ಕಲ್ಬುರ್ಗಿ ವಿವಿಯಲ್ಲಿ ದಾಸ ಸಾಹಿತ್ಯ ಪೀಠಕ್ಕೆ ಯತ್ನ: ಶಾಸಕ ಅಲ್ಲಮಪ್ರಭು

KannadaprabhaNewsNetwork | Published : Jul 8, 2024 12:36 AM

ಸಾರಾಂಶ

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ದಾಸ ಸಾಹಿತ್ಯದ ಅಧ್ಯಯನಕ್ಕಾಗಿ ದಾಸ ಸಾಹಿತ್ಯ ಪೀಠವನ್ನು ಪ್ರಾರಂಭಿಸಲು ಸರ್ಕಾರದೊಂದಿಗೆ ಮಾತನಾಡಿ ಪ್ರಯತ್ನಿಸಲಾಗುವುದು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ದಾಸ ಸಾಹಿತ್ಯದ ಅಧ್ಯಯನಕ್ಕಾಗಿ ದಾಸ ಸಾಹಿತ್ಯ ಪೀಠವನ್ನು ಪ್ರಾರಂಭಿಸಲು ಸರ್ಕಾರದೊಂದಿಗೆ ಮಾತನಾಡಿ ಪ್ರಯತ್ನಿಸಲಾಗುವುದು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

ಜಿಲ್ಲಾ ಕಸಾಪ ದಕ್ಷಿಣ ವಲಯ ಕಲಬುರ್ಗಿ ಘಟಕದ ವತಿಯಿಂದ ನಡೆದ ಕಲಬುರಗಿ ವಿಭಾಗ ಮಟ್ಟದ ಎರಡನೇ ದಾಸ ಸಾಹಿತ್ಯ ಸಮ್ಮೇಳನ ಉದ್ಘಾಟಸಿ ಮಾತನಾಡಿದರು.

ದಾಸ ಸಾಹಿತ್ಯದ ಸಮಗ್ರ ವಿಚಾರಗಳನ್ನು ಮುಂದಿನ ಜನಾಂಗಕ್ಕೆ ತಿಳಿಸಲು ಅಧ್ಯಯನದ ಅಗತ್ಯವಿದ್ದು ಅದಕ್ಕಾಗಿ ಕಲ್ಬುರ್ಗಿ ವಿಶ್ವವಿದ್ಯಾಲದಲ್ಲಿ ಪೀಠ ಆರಂಭಿಸಿದರೆ ಪ್ರಯೋಜನವಾಗಲಿದ್ದು ಕೂಡಲೇ ಸರ್ಕಾರ ಜೊತೆ ಚರ್ಚಿಸುವೆ ಎಂದರು.

12ನೇ ಶತಮಾನದ ವಚನಕಾರರು ಮತ್ತು ನಂತರ ಬಂದ ದಾಸರು ಜಾತಿ ತಾರತಮ್ಯ ಅಂಧ ಶ್ರದ್ಧೆ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಹುಟ್ಟು ಹಾಕಲು ಕಾರಣರಾದರು ಮಾನವ ಜನ್ಮ ಬಲು ದೊಡ್ಡದು ಅದನ್ನು ಹಾಳು ಮಾಡಬೇಡಿರಿ ಎಂದು ಜನತೆಗೆ ಸಂದೇಶ ನೀಡಿ ಕುಲಕುಲ ಎಂದು ಹೊಡೆದಾಡದಿರಿ ಎಂಬ ಜೀವನ ಮೌಲ್ಯಗಳು ಮಾನವೀಯತೆಯನ್ನು ದಾಸರು ಹಾಡುಗಳಲ್ಲಿ ಸಾರಿದರ ಎಂದರು.

ಪ್ರಸ್ತುತ ಸಂವಿಧಾನದ ಅಡಿಯಲ್ಲಿ ಇಂತಹ ಮಾನವೀಯ ಮೌಲ್ಯಗಳನ್ನು ಜಾರಿ ಮಾಡಿದರೆ ಹಿಂದೆ ವಚನಗಳು ಮತ್ತು ದಾಸರ ಹಾಡುಗಳು ಆ ಕೆಲಸವನ್ನು ನಿರ್ವಹಿಸಿದ್ದವು. ಇಂತಹ ಮೌಲ್ಯಯುತ ವಿಚಾರಧಾರೆಗಳು ಯುವಜನರಿಗೆ ಹಾಗೂ ಮುಂದಿನ ಜನಾಂಗಕ್ಕೆ ತಿಳಿಯಲು ಸಾಕಷ್ಟು ಅಧ್ಯಯನ ಮಾಡುವ ಅಗತ್ಯವಿದೆ ಎಂದು ಪಾಟೀಲರು ಹೇಳಿದರು.

ಹರಿದಾಸರತ್ನ ಪ್ರಶಸ್ತಿ ಪ್ರಧಾನ ಮಾಡಿದ ಉದ್ಯಮಿ ಕೃಷ್ಣಾಜಿ ಕುಲಕರ್ಣಿ ಮಾತನಾಡಿ ಇಂದಿನ ಪೀಳಿಗೆಗೆ ಹರಿದಾಸ ಸಾಹಿತ್ಯದ ಮಹತ್ವವನ್ನು ತಿಳಿಸುವ ಈ ಸಮ್ಮೇಳನ ಅರ್ಥಪೂರ್ಣವಾಗಿದೆ. ವಚನಕಾರರು ಮತ್ತು ದಾಸರು ಸಮಾಜಕ್ಕೆ ಮಹೋನ್ನತ ಕೊಡುಗೆ ನೀಡಿ ಮಾರ್ಗದರ್ಶನ ಮಾಡಿರುವುದು ಅನುಕರಣೀಯ ಎಂದರು.

ವಿದ್ವಾಂಸರಾದ ಡಾ. ವಾಸುದೇವ ಅಗ್ನಿಹೋತ್ರಿ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಸ್ವಾಮಿ ರಾವ್ ಕುಲಕರ್ಣಿ ಉದ್ಯಮಿ ಆನಂದ ದಂಡೋತಿ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಶಿವರಾಜ ಅಂಡಗಿ ಸ್ವಾಗತ ಕೋರಿದರು . ಅಧ್ಯಕ್ಷರಾದ ವಿಜಯಕುಮಾರ್ ಪಾಟೀಲ್ ತೆಗಲ್ ತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ವಲಯ ಅದ ಅಧ್ಯಕ್ಷರಾದ ಶ್ಯಾಮ ಸುಂದರ ಕುಲಕರ್ಣಿ ಭಾಷಣ ಮಾಡಿದರು. ಶ್ರೀಮತಿ ಶ್ರುತಿ ಸಗರ ಪ್ರಾರ್ಥನೆ ಗೀತೆ ಹಾಡಿದರು ನೂತನ ವಿದ್ಯಾಲಯದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತಪಡಿಸಿದರು. ಪರಿಷತ್ತಿನ ಸದಸ್ಯರಾದ ಮಂಜುನಾಥ ಕಂಬಳಿಮಠ ವಂದಿಸಿದರು.

ಹರಿದಾಸರತ್ನ ಪ್ರಶಸ್ತಿ ಪುರಸ್ಕೃತರು: ವಿಭಾಗ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜದ ವಿವಿಧ ಗಣ್ಯರಿಗೆ ಹರಿದಾಸ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಮಾಚಾರ್ಯ ಘಂಟಿ, ವಾದಿರಾಜ ವ್ಯಾಸಮುದ್ರ ಡಾ. ಎಂ ಮೊಹಮ್ಮದ್ ಭಾಷಾ ಗುಳ್ಯಂ, ಡಾ. ಪ್ರಹ್ಲಾದ ಬುರ್ಲಿ, ಮೂಡಬಿ ಗುಂಡೆ ರಾವ್, ಡಾ. ರಮೇಶ್ ಯಲಸಂಗೀಕರ್, ರವಿ ಲಾತೂರ್ ಕರ್, ಬಾಬುರಾವ್ ಸೇರಿಕಾರ ಡಾ. ವಾಸುದೇವ ಸೇಡಂ , ಡಾ. ರೆಹಮಾನ್ ಪಟೇಲ್, ಅಶೋಕ ಕಾಬಾ ಮತ್ತಿತರರು ಪ್ರಶಸ್ತಿ ಪಡೆದರು.

ನಂತರ ನಡೆದ ಅಮೃತ ಸಿಂಚನ ಗೋಷ್ಠಿಯಲ್ಲಿ ದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ವಿಷಯದಲ್ಲಿ ಡಾ. ಶೈಲಜಾ ಕೊಪ್ಪರ ಮತ್ತು ರೂಪಾ ಕುಲಕರ್ಣಿ ಉಪನ್ಯಾಸ ನೀಡಿದರು ಹಿರಿಯ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ಅಧ್ಯಕ್ಷತೆ ವಹಿಸಿದ್ದರು ಶಕುಂತಲಾ ಪಾಟೀಲ್, ಜ್ಯೋತಿ ಕೋಟನೂರ ಜ್ಯೋತಿ ಲಾತೂರಕರ್, ವೆಂಕುಬಾಯಿ ರಜಪೂತ್ ಉಪಸ್ಥಿತರಿದ್ದರು ಸಿದ್ದಲಿಂಗಬಾಳಿ ನಿರೂಪಿಸಿದರು. ಸಮ್ಮೇಳನದಲ್ಲಿ ಅನಂತ ಚಿಂಚನಸೂರು ತಂಡದಿಂದ ಭರತನಾಟ್ಯ ಅನಂತ ಮಿಸ್ತ್ರಿ ಅವರಿಂದ ಸಂಗೀತ ಕಾರ್ಯಕ್ರಮ ವಿವಿಧ ಭಜನಾ ಮಂಡಳಿಗಳಿಂದ ದಾಸರ ಹಾಡಿನ ಸ್ಪರ್ಧೆ ನೆರವೇರಿತು ಈ ಸಂದರ್ಭದಲ್ಲಿ ಮತ್ತು ವಿಶೇಷ ಸೇವೆ ಸಲ್ಲಿಸಿದವರಿಗೆ ಸನ್ಮಾನ ನಡೆಯಿತು.

Share this article