ಕನ್ನಡಪ್ರಭ ವಾರ್ತೆ ಯಳಂದೂರು
ಯಳಂದೂರು ತಾಲೂಕಿನ ಅಂಬಳೆ ಗ್ರಾಮದಲ್ಲಿ ಯಳಂದೂರು ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೃಷ್ಣರವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಯಳಂದೂರು ವಕೀಲರ ಸಂಘದ ಸದಸ್ಯರು ಸೋಮವಾರ ನ್ಯಾಯಾಲಯದ ಕಲಾಪಗಳಿಂದ ದೂರವಿದ್ದು, ಮೌನ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಕೆ.ಬಿ. ಶಶಿಧರ ಮಾತನಾಡಿ, ಏ.೨೫ ರಂದು ಮನೆ ಕಟ್ಟುವ ವಿಚಾರವಾಗಿ ಕೋರ್ಟಿನಿಂದ ಇಂಜೆಕ್ಷನ್ ಆರ್ಡರ್ ಇದ್ದರೂ ಸಹ ಕೃಷ್ಣರವರ ಅಣ್ಣ ಗೋವಿಂದ, ಈತನ ಮಡದಿ ಜಯಮ್ಮ ಹಾಗೂ ಈತನ ಮಗ ಶ್ರೀನಿವಾಸ ಎಂಬ ಮೂವರು ಸೇರಿ ಕೃಷ್ಣ ಹಾಗೂ ಇವರ ಭಾಮೈದ ರವಿ ಎಂಬುವರ ಮೇಲೆ ಮಚ್ಚು ಹಾಗೂ ಕಬ್ಬಿಣದ ರಾಡ್‌ಗಳಿಂದ ದಾಳಿ ನಡೆಸಿದ್ದಾರೆ. ಇವರಿಬ್ಬರೂ ಗಾಯಗಳಾಗಿದ್ದು, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ನಡೆದ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಸಹ ಪೊಲೀಸರು ಇವರನ್ನು ಇನ್ನೂ ಬಂಧಿಸಿಲ್ಲ,
ವಕೀಲರ ಮೇಲೆ ನಡೆಸಿರುವ ದೊಡ್ಡ ಹಲ್ಲೆ ಇದಾಗಿದೆ ಎಂದು ಆರೋಪಿಸಿದ್ದಾರೆ. ಕಾನೂನನ್ನು ಪರಿಪಾಲಿಸುವ, ನ್ಯಾಯ ದೊರಕಿಸಲು ನಿರಂತರವಾಗಿ ದುಡಿಯುತ್ತಿರುವ ನಮಗೆ ಇನ್ನೂ ನ್ಯಾಯ ಸಿಗದಿರುವುದು ವಿಪರ್ಯಾಸವಾಗಿದೆ. ಕೂಡಲೇ ಪೊಲೀಸರು ಈ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಈ ಸಂಬಂಧ ಇಲಾಖೆಯ ಉನ್ನತ ಅಧಿಕಾರಿಗಳು ಶೀಘ್ರ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ನಾವು ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.ವಕೀಲರ ಸಂಘದ ಅಧ್ಯಕ್ಷ ರಾಜಣ್ಣ, ಸದಸ್ಯರಾದ ಸಿ. ಸಿದ್ದರಾಜು, ಸಿ.ಎಂ. ಮಹದೇವಸ್ವಾಮಿ, ಎಂ. ನಾಗರಾಜು, ಕುಮಾರಸ್ವಾಮಿ, ಮಾದೇಶ್, ಎಂ. ಮದೇಶ್, ಗೌಡಹಳ್ಳಿಮಹೇಶ್, ಜೆ.ಎನ್. ಸಂಪತ್ತು, ಚಂದನ, ಉಮಾ, ಮೇಘಾ, ರವೀಶ್, ಆಶ್ವಿನ್ ಶ್ರೀನಿವಾಸಮೂರ್ತಿ, ಕಾಂತರಾಜು ಸೇರಿದಂತೆ ಅನೇಕರು ಇದ್ದರು.