ಕಾಂಗ್ರೆಸ್‌ನಿಂದ ಜಾತಿ ಒಡೆಯುವ ಪ್ರಯತ್ನ

KannadaprabhaNewsNetwork | Published : Oct 12, 2023 12:01 AM

ಸಾರಾಂಶ

ನಮೋ ಬ್ರಿಗೇಡ್ ವತಿಯಿಂದ ಆಯೋಜಿಸಿರುವ ಜನ ಗಣ ಮನ ಬೆಸೆಯೋಣ ಯಾತ್ರೆ ಹಾವೇರಿಗೆ ಆಗಮಿಸಿದ ವೇಳೆ ಅದ್ಧೂರಿ ಸ್ವಾಗತ ಕೋರಲಾಯಿತು. ಬಳಿಕ ನಮೋ ಭಾರತ ಬಹಿರಂಗ ಸಮಾವೇಶ ನಡೆಯಿತು.

ಹಾವೇರಿ: ಕಾಂಗ್ರೆಸ್‌ನವರು ಜಾತಿ ಜಾತಿಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜಾತಿಗಳನ್ನು ಬೆಸೆಯುವ ಪ್ರಯತ್ನ ಮಾಡಿದ್ದಾರೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಹಾವೇರಿಯಲ್ಲಿ ನಮೋ ಬ್ರಿಗೇಡ್ ನ ''''ಜನ ಗಣ ಮನ ಬೆಸೆಯೋಣ'''' ಬೈಕ್ ಯಾತ್ರೆ ಬಳಿಕ ತಾಲೂಕಿನ ದೇವಗಿರಿಯಲ್ಲಿ ಆಯೋಜಿಸಿದ್ದ "ನಮೋ ಭಾರತ " ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು. ಗೃಹಲಕ್ಷ್ಮೀ, ಕರೆಂಟ್ ಫ್ರೀ ಕೊಡುತ್ತೇನೆ ಎಂದರೆ ಜನ ಮತ ಹಾಕುತ್ತಾರೆ. ಆದರೆ ಫ್ರೀ ಕೊಡುವ ನೆಪದಲ್ಲಿ ಎಲ್ಲವನ್ನ ಕಿತ್ತುಕೊಳ್ಳುತ್ತಿದ್ದಾರೆ. ಗ್ಯಾರಂಟಿ ಹೇಳದೆ ಸೈಲೆಂಟಾಗಿ ವ್ಯಾಕ್ಸಿನ್ ಕೊಟ್ಟಿದ್ದು ಮೋದಿ. ನಮ್ಮಲ್ಲಿ ಕೆಲವು ಮಂತ್ರಿಗಳು ಕುಂಕುಮ ಇಡುವುದು ಬೇಡ ಎನ್ನುತ್ತಾರೆ. ಹಿಂದೂ ಧರ್ಮ ನಾಶವಾಗಲಿ ಎಂದು ಹೇಳುವ ಮಂತ್ರಿಗಳು ಇದೇ ಕಾಂಗ್ರೆಸ್ ಸರ್ಕಾರದಲ್ಲಿದ್ದಾರೆ. ಇಂಗ್ಲೆಂಡ್‌ ಪ್ರಧಾನಿ ನಾನು ಹಿಂದೂ ಎಂದು ಹೇಳುವಂತೆ ಮಾಡಿದ್ದು ಪ್ರಧಾನಿ ಮೋದಿಯವರು ಎಂದರು.

ಮೋದಿ ಗೆದ್ದರೆ ಚಿನ್ನದಂತಹ ರಸ್ತೆ ನಿರ್ಮಾಣ ಎಂದಿದ್ದನ್ನು ಕಾಂಗ್ರೆಸ್‌ನವರು ಗೇಲಿ ಮಾಡಿ, ಎಲ್ಲಿ ಚಿನ್ನದ ರಸ್ತೆ ಎಂದು ಕೇಳುತ್ತಿರುವುದು ಅವರ ಬುದ್ಧಿ ಹಿಡಿತದಲ್ಲಿ ಇಲ್ಲ ಎನ್ನುವುದಕ್ಕೆ ನಿದರ್ಶನ. ಅಟಲ್ ಬಿಹಾರಿ ವಾಜಪೇಯಿ ಚತುಷ್ಪಥ ಹೆದ್ದಾರಿ ಮೂಲಕ ಸಾರಿಗೆಗೆ ಒತ್ತು ನೀಡಿದ್ದಾರೆ. ವಾಜಪೇಯಿ ಆನಂತರ ಮೋದಿ ರಸ್ತೆಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ದೆಹಲಿ, ಮುಂಬೈಗಳಲ್ಲಿ ಅತ್ಯಂತ ವಿಶಾಲ ಹಾಗೂ ಉದ್ದನೆಯ ಹೆದ್ದಾರಿ ನಿರ್ಮಾಣ ಮಾಡಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ವಂದೇ ಭಾರತ ರೈಲು ಬಿಡುವ ಮೂಲಕ ರೈಲ್ವೆ ಇಲಾಖೆಯಲ್ಲಿ ಕ್ರಾಂತಿ ಮಾಡಿದ್ದು, ಸದ್ಯದಲ್ಲಿ ಜಪಾನ್ ದೇಶದೊಂದಿಗೆ ಒಪ್ಪಂದವಾಗಿದೆ. 24 ಬುಲೆಟ್ ರೈಲು ಬರುತ್ತಿವೆ ಎಂದರು.ಮಸೀದಿ ಒಡೆದರೆ ಹಿಂದೂ ಧರ್ಮ ಉಳಿಯುವುದಿಲ್ಲ ಎನ್ನುತ್ತಾರೆ. ಆದರೆ ಬಸವಣ್ಣನವರ ನಾಡು, ಹಿಂದೂ ಧರ್ಮವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂಬುದು ಮುಸ್ಲಿಮರಿಗೆ ಗೊತ್ತಿಲ್ಲ. ಪೈಗಂಬರ್ ಹಾಗೂ ಔರಂಗಜೇಬ, ಟಿಪ್ಪುಗೆ ಯಾವ ಸಂಬಂಧವಿದೆ? ಶಿವಮೊಗ್ಗದಲ್ಲಿ ಗಲಭೆ ಎಬ್ಬಿಸಿದ ಮುಸ್ಲಿಂ ಯುವಕರು ಮಾಡಿದ ಘಟನೆಯ ಕುರಿತು ಹಿರಿಯ ಮುಸ್ಲಿಮರು ತಲೆಗೆ ಬಾರಿಸಿ ಬುದ್ಧಿ ಹೇಳಬೇಕು. ಜನವರಿಯಲ್ಲಿ ಆಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತದೆ. ಮೋದಿ ಹಾಗೂ ಯೋಗಿಜೀ ಅವರ ಧರ್ಮದ ಮೇಲಿನ ಅಭಿಮಾನ ಶ್ಲಾಘನೀಯ ಎಂದರು.ಇಸ್ರೇಲ್ ದೇಶದ ಸುತ್ತ ಮುತ್ತ ಮುಸ್ಲಿಂ ರಾಷ್ಟ್ರಗಳಿದ್ದರೂ ಎದುರಿಸಿ, ಹಮಾಸ್ ಉಗ್ರರ ವಿರುದ್ಧ ಯುದ್ಧ ಸಾರಿದ್ದಾರೆ. ಮೋದಿ ಎಂಬ ಬಲವಾದ ಆಸ್ತ್ರದಿಂದ ಭಾರತ ದೇಶ ಕ್ಷೇಮವಾಗಿದೆ. ಮೋದಿ ಇಸ್ರೇಲ್ ಪರ ಬೆಂಬಲ ನೀಡಿದರೆ, ರಾಹುಲ್ ಗಾಂಧಿ ವೋಟ್ ಗಳಿಕೆಗಾಗಿ ಪ್ಯಾಲೆಸ್ತೀನ್ ಪರ ಬೆಂಬಲಕ್ಕೆ ನಿಂತಿರುವುದು ಉಗ್ರರಿಗೆ ಬೆಂಬಲ ನೀಡಿದಂತೆ ಎಂದು ಹೇಳಿದರು.ಇದಕ್ಕೂ ಮುನ್ನ ನಡೆದ ಬೈಕ್ ಯಾತ್ರೆ ಸಂದರ್ಭದಲ್ಲಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಸಿದ್ದರಾಜ ಕಲಕೋಟಿ, ನಿರಂಜನ ಹೇರೂರ, ಅಭಿಷೇಕ ಉಪ್ಪಿನ, ಪಾಲಾಕ್ಷಗೌಡ ಪಾಟೀಲ ಇತರರು ಇದ್ದರು.

Share this article