ವಿಎಚ್‌ಪಿ ಮುಖಂಡರ ವಶಕ್ಕೆ ಯತ್ನ: ಕಾರ್ಯಕರ್ತರ ಆಕ್ರೋಶ

KannadaprabhaNewsNetwork |  
Published : Sep 17, 2024, 12:56 AM IST
೧೬ಕೆಎಂಎನ್‌ಡಿ-೧ಮಂಗಳೂರಿನಿಂದ ಆಗವಿಸಿದ್ದ ಪ್ರಚಾರಕರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿರುವ ದೃಶ್ಯ. | Kannada Prabha

ಸಾರಾಂಶ

ನಾಗಮಂಗಲ ಗಲಭೆಕೋರರನ್ನು ಬಂಧಿಸುವ ತಾಕತ್ತು ಪೊಲೀಸರಿಗಿಲ್ಲ. ಕೇರಳದಿಂದ ಬಂದು ನಾಗಮಂಗಲದಲ್ಲಿ ನೆಲೆಸಿದ್ದವರನ್ನು ಕಂಡುಹಿಡಿಯಲಾಗಲಿಲ್ಲ. ಪೆಟ್ರೋಲ್ ಬಾಂಬ್ ಹಾಕಿದವರನ್ನು ಪತ್ತೆ ಹಚ್ಚಲಿಲ್ಲ. ಆರ್‌ಎಸ್‌ಎಸ್ ಕಾರ್ಯಕ್ರಮಗಳ ಕುರಿತು ಸಭೆ ನಡೆಸುತ್ತಿರುವುದನ್ನೇ ದೊಡ್ಡ ಅಪರಾಧವೆಂದು ಭಾವಿಸಿ ವಿಎಚ್‌ಪಿ ಮುಖಂಡರನ್ನು ಠಾಣೆಗೆ ಕರೆದೊಯ್ಯಲು ಬಂಧಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ/ ಪಾಂಡವಪುರ

ಮಂಗಳೂರಿನಿಂದ ಆಗಮಿಸಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡನನ್ನು ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದ್ದರ ವಿರುದ್ಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ವಿಎಚ್‌ಪಿ ಮುಖಂಡ ಪುನೀತ್ ಅತ್ತಾವರ್ ಅವರನ್ನು ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದವರಾಗಿದ್ದಾರೆ. ಮಂಗಳೂರು ಮೂಲದ ವಿಎಚ್‌ಪಿ ಮುಖಂಡರಾದ ಪುನೀತ್‌ ಅತ್ತಾವರ್ ಮತ್ತು ಶರಣು ಪಂಪ್‌ವೆಲ್ ಇಬ್ಬರೂ ನಾಗಮಂಗಲಕ್ಕೆ ಹೊರಟಿದ್ದು, ಅದಕ್ಕೂ ಮುನ್ನ ಪಾಂಡವಪುರ ಆರ್‌ಎಸ್‌ಎಸ್ ಕಚೇರಿಯಲ್ಲಿ ನಾಗಮಂಗಲದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಿದ್ದಾರೆಂಬ ಮಾಹಿತಿಯನ್ನು ಆಧರಿಸಿ ಪೊಲೀಸರು ಮುಂಜಾಗ್ರತೆಯಾಗಿ ಅವರನ್ನು ವಶಕ್ಕೆ ಪಡೆಯಲು ತಡರಾತ್ರಿ ಮುಂದಾದರು.

ವಶಕ್ಕೆ ಪಡೆಯಲು ಏಕಾಏಕಿ ಪೊಲೀಸರು ಆರ್‌ಎಸ್‌ಎಸ್ ಕಚೇರಿ ಪ್ರವೇಶಿಸಿದರು. ಈ ವೇಳೆ ಪೊಲೀಸರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ನಡುವೆ ತೀವ್ರ ತಳ್ಳಾಟ, ನೂಕಾಟ, ಮಾತಿನ ಚಕಮಕಿ ನಡೆಯಿತು. ಯಾವುದೇ ನೋಟಿಸ್ ಇಲ್ಲದೆ, ಬಂಧನ ವಾರೆಂಟ್ ಇಲ್ಲದೆ, ಸಕಾರಣವನ್ನೂ ನೀಡದೆ ವಿಎಚ್‌ಪಿ ಮುಖಂಡರನ್ನು ವಶಕ್ಕೆ ಪಡೆಯುತ್ತಿರುವುದು ದೌರ್ಜನ್ಯವಾಗಿದೆ. ಅವರು ಯಾವ ಅಪರಾಧ ಮಾಡಿದ್ದಾರೆಂದು ಕರೆದೊಯ್ಯುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.

ಆರ್‌ಎಸ್‌ಎಸ್ ಕಚೇರಿಗೂ ಅತಿಕ್ರಮ ಪ್ರವೇಶ ಮಾಡಿದ್ದೀರಿ. ಕಚೇರಿಯನ್ನು ದೇವಸ್ಥಾನವೆಂದು ಪೂಜಿಸುವ ಜಾಗಕ್ಕೆ ಶೂಗಳನ್ನು ಹಾಕಿಕೊಂಡು ಬಂದು ಅಪವಿತ್ರಗೊಳಿಸಿದ್ದೀರಿ. ಆರ್‌ಎಸ್‌ಎಸ್ ಪರಿವಾರ, ವಿಎಚ್‌ಪಿ ಸಂಘಟನೆಯಲ್ಲಿ ಬರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಗುತ್ತಿದ್ದ ಸಭೆಗೆ ತೊಂದರೆ ನೀಡುತ್ತಿದ್ದೀರಿ. ಹೀಗೆಲ್ಲಾ ಏಕೆ ಮಾಡುತ್ತೀರಿ ಎಂದು ಪ್ರಶ್ನಿಸಿದಾಗ ಪೊಲೀಸರಿಂದ ಯಾವ ಉತ್ತರವೂ ಬರಲಿಲ್ಲ. ಬಲವಂತವಾಗಿ ಪುನೀತ್ ಅತ್ತಾವರ್ ಅವರನ್ನು ಕರೆದೊಯ್ಯಲು ಮುಂದಾದಾಗ ಪೊಲೀಸ್ ವಾಹನಗಳು ಮುಂದಕ್ಕೆ ತೆರಳದಂತೆ ಕಾರ್ಯಕರ್ತರು ಅಡ್ಡಲಾಗಿ ಕುಳಿತು ಪ್ರತಿಭಟನೆ ನಡೆಸಿದರು.

ಪೊಲೀಸರಿಗೆ ತಾಕತ್ತಿದ್ದರೆ, ಧಮ್ ಇದ್ದರೆ ನಾಗಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹೇಗೆ ಬಂತು, ತಲ್ವಾರ್ ಹೇಗೆ ಝಳಪಿಸಿತೋ, ಜಲ್ಲಿಕಲ್ಲು ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ಮಾಡಲಿ. ಗಣಪತಿ ಕೂರಿಸಿದವರನ್ನು, ನೋಡುತ್ತಿದ್ದವರನ್ನು ಕರೆದುಕೊಂಡು ಹೋಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇದರ ಹಿಂದಿನ ಉದ್ದೇಶವಾದರೂ ಏನು. ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿಕೊಂಡಿದ್ದೀರಾ ಎಂದೆಲ್ಲಾ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿ ಪ್ರಚಾರಕರನ್ನು ವಶಕ್ಕೆ ಪಡೆಯುವುದಕ್ಕೆ ಅಡ್ಡಿಪಡಿಸಿದರು. ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾಗಮಂಗಲ ಗಲಭೆಕೋರರನ್ನು ಬಂಧಿಸುವ ತಾಕತ್ತು ಪೊಲೀಸರಿಗಿಲ್ಲ. ಕೇರಳದಿಂದ ಬಂದು ನಾಗಮಂಗಲದಲ್ಲಿ ನೆಲೆಸಿದ್ದವರನ್ನು ಕಂಡುಹಿಡಿಯಲಾಗಲಿಲ್ಲ. ಪೆಟ್ರೋಲ್ ಬಾಂಬ್ ಹಾಕಿದವರನ್ನು ಪತ್ತೆ ಹಚ್ಚಲಿಲ್ಲ. ಆರ್‌ಎಸ್‌ಎಸ್ ಕಾರ್ಯಕ್ರಮಗಳ ಕುರಿತು ಸಭೆ ನಡೆಸುತ್ತಿರುವುದನ್ನೇ ದೊಡ್ಡ ಅಪರಾಧವೆಂದು ಭಾವಿಸಿ ವಿಎಚ್‌ಪಿ ಮುಖಂಡರನ್ನು ಠಾಣೆಗೆ ಕರೆದೊಯ್ಯಲು ಬಂದಿದ್ದಾರೆ. ಇದು ಹಿಂದೂಗಳ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯವಾಗಿದೆ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಿಡಿಕಾರಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರ ಮೇಲೂ ಹಿಂದೂ ಕಾರ್ಯಕರ್ತರು ಪ್ರಶ್ನೆಗಳ ಸುರಿಮಳೆಗರೆದರು. ಪೊಲೀಸ್ ಅಧಿಕಾರಿಗಳು ಗೂಂಡಾ ರೀತಿ ವರ್ತಿಸಿದ್ದನ್ನು ಎಸ್ಪಿ ಗಮನಕ್ಕೆ ತಂದರು.

ಕೊನೆಗೆ ಎಸ್‌ಪಿ ಅವರು ಎಲ್ಲರನ್ನೂ ಸಮಾಧಾನಪಡಿಸಿದರು. ವಿಎಚ್‌ಪಿ ಮುಖಂಡ ಪುನೀತ್‌ ಅತ್ತಾವರ್ ಅವರ ಮನವೊಲಿಸಿ ನಾಗಮಂಗಲಕ್ಕೆ ಹೋಗದಂತೆ ತಡೆದು ಮಂಗಳೂರಿನತ್ತ ತೆರಳುವುದಕ್ಕೆ ಸೂಚಿಸಿದರು. ನಂತರ ಅಲ್ಲಿಂದ ಅವರು ತೆರಳಿದರು.

ಶರಣು ಪಂಪ್‌ವೆಲ್ ಅಲ್ಲಿಂದ ತೆರಳಿದ್ದರು:

ಮಂಗಳೂರಿನಿಂದ ಪಾಂಡವಪುರಕ್ಕೆ ಆಗಮಿಸಿದ್ದ ಪುನೀತ್ ಅತ್ತಾವರ್ ಮತ್ತು ಶರಣು ಪಂಪ್‌ವೆಲ್ ಪಾಂಡವಪುರ ಆರ್‌ಎಸ್‌ಎಸ್ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದರು. ಶರಣು ಪಂಪ್‌ವೆಲ್‌ರ ಮೊಬೈಲ್ ಲೊಕೇಷನ್ ಪರಿಶೀಲಿಸಿದಾಗ ಅದು ಪಾಂಡವಪುರ ಆರ್‌ಎಸ್‌ಎಸ್ ಕಚೇರಿ ತೋರಿಸಿತ್ತು. ಪೊಲೀಸರಿಗೆ ಈ ವಿಷಯ ಗೊತ್ತಾಗಿ ಅಲ್ಲಿಗೆ ಬರುವ ಮುನ್ನವೇ ಶರಣು ಪಂಪ್‌ವೆಲ್ ಅವರು ಪಾಂಡವಪುರದಿಂದ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ನಾಗಮಂಗಲ ಗಲಭೆ ಹಿನ್ನೆಲೆಯಲ್ಲಿ ಸೋಮವಾರ ನಡೆಯಲಿದ್ದ ಈದ್ ಮೆರವಣಿಗೆ ತಡೆಯುವುದಾಗಿ ಶರಣು ಪಂಪ್‌ವೆಲ್ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ನಾಗಮಂಗಲ ಹಿಂದೂ ಪರ ಸಂಘಟನೆಯವರೊಂದಿಗೆ ಸಭೆ ನಡೆಸುತ್ತಿದ್ದರು ಎಂದು ಪೊಲೀಸರಿಗೆ ಗೊತ್ತಾಗಿದೆ. ಆ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಅಲ್ಲಿ ಶರಣು ಪಂಪ್‌ವೆಲ್ ಕಾಣಿಸಿದಿದ್ದರಿಂದ ಪುನೀತ್ ಅತ್ತಾವರ್ ಅವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು.ವಶಕ್ಕೆ ಪಡೆಯಲಿಲ್ಲ, ಬಂಧಿಸಲೂ ಇಲ್ಲ‘ಮಂಗಳೂರಿನಿಂದ ಬಂದಿದ್ದ ವಿಎಚ್‌ಪಿ ಮುಖಂಡರೆನ್ನಲಾದ ಪುನೀತ್ ಅತ್ತಾವರ್, ಶರಣು ಪಂಪ್‌ವೆಲ್ ಅವರು ನಾಗಮಂಗಲಕ್ಕೆ ತೆರಳುವವರಿದ್ದು ಈ ವೇಳೆ ನಾಗಮಂಗಲದ ಹಿಂದೂ ಸಂಘಟನೆಯವರ ಜೊತೆ ಸಭೆ ನಡೆಸುತ್ತಿರುವ ಮಾಹಿತಿ ದೊರಕಿತ್ತು. ಅವರ ವಿಚಾರಣೆ ಸಲುವಾಗಿ ಪೊಲೀಸರು ಅಲ್ಲಿಗೆ ತೆರಳಿದ್ದರೇ ವಿನಃ ವಶಕ್ಕೆ ಪಡೆಯಲಲ್ಲ. ಅವರನ್ನು ಬಂಧಿಸಲೂ ಇಲ್ಲ. ರಾತ್ರಿಯೇ ಅವರು ಮಂಗಳೂರಿಗೆ ತೆರಳಲು ಒಪ್ಪಿದ್ದರಿಂದ ಕಳುಹಿಸಿಕೊಟ್ಟಿದ್ದೇವೆ.’

- ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ