ಶಾಸಕ ಕೋನರಡ್ಡಿ ಆಪ್ತನಿಂದ ಪತ್ರಕರ್ತರ ಮೇಲೆ ಹಲ್ಲೆ!

KannadaprabhaNewsNetwork |  
Published : Jul 13, 2024, 01:33 AM ISTUpdated : Jul 13, 2024, 01:34 AM IST
ಲಕ್ಕುಂಡಿ | Kannada Prabha

ಸಾರಾಂಶ

ಸುದ್ದಿಗೆ ತೆರಳಿದ ವೇಳೆ ಶಾಸಕ ಎನ್‌.ಎಚ್‌. ಕೋನರಡ್ಡಿ ಅವರ ಆಪ್ತ ಹಾಗೂ ಪುರಸಭೆ ಸ್ಥಾಯಿ ಸಮಿತಿ ಚೇರಮನ್‌ ಮಾಲತೇಶ ಭೋವಿ ಸೇರಿದಂತೆ ಹಲವರು ಕನ್ನಡಪ್ರಭ ವರದಿಗಾರ ಈಶ್ವರ ಲಕ್ಕುಂಡಿ ಸೇರಿದಂತೆ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ.

ಹುಬ್ಬಳ್ಳಿ:

ಕ್ಷುಲ್ಲಕ ಕಾರಣಕ್ಕೆ ನವಲಗುಂದ ತಾಲೂಕಿನ ಕನ್ನಡಪ್ರಭ ವರದಿಗಾರ ಈಶ್ವರ ಲಕ್ಕುಂಡಿ ಮೇಲೆ ಶಾಸಕ ಎನ್‌.ಎಚ್‌. ಕೋನರಡ್ಡಿ ಅವರ ಆಪ್ತ ಹಾಗೂ ಪುರಸಭೆ ಸ್ಥಾಯಿ ಸಮಿತಿ ಚೇರಮನ್‌ ಮಾಲತೇಶ ಭೋವಿ ಸೇರಿದಂತೆ ಆತನ ಸಹಚರರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನವಲಗುಂದದಲ್ಲಿ ಗುರುವಾರ ರಾತ್ರಿ ನಡೆದಿದೆ.

ಶಾಸಕರ ಸಹಚರರು ಮಾಡಿದ ಹಲ್ಲೆಗೆ ಪ್ರಗತಿಪರ ಸಂಘಟನೆಗಳು, ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿವೆ. ಅಜಾತ ನಾಗಲಿಂಗ ಶ್ರೀಗಳ ಜಾತ್ರೆ ವೀಕ್ಷಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಾತ್ರಿ ಮಾಲತೇಶ ಭೋವಿ ಅವರ ಅಳಿಯನೊಬ್ಬ ದಾರಿಹೋಕನಿಗೆ ಬೈಕ್‌ನಿಂದ ಅಪಘಾತ ಪಡಿಸಿದ್ದ. ಈ ವೇಳೆ ಗಾಯಗೊಂಡವನ ಕಡೆಯವರು ಹಾಗೂ ಭೋವಿ ಬೆಂಬಲಿಗರ ನಡುವೆ ವಾಗ್ವಾದ ನಡೆಯುತ್ತಿತ್ತು. ಇದನ್ನು ಸುದ್ದಿಗಾಗಿ ಮೂವರು ವರದಿಗಾರರು ವಿಡಿಯೋ ಚಿತ್ರೀಕರಣ ಹಾಗೂ ಫೋಟೋ ತೆಗೆದುಕೊಳ್ಳುತ್ತಿದ್ದರು. ಇದನ್ನು ನೋಡಿ ಕನ್ನಡಪ್ರಭ ವರದಿಗಾರ ಹಾಗೂ ಇನ್ನುಳಿದ ವರದಿಗಾರರ ಕೈಯಲ್ಲಿದ್ದ ಮೊಬೈಲ್‌ನ್ನು ಮಾಲತೇಶ ಭೋವಿ ಸಹಚರರು ಕಸಿದುಕೊಂಡರು.

ಈ ವೇಳೆ ವರದಿಗಾರರು ಹಾಗೂ ಅವರ ನಡುವೆ ವಾಗ್ವಾದ ನಡೆಯಿತು. ಕೈ ಕೈ ಮಿಲಾಯಿಸುವ ಹಂತಕ್ಕೂ ಜಗಳ ತಲುಪಿತು. ಅಲ್ಲಿಗೆ ಆಗಮಿಸಿದ ಮಾಲತೇಶ ಭೋವಿ ಹಾಗೂ ಸಹಚರರು ವರದಿಗಾರರ ಮೇಲೆ ಹಲ್ಲೆ ನಡೆಸಿದರು. ಈಶ್ವರ ಲಕ್ಕುಂಡಿ ಮರ್ಮಾಂಗಕ್ಕೆ ಒದ್ದು ಗಾಯಗೊಳಿಸಿದರು. ಇದರಿಂದ ತೀವ್ರ ಅಸ್ವಸ್ಥಗೊಂಡ ವರದಿಗಾರ ಲಕ್ಕುಂಡಿಯನ್ನು ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಸದ್ಯ ಈಶ್ವರ ಲಕ್ಕುಂಡಿ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ಶಾಸಕ ಎನ್‌.ಎಚ್‌. ಕೋನರಡ್ಡಿ ಸೇರಿದಂತೆ ಹಲವರು ಕಿಮ್ಸ್‌ಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧೈರ್ಯ ನೀಡಿದ್ದಾರೆ.

ಖಂಡನೆ:

ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೆಲ ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಶಾಸಕರು ತಮ್ಮ ಹಿಂಬಾಲಕರನ್ನು ಹದ್ದು ಬಸ್ತಿನಲ್ಲಿಡಬೇಕು. ಈ ರೀತಿ ಅಮಾಯಕರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ ಎಂದು ಸಂಘಟನೆಗಳು ಆಗ್ರಹಿಸಿವೆ.

ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ, ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?