ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಪಟ್ಟಣ ಪಂಚಾಯಿತಿಯನ್ನು ಪುರಸಭೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವತಿಯಿಂದ ಮಂಜೂರಾದ ಅಮೃತ್-2 ಯೋಜನೆಯ 2 ಕೋಟಿ 69 ಲಕ್ಷ ರು. ವಿವಿಧ ಕಾಮಗಾರಿಯ ಶಂಕುಸ್ಥಾಪನೆಯನ್ನು ಪಟ್ಟಣದ ನೀರು ಸರಬರಾಜು ಕೇಂದ್ರದಲ್ಲಿ ನೆರವೇರಿಸಿ, ಪುರಸಭೆಯಾದರೆ ಸರ್ಕಾರದ ಅನುದಾನವು ಹೆಚ್ಚಾಗಿ ಬರುತ್ತದೆ ಎಂದರು.
ನಮ್ಮ ಪಟ್ಟಣ್ಣದಲ್ಲಿ 14 ಸಾವಿರಕ್ಕಿಂತ ಹೆಚ್ಚಿಗೆ ಜನಸಂಖ್ಯೆಯಾಗುತ್ತಿಲ್ಲ, ಆದ್ದರಿಂದ ಪಟ್ಟಣ ಪಂಚಾಯಿತಿ ಪುರಸಭೆಯಾಗಲು ಪಟ್ಟಣದ ಯಡೆಹಳ್ಳಿಕೆರೆ, ಇಂದಾವರ, ತುಡ್ಕಿ, ಬದನೆಹಿತ್ಲು, ಚಿಟ್ಟೆಬೈಲು, ಕುರುವಳ್ಳಿ, ಇಂದಿರಾನಗರವನ್ನು ಪಟ್ಟಣಕ್ಕೆ ಸೇರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.ಕೋಳಿಕಾಲು ಗುಡ್ಡ, ಶಂಕರಗುಡ್ಡ, ಕುರುವಳ್ಳಿ ಮುಂತಾದ ಪ್ರದೇಶವನ್ನು ನನ್ನ ಅವಧಿಯಲ್ಲಿ ಕೊಳಜೆ ನೈರ್ಮಲ್ಯಗೆ ಸೇರಿಸಿದ್ದರಿಂದ ಇಂದು ಅನುದಾನ ಬರುತ್ತಿದೆ, ಪಟ್ಟಣ ಪಂಚಾಯಿತಿಗೆ ನನ್ನ ಪ್ರಾದೇಶಿಕ ಅಭಿವೃದ್ಧಿಯಲ್ಲಿ ಹಣ ಮಂಜೂರಾತಿಯಾದರೆ ಹೆಚ್ಚಿನ ಹಣ ನೀಡುತ್ತೇನೆ ಎಂದರು.
ಮಲೆನಾಡು ಪ್ರಾಧಿಕಾರದ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ಸರ್ಕಾರದಿಂದ ಕಡಿಮೆ ಹಣ ಪಟ್ಟಣ ಪಂಚಾಯಿತಿಗೆ ಬಂದರು ಆ ಹಣ ಬಳಸಿ ಸುಂದರ ಪಟ್ಟಣವನ್ನಾಗಿ ಮಾಡಿದ್ದಾರೆ, ಪಟ್ಟಣದ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಮಾಡುವ ಪ್ರಯತ್ನ ಪಟ್ಟಣ ಪಂಚಾಯಿತಿಯಿಂದ ಆಗಬೇಕು, ಹಾಗೆಯೇ ಸರ್ಕಾರದಿಂದ ಬಂದ ಈ ಹಣದಲ್ಲಿ ಗುಣಮಟ್ಟದ ಕೆಲಸ ಆಗುವ ಹಾಗೆ ಗುತ್ತಿಗೆದಾರರ ಮೇಲೆ ನಿಗಾ ಇಡಬೇಕೆಂದರು.ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಸಾದಿ ಮಾತನಾಡಿ, ಪಟ್ಟಣದ ನೀರು ಸರಬರಾಜು ಘಟಕಕ್ಕೆ ಒಳಚರಂಡಿ ಮಂಡಳಿಯಿಂದ 2ಕೋಟಿ 69 ಲಕ್ಷ ಹಣ ಬಂದಿದೆ. ಈ ಹಣದಲ್ಲಿ 975 ಅಡಿ ರಸ್ತೆ, 1300 ಅಡಿ ಕಾಂಪೌಂಡ್ ಮಾಡಲಿದ್ದೇವೆ, ಕೇಂದ್ರ ಸರ್ಕಾರ 50% ರಾಜ್ಯ ಸರ್ಕಾರ 40% ಹಾಗೂ ಪಟ್ಟಣ ಪಂಚಾಯತಿ 10% ಬರಿಸಲಿದೆ ಎಂದರು.
ಈ ಹಿಂದೆ ನಮ್ಮ ಶಿವಮೊಗ್ಗದ ಜಿಲ್ಲಾಧಿಕಾರಿಯಾದ ಸ್ವೆಲ್ವಮಣಿಯವರು ಇಂದು ಎಸ್.ಬಿ.ಎಂ. ನ ಎಂ.ಡಿ ಯಾಗಿದ್ದಾರೆ, ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ 5 ಕೋಟಿಯ ಕಿರು ಯೋಜನೆ ಮಾಡಿ ತನ್ನಿ ಮಂಜೂರಾತಿ ಮಾಡುತ್ತೇನೆ ಎಂದಿದ್ದರು, 5 ಕೋಟಿಯ ಕ್ರಿಯಾ ಯೋಜನೆ ಸಹ ತಯಾರಾಗಿದ್ದು, ಸದ್ಯದಲ್ಲೆ ಮಂಜೂರಾತಿಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲಾ ಪಕ್ಷದ ನಾಯಕರೂ ಬೆಂಬಲ ನೀಡಿದ್ದಾರೆ. ಹಾಗೆಯೇ ಪಟ್ಟಣ ಪಂಚಾಯಿತಿ ಎಲ್ಲಾ ಸದಸ್ಯರುಗಳ ಬೆಂಬಲದಿಂದ ಇಂದು ಪಟ್ಟಣ ಪಂಚಾಯಿತಿ ಸುಂದರವಾಗಿ ನಿರ್ಮಾಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಗೀತಾ ರಮೇಶ್, ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ರಾಘವೇಂದ್ರ ಶೆಟ್ಟಿ, ನಮ್ರತ್, ಶಬ್ನಂ, ಮಂಜುಳಾ ನಾಗೇಂದ್ರ, ಮುಖ್ಯಾಧಿಕಾರಿ ನಾಗರಾಜ್, ಎಇಇ ರವಿಕುಮಾರ್ ಮುಂತಾದವರಿದ್ದರು.