರ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದಾರೆ. ಕೂಡಲೇ ರಕ್ಷಣೆಗಾಗಿ 112 ರ ಪೊಲೀಸ್ ವಾಹನಕ್ಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಸಾತನೂರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಲಸಿನಮರದೊಡ್ಡಿ ಗ್ರಾಮದಲ್ಲಿ ಕಾರ್ಯಾಚರಣೆ ಪಡೆಯ ಸಿಬ್ಬಂದಿಯವರ ಗಸ್ತು ವಾಹನವನ್ನು ತಡೆದು ವಾಹನದ ಕೀಯನ್ನು ಕಸಿದುಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿ ಕಾರ್ಯಾಚರಣೆ ಪಡೆಯ ಸಿಬ್ಬಂದಿಯವರಿಗೆ ನಿಂದಿಸಿದಲ್ಲದೆ ಕಾರಿನಿಂದ ಪೆಟ್ರೋಲ್ ತೆಗೆದು ನಿಮ್ಮನ್ನು ಹಾಗೂ ಜೀಪನ್ನು ಸುಟ್ಟು ಹಾಕುತ್ತೇವೆ ಎಂದು ಕಾರಿನಲ್ಲಿ ಪೆಟ್ರೋಲ್ ತೆಗೆಯುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ 112 ವಾಹನದ ಪೊಲೀಸ್ ಸಿಬ್ಬಂದಿ ತಡೆಯಲು ಹೋದ ಸಮಯದಲ್ಲಿ ಅವರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮೇಲೂ ಸಹ ಹಲ್ಲೆ ನಡೆಸಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.

ಈ ಸಂಬಂಧ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಹಲ್ಲೆಗೊಳಗಾದ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಸಾತನೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ; 24 ಬಾರ್ 2025 ಕಲಂ: 126 ಕ್ಲಾಸ್ 2, 127 ಕ್ಲಾಸ್ 2, 325, 121 ಕ್ಲಾಸ್ 1, 132,109, 190 ಬಿ ಎನ್ ಎಸ್ ಹಾಗೂ 2 ಕ್ಲಾಸ್ ಬಿ ಹಾಗೂ ಸಾರ್ವಜನಿಕ ಆಸ್ತಿಯ ನಷ್ಟ ಮತ್ತು ವಿನಾಶ ತಡೆಗಟ್ಟುವಿಕೆ ಕಾಯ್ದೆ 1981 ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ ಪೋಲೀಸ್ ರು ಇವರ ಕುರಿತು ಮಾಹಿತಿ ಕಲೆ ಹಾಕಿ ಕೃತ್ಯದಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳ ಪೈಕಿ ಕಿರಣ್, ಸುಂದರ್, ಪ್ರತಾಪ್ ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ತಲೆ ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಾದ ಗುರು ಹಾಗೂ ತಿಮ್ಮೇಶ್‌ಗಾಗಿ ಪೊಲೀಸರು ಬಲೆಯನ್ನು ಬೀಸಿದ್ದಾರೆ ಎಂದು ತಿಳಿದು ಬಂದಿದೆ.

Share this article