ಡೆಕೋರೆಶನ್ ಕೆಲಸ ಮಾಡುವ ಎರಡು ತಂಡಗಳ ನಡುವಿನ ದ್ವೇಷದ ಕಾರಣಕ್ಕೆ ಹಲ್ಲೆ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕನ್ನಡಪ್ರಭ ವಾರ್ತೆ ಉಳ್ಳಾಲಕೆಲಸ ಮಾಡುತ್ತಿದ್ದ ಸಂಸ್ಥೆಯ ಗೋದಾಮಿನಲ್ಲಿ ನೆಲೆಸಿದ್ದ ಪಶ್ಚಿಮ ಬಂಗಾಳ ಮೂಲದ ಏಳು ಜನ ವಲಸೆ ಕಾರ್ಮಿಕರ ಮೇಲೆ ಐವರ ಅಪರಿಚಿತ ತಂಡವೊಂದು ಏಕಾಏಕಿ ನುಗ್ಗಿ ಮರದ ದೊಣ್ಣೆಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಡ್ಯಾರು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಪ್ರಕರಣರಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳಾದ ರಾಹುಲ್ (27), ಆಕಾಶ್ (27), ಗುರು(25), ಸಿಂಚನ್ (19) ಎಂಬವರುನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ: ಕೋಟೆಕಾರು, ಬೀರಿಯ ಈವೆಂಟ್ ಸಂಸ್ಥೆಯೊಂದರಲ್ಲಿ ಡೆಕೊರೇಷನ್ ಕೆಲಸ ನಿರ್ವಹಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ದೀಪಂಕರ್ ದಾಸ್, ಬಿಪಲವ್ ದಾಸ್, ಗಣೇಶ್ ಬೈದ್ಯ, ಆಕಾಶ್ ಗಯಾನ್, ಧನಂಜಯ ಮೋಂಡಲ್, ರಾಹುಲ್, ಪ್ರಶಾಂತ್ ಎಂಬವರ ಮೇಲೆ ತಂಡ ಹಲ್ಲೆ ನಡೆಸಿದೆ. ಗಾಯಾಳುಗಳು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೊಳಗಾದ ಕಾರ್ಮಿಕರು ಮಂಗಳವಾರದಂದು ಮಂಗಳೂರಿನಲ್ಲಿ ಕೆಲಸ ಮುಗಿಸಿಕೊಂಡು ಮಡ್ಯಾರಿನ ಗೋದಾಮಿಗೆ ಮಲಗಲು ತೆರಳಿದ್ದರು. ರಾತ್ರಿ ವೇಳೆ ಇನ್ನೋವ ಕಾರಲ್ಲಿ ಬಂದ ಐವರು ಅಪರಿಚಿತರು ಗೋದಾಮಿಗೆ ಏಕಾಏಕಿ ನುಗ್ಗಿ ವಲಸೆ ಕಾರ್ಮಿಕರನ್ನ ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ‘ನೀವು ಪಶ್ಚಿಮ ಬಂಗಾಳದಿಂದ ಬಂದವರು ಇಲ್ಲಿ ತುಂಬಾ ಹಾರಾಡುತ್ತೀರಾ, ನಿಮ್ಮ ಕೈ, ಕಾಲುಗಳನ್ನೇ ಮುರಿದು ಹಾಕುತ್ತೇವೆ’ ಎಂದು ಹೇಳಿ ಮರದ ದೊಣ್ಣೆಗಳಿಂದ ಏಳು ಮಂದಿ ಕಾರ್ಮಿಕರಿಗೆ ಮನಬಂದಂತೆ ಥಳಿಸಿದ್ದಾರೆ. ಗಂಭೀರ ಗಾಯಗೊಂಡ ವಲಸೆ ಕಾರ್ಮಿಕರು ಆಸ್ಪತ್ರೆಗೆ ದಾಖಲಾಗಿದ್ದು, ಉಳ್ಳಾಲ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಎಚ್.ಎನ್. ಬಾಲಕೃಷ್ಣ ಖುದ್ದಾಗಿ ಆಸ್ಪತ್ರೆಗೆ ತೆರಳಿ ಗಾಯಾಳುಗಳಿಂದ ಹಲ್ಲೆಕೋರರ ಮಾಹಿತಿ ಸಂಗ್ರಹಿಸಿದ್ದಾರೆ.
ಘಟನೆ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆಕೋರೆಶನ್ ಕೆಲಸ ಮಾಡುವ ಎರಡು ತಂಡಗಳ ನಡುವಿನ ದ್ವೇಷದ ಕಾರಣಕ್ಕೆ ಹಲ್ಲೆ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.