ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಪ್ರಯತ್ನ

KannadaprabhaNewsNetwork |  
Published : Feb 27, 2025, 12:33 AM IST
ಚಿತ್ರ 3 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಓಬಳಾಪುರ ಲಂಬಾಣಿ ತಾಂಡಾದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಸಚಿವ ಡಿ. ಸುಧಾಕರ್‌ ಉದ್ಘಾಟಿಸಿದರು.

ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಡಿ.ಸುಧಾಕರ್‌ ಹೇಳಿಕೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ತಾಲೂಕಿನ ಜೆಜಿ ಹಳ್ಳಿ ಹೋಬಳಿಯ ಓಬಳಾಪುರ ಲಂಬಾಣಿ ತಾಂಡಾದಲ್ಲಿ ಹಮ್ಮಿಕೊಂಡಿದ್ದ 286ನೇ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಓಬಳಾಪುರ ತಾಂಡ ಅತೀ ದೊಡ್ಡ ಲಂಬಾಣಿ ತಾಂಡಾವಾಗಿದ್ದು, 2008ರಲ್ಲಿ ನಾನು ಈ ಕ್ಷೇತ್ರದಲ್ಲಿ ಚುನಾವಣೆಗೆ ಬಂದಾಗ ಈ ತಾಂಡಾದ ಪ್ರತಿ ವೋಟ್ ನನಗೇ ಬಂದಿದ್ದವು. 2008ರ ನಂತರ ತಾಲೂಕಿನ ತಾಂಡಾಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದರು.

ರಸ್ತೆ, ನೀರು, ಬೋರ್ ವೆಲ್‌ಗಳು ಹೀಗೆ ನೂರಾರು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಈ ತಾಂಡಾಕ್ಕೆ ಕುಡಿಯುವ ನೀರಿನ ಅಭಾವವಿದೆ ಎಂಬ ಬೇಡಿಕೆ ಇಟ್ಟಿದ್ದೀರಿ. ಈಗಾಗಲೇ ಮಾರಿಕಣಿವೆಯಿಂದ ನೀರು ತರುವ ಪೈಪ್ ಲೈನ್ ಕೆಲಸ ತ್ವರಿತವಾಗಿ ನಡೆಯುತ್ತಿದೆ. ಮುಂದಿನ ಬೇಸಿಗೆ ಹೊತ್ತಿಗೆ ನಿಮಗೆಲ್ಲ ಮಾರಿಕಣಿವೆಯಿಂದ ಕುಡಿಯುವ ನೀರು ಲಭ್ಯವಾಗಲಿವೆ. ಶಾಲೆಗೆ ಅಡುಗೆ ಕೋಣೆ, ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿಯನ್ನು ಶೀಘ್ರವೇ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ. ಬಿಜೆಪಿ ಜೆಡಿಎಸ್‌ನವರಂತೆ ನಾವು ಮಾತು ತಪ್ಪಲ್ಲ. ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ಮಹಿಳೆಯರಿಗೆ 2 ಸಾವಿರ ರು. ಗೃಹಲಕ್ಷ್ಮಿ ಹಣ ಬರುತ್ತದೆ. ಅದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಯುವಕರು ಸೇವಾಲಾಲ್ ಮಹಾರಾಜರ ಆದರ್ಶ ಹಾಗೂ ತತ್ವಗಳನ್ನು ಪರಿಪಾಲನೆ ಮಾಡಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಬುದ್ಧಿವಂತರು ಮಾತ್ರ ಮುಂದೆ ಬರಲು ಸಾಧ್ಯ. ಲಂಬಾಣಿ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚು ಆಸಕ್ತಿ ವಹಿಸಬೇಕು. ಶಿಕ್ಷಣ, ಹೋರಾಟ ಮತ್ತು ಸಂಘಟನೆಯಿದ್ದಲ್ಲಿ ಜಯ ದೊರಕಲಿದೆ ಎಂದರು.

ಈ ವೇಳೆ ಜಿಪಂ ಮಾಜಿ ಸದಸ್ಯ ನಾಗೇಂದ್ರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ಕೆಪಿಸಿಸಿ ಸದಸ್ಯರಾದ ಅಮೃತೇಶ್ವರ ಸ್ವಾಮಿ, ಕಂದಿಕೆರೆ ಸುರೇಶ್ ಬಾಬು, ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಡಾ.ಸುಜಾತಾ, ಟಿ ಚಂದ್ರಶೇಖರ್, ಜೆಜಿ ಹಳ್ಳಿ ಕೇಶವ, ರವಿಚಂದ್ರನಾಯ್ಕ, ರಜಿಯಾ ಸುಲ್ತಾನ್ ಹಾಗೂ ತಾಂಡಾದ ಗ್ರಾಮಸ್ಥರು ಹಾಜರಿದ್ದರು.ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿದ ಸಚಿವರು

ಓಬಳಾಪುರ ತಾಂಡಾದಲ್ಲಿ ಹಮ್ಮಿಕೊಂಡಿದ್ದ ಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರು ಪಾಲ್ಗೊಂಡು ಮಹಿಳೆಯರೊಂದಿಗೆ, ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿದರು. ಜನರ ಒತ್ತಾಯಕ್ಕೆ ಮಣಿದ ಸಚಿವರು ಒಂದೆರಡು ಸ್ಟೆಪ್ ಹಾಕಿ ಲಂಬಾಣಿ ತಾಂಡಾದ ಜನರ ಸಂತೋಷಕ್ಕೆ ಕಾರಣರಾದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ