ಠಾಣೆಯಲ್ಲಿ ವಕೀಲರ ಮೇಲೆ ಹಲ್ಲೆ: ಎಸ್‌ಐ ಸೇರಿ 6 ಮಂದಿ ಸಸ್ಪೆಂಡ್

KannadaprabhaNewsNetwork | Published : Dec 2, 2023 12:45 AM

ಸಾರಾಂಶ

ಠಾಣೆಯಲ್ಲಿ ವಕೀಲರ ಮೇಲೆ ಹಲ್ಲೆ: ಎಸ್‌ಐ ಸೇರಿ 6 ಮಂದಿ ಸಸ್ಪೆಂಡ್

ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕಿಲ್ಲವೆಂಬ ಕಾರಣಕ್ಕೆ ಹಲ್ಲೆ । ಪೊಲೀಸರ ದೌರ್ಜನ್ಯ ಖಂಡಿಸಿ ವಕೀಲರ ಪ್ರತಿಭಟನಾ ಮೆರವಣಿಗೆ । ಹಲ್ಲೆ ಮಾಡಿರುವ ಪೊಲೀಸರ ಬಂಧನಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕಿಲ್ಲದ ಕಾರಣಕ್ಕಾಗಿ ಪೊಲೀಸರು ವಕೀಲನನ್ನು ಠಾಣೆಗೆ ಕರೆದುಕೊಂಡು ಹೋಗಿ ಮನಸ್ಸಿಗೆ ತೋಚಿದಂತೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಗುರುವಾರ ರಾತ್ರಿ ಇಲ್ಲಿನ ಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪೊಲೀಸರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಯುವ ವಕೀಲ ಎನ್.ಟಿ. ಪ್ರೀತಂ ಅವರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಠಾಣೆಗೆ ಕರೆದುಕೊಂಡು ಬಂದು ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ಮಹೇಶ್ ಪೂಜಾರಿ, ಎಎಸ್‌ಐ ರಾಮಪ್ಪ, ಮುಖ್ಯ ಪೇದೆ ಶಶಿಧರ, ಪೇದೆಗಳಾದ ಗುರುಪ್ರಸಾದ್, ಬಿ.ಕೆ. ನಿಖಲ್ ಹಾಗೂ ವಿ.ಟಿ. ಯುವರಾಜ ಅವರನ್ನು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಅಮಾನತುಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಗುರುವಾರ ರಾತ್ರಿ ಪ್ರೀತಂ ಮಾರ್ಕೇಟ್ ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಟೌನ್ ಪೊಲೀಸ್ ಠಾಣೆ ಎದುರು ಮಫ್ತಿಯಲ್ಲಿದ್ದ ಪೊಲೀಸ್ ಬೈಕ್‌ನ್ನು ನಿಲ್ಲಿಸಿ ಹೆಲ್ಮೆಟ್ ಎಲ್ಲಿ ಎಂದು ಕೇಳುತ್ತಾ,.. ಬೈಕಿನ ಕೀಯನ್ನು ತೆಗೆದುಕೊಂಡು ಪೊಲೀಸ್ ಠಾಣೆ ಒಳಗೆ ಹೋಗಿದ್ದಾರೆ. ಅವರನ್ನು ಪ್ರೀತಂ ಹಿಂಬಲಿಕೊಂಡು ಠಾಣೆ ಯೊಳಗೆ ಹೋಗುತ್ತಿದ್ದಂತೆ ಅಲ್ಲಿಯೇ ಇದ್ದ ಪೇದೆಯೋಬ್ಬರು ಹೊಡೆದಿದ್ದಾರೆ. ನಂತರದಲ್ಲಿ ಇತರೆ ಪೊಲೀಸರು ಲಾಠಿ, ಪೈಪ್‌ಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೊನೆಯಲ್ಲಿ ಮೊದಲೇ ಕಿತ್ತುಕೊಂಡಿದ್ದ ಮೊಬೈಲ್ ಪೋನ್ ಪೊಲೀಸರು ವಾಪಸ್ ಕೊಟ್ಟಿದ್ದಾರೆ. ಕೂಡಲೇ ಪ್ರೀತಂ ಇತರೆ ವಕೀಲರಿಗೆ ಪೋನ್ ಮಾಡುತ್ತಿದ್ದಂತೆ ವಕೀಲರ ಸಂಘದ ಅಧ್ಯಕ್ಷ ಸುಧಾಕರ್, ಯತಿರಾಜ್ ಸೇರಿದಂತೆ ಇತರೆ ವಕೀಲರು ರಾತ್ರಿಯೇ ಪೊಲೀಸ್ ಠಾಣೆಗೆ ಆಗಮಿಸಿ ಪ್ರೀತಂ ಅವರನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದಾರೆ.

ಕೂಡಲೇ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಟೌನ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಆ ಸಂದರ್ಭದಲ್ಲಿ ವಕೀಲರು ಪೊಲೀಸರ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎಫ್‌ಐಆರ್ ದಾಖಲಿಸಬೇಕು. ಹಲ್ಲೆ ನಡೆಸಿರುವ ಪೊಲೀಸರನ್ನು ಬಂಧಿಸಬೇಕೆಂದು ಆಗ್ರಹಿಸಿದರು. ನಂತರದಲ್ಲಿ ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ಶುಕ್ರವಾರ ಪ್ರತಿಭಟನೆ ನಡೆಸುವ ತೀರ್ಮಾನಕ್ಕೆ ಬಂದು ಸ್ಥಳದಿಂದ ವಕೀಲರು ತೆರಳಿದರು.

ಬಂದೋಬಸ್ತ್:ಪ್ರೀತಂಗೆ ಪೊಲೀಸರು ಹೊಡೆದಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಕೇಂದ್ರದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು. ವಕೀಲರು ಪ್ರತಿಭಟನಾ ಮೆರವಣಿಗೆ ತೆರಳುವ ಮಾರ್ಗದಲ್ಲಿಯೇ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ವಕೀಲರು, ಜಿಲ್ಲಾ ನ್ಯಾಯಾಲಯದ ಹೊರ ವಲಯದಲ್ಲಿ ಪ್ರತಿಭಟನೆ ನಡೆಸಿ ಅಲ್ಲಿಂದ ಮೆರವಣಿಗೆಯಲ್ಲಿ ಐ.ಜಿ. ರಸ್ತೆ, ಹನುಮಂತಪ್ಪ ವೃತ್ತದಿಂದ ಎಂ.ಜಿ. ರಸ್ತೆಯ ಮೂಲಕ ತೆರಳಿ , ಮಾರ್ಕೇಟ್ ರಸ್ತೆಗೆ ಹೋಗಿ ಇದೇ ಮಾರ್ಗದ ಟೌನ್ ಪೊಲೀಸ್ ಠಾಣೆಯ ಎದುರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸಮಯದ ನಂತರ ಅಲ್ಲಿಂದ ಮೆರವಣಿಗೆ ಮುಂದುವರೆಸಿದ ವಕೀಲರು ಮತ್ತೆ ಎಂ.ಜಿ. ರಸ್ತೆಗೆ ಬಂದು ಆಜಾದ್ ಪಾರ್ಕ್‌ ವೃತ್ತಕ್ಕೆ ತೆರಳಿ ಧರಣಿ ನಡೆಸಿದರು. ವಕೀಲರ ಮೇಲೆ ಹಲ್ಲೆ ನಡೆಸಿರುವ ಎಲ್ಲಾ ಸಿಬ್ಬಂದಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಬೆಂಬಲ: ವಕೀಲರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ಹಾಗೂ ನೆರೆಯ ಹಾಸನ ಜಿಲ್ಲೆಯ ವಕೀಲರ ಸಂಘದ ಪದಾಧಿಕಾರಿಗಳು, ಸ್ಥಳೀಯ ವಕೀಲರು ಪಾಲ್ಗೊಂಡಿದ್ದರು. ತರೀಕೆರೆ, ಎನ್.ಆರ್.ಪುರ ನ್ಯಾಯಾಲಯಗಳಲ್ಲಿ ವಕೀಲರು ಕಲಾಪದಿಂದ ಹೊರಗೆ ಉಳಿದಿದ್ದರು. ಶೃಂಗೇರಿ ಪಟ್ಟಣದಲ್ಲಿ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪೊಲೀಸರ ದೌರ್ಜನ್ಯ ಖಂಡಿಸಿದರು. ---- ಬಾಕ್ಸ್ ----ವಕೀಲರ ಆಕ್ಷೇಪ ತನ್ನ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿಗಳ ಹೆಸರನ್ನು ಪ್ರೀತಂ ದೂರಿನಲ್ಲಿ ತಿಳಿಸಿದ್ದರೂ ಸಹ ಎಫ್‌ಐಆರ್‌ ನಲ್ಲಿ ಪೇದೆಗಳಾದ ಗುರುಪ್ರಸಾದ್ (ಎ-1) ಹಾಗೂ ಶಶಿಧರ್ (ಎ-2) ಅವರು ಹೆಸರು ಮಾತ್ರ ತೋರಿಸಲಾಗಿದೆ. ಇನ್ನುಳಿದವರನ್ನು ಇತರರೆಂದು ತೋರಿಸಲಾಗಿದೆ. ಇದರ ಉದ್ದೇಶ, ಪೊಲೀಸ್ ಇಲಾಖೆ ತನ್ನ ಸಿಬ್ಬಂದಿಯನ್ನು ಈ ಪ್ರಕರಣದಿಂದ ಹೊರಗುಳಿಯಲು ತಂತ್ರ ಮಾಡಿದೆ. ಎಲ್ಲಾ 6 ಮಂದಿ ಸಿಬ್ಬಂದಿ ಹೆಸರನ್ನು ಎಫ್‌ಐಆರ್‌ನಲ್ಲಿ ಧಾಖಲಿಸಬೇಕು ಎಂದು ವಕೀಲರ ಸಂಘದವರು ಆಗ್ರಹಿಸಿದರು. ಎಫ್‌ಐಆರ್ ಪ್ರತಿಯನ್ನು ಎಸ್ಪಿ ಡಾ. ವಿಕ್ರಂ ಅಮಟೆ ವಕೀಲರ ಕೈಗೆ ನೀಡುತ್ತಿದ್ದಂತೆ ಆಕ್ರೋಶಗೊಂಡ ವಕೀಲರು ಎಫ್‌ಐಆರ್‌ನ ನಕಲು ಪ್ರತಿಯನ್ನು ಸ್ಥಳದಲ್ಲೇ ಹರಿದು ಹಾಕಿದರು. ಎಸ್‌ಐ ಸೇರಿ 6 ಮಂದಿ ಸಿಬ್ಬಂದಿ ವಿರುದ್ಧ ಕಲಂ 506, 341, 307, 324, 326, 504 ಜತೆಗೆ 149 ಐಪಿಸಿ ಕೇಸ್‌ ದಾಖಲು ಮಾಡಲಾಗಿದೆ. ------

ಪೊಲೀಸರ ದುರ್ನಡತೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲು ಮಾಡುವ ಸಂದರ್ಭದಲ್ಲಿ ವಕೀಲರ ಮೇಲೆ ಹಲ್ಲೆ ನಡೆಸಲಾಗಿದೆ. ದುರ್ನಡತೆ ತೋರಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಎಸ್ಪಿ ಡಾ. ವಿಕ್ರಂ ಅಮಟೆ ಅಮಾನತ್ತಿನ ಆದೇಶದಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ವರ್ತಿಸಬೇಕು. ಆದರೆ, ಈ ಪ್ರಕರಣದಿಂದಾಗಿ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆ ಬಗ್ಗೆ ಅಗೌರವ ಉಂಟಾಗಲು ಕಾರಣವಾಗಿದ್ದೀರಾ, ಅಶಿಸ್ತು ತೋರಿದ್ದಿರಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ----ವರದಿ ಕೇಳಿದ ದ್ವಿ ಸದಸ್ಯ ಪೀಠ

ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಡಿ. 5 ರೊಳಗೆ ವರದಿ ನೀಡುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶ ಪ್ರಸನ್ನ ಜಿ. ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಹೈಕೋರ್ಟ್‌ನ ಸರ್ಕಾರಿ ವಕೀಲರಿಗೆ ಸೂಚನೆ ನೀಡಿದ್ದಾರೆ. ವಕೀಲ ಪ್ರೀತಂ ಮೇಲೆ ಹಲ್ಲೆ ನಡೆಸಿರುವ ಪೊಲೀಸರನ್ನು ಬಂಧಿಸಲು ನಿರ್ದೇಶನ ನೀಡುವಂತೆ ವಕೀಲರು ಹೈಕೋರ್ಟ್‌ನಲ್ಲಿ ಶುಕ್ರವಾರ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಗೆ ಪಡೆದ ನ್ಯಾಯ ಪೀಠ ಡಿ. 5 ರೊಳಗೆ ವರದಿ ನೀಡುವಂತೆ ಸೂಚನೆ ನೀಡಿದೆ. ಜತೆಗೆ ವಕೀಲರು ಪ್ರತಿಭಟನೆ ಕೈ ಬಿಟ್ಟು ಕಲಾಪದಲ್ಲಿ ಭಾಗವಹಿಸಬೇಕೆಂದು ನ್ಯಾಯಮೂರ್ತಿಯವರು ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ವಕೀಲರು ಆಜಾದ್ ಪಾರ್ಕ್‌ ವೃತ್ತದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಕೈಬಿಟ್ಟರು. ---- 1 ಕೆಸಿಕೆಎಂ 3ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಯಲ್ಲಿ ವಕೀಲ ಪ್ರೀತಂ ಅವರಿಗೆ ಪೊಲೀಸರು ಹೊಡೆದ ಗುರುತು. --- 1 ಕೆಸಿಕೆಎಂ 4ವಕೀಲ ಪ್ರೀತಂ ಮೇಲೆ ಹಲ್ಲೆ ನಡೆಸಿರುವ ಪೊಲೀಸರನ್ನು ಬಂಧಿಸುವಂತೆ ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ಶುಕ್ರವಾರ ವಕೀಲರು ಪ್ರತಿಭಟನಾ ಮೆರವಣಿಗೆ ನಡೆಸಿದರು.

Share this article