ನಕಲಿ ದಾಖಲೆ ಸೃಷ್ಟಿಸಿ ನಗರದ ಹೊರವಲಯದಲ್ಲಿದ್ದ ಆದಿಚುಂಚನಗಿರಿ ಮಠದ ಸುಮಾರು 100 ಕೋಟಿ ರು. ಮೌಲ್ಯದ 6 ಎಕರೆ ಭೂಮಿ ಕಬಳಿಕೆಗೆ ಯತ್ನಿಸಿದ್ದ ಆರೋಪದ ಮೇರೆಗೆ 6 ಮಂದಿ ಸರ್ಕಾರಿ ಅಧಿಕಾರಿಗಳು ಸೇರಿದಂತೆ 11 ಮಂದಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಕಲಿ ದಾಖಲೆ ಸೃಷ್ಟಿಸಿ ನಗರದ ಹೊರವಲಯದಲ್ಲಿದ್ದ ಆದಿಚುಂಚನಗಿರಿ ಮಠದ ಸುಮಾರು 100 ಕೋಟಿ ರು. ಮೌಲ್ಯದ 6 ಎಕರೆ ಭೂಮಿ ಕಬಳಿಕೆಗೆ ಯತ್ನಿಸಿದ್ದ ಆರೋಪದ ಮೇರೆಗೆ 6 ಮಂದಿ ಸರ್ಕಾರಿ ಅಧಿಕಾರಿಗಳು ಸೇರಿದಂತೆ 11 ಮಂದಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೇಗೂರಿನ ರಿಯಲ್ ಎಸ್ಟೇಟ್ ಏಜೆಂಟ್ ಫ್ರಾನ್ಸಿಸ್, ಆರೋಗ್ಯಸ್ವಾಮಿ, ಕೆಂಗೇರಿಯ ಎಂ.ಶ್ರೀನಿವಾಸ್, ಲಗ್ಗೆರೆಯ ನರೇಂದ್ರಕುಮಾರ್, ಬೇಗೂರಿನ ಜೋಸ್ಪೆನ್, ಕಂದಾಯ ಇಲಾಖೆಯ ಉಪ ತಹಸೀಲ್ದಾರ್‌ಗಳಾದ ದೀಪಕ್, ಎಂ.ಪಿ.ರವಿ, ರಾಜಸ್ವ ನಿರೀಕ್ಷಕರುಗಳಾದ ಕಿರಣ್ ಕುಮಾರ್, ಅರುಣ್ ಕುಮಾರ್ ಮತ್ತು ಗ್ರಾಮ ಆಡಳಿತಾಧಿಕಾರಿಗಳಾದ ಶಿವಪ್ರಸಾದ್, ಸತೀಶ್ ಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ ನಕಲಿ ದಾಖಲೆಯನ್ನು ಜಪ್ತಿ ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಕೆಂಗೇರಿ ಸಮೀಪದ ಕಂಬೀಪುರ ಗ್ರಾಮದಲ್ಲಿ ಮಠದ ಆಸ್ತಿಗೆ ತಮಗೆ ಸೇರಿದ್ದು ಎಂದು ಕೆಲ ಖಾಸಗಿ ವ್ಯಕ್ತಿಗಳು ಅತಿಕ್ರಮ ಪ್ರವೇಶ ಮಾಡಿದ್ದರು. ಈ ಬಗ್ಗೆ ಮಠದ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಭೂ ಅಕ್ರಮ ಬೆಳಕಿಗೆ ಬಂದಿದೆ ಎಂದು ನೈಋತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ತಿಳಿಸಿದ್ದಾರೆ.
ಹೇಗೆ ವಂಚನೆ?
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿಯ ಕಂಬೀಪುರ ಗ್ರಾಮದ ಸ.ನಂ.43ರಲ್ಲಿ 45 ಎಕರೆ ಜಮೀನು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ಗೆ ಸೇರಿದೆ. ಈ ಭೂಮಿ ಪೈಕಿ 6 ಎಕರೆ ಕಬಳಿಕೆಗೆ ಕೆಲವು ಕಂದಾಯ ಅಧಿಕಾರಿಗಳೊಂದಿಗೆ ಸೇರಿಕೊಂಡು ರಿಯಲ್ ಎಸ್ಟೇಟ್ ಏಜೆಂಟ್ ಫ್ರಾನ್ಸಿಸ್ ಸಂಚು ರೂಪಿಸಿದ. ಅಂತೆಯೇ 1960-61ರಲ್ಲಿ ಸೈನಿಕರ ಕೋಟಾದಡಿ ಇದೇ ಸ.ನಂ.43 ರಲ್ಲಿ 6 ಎಕರೆ ಜಮೀನು ಮಂಜೂರಾಗಿರುವುದಕ್ಕೆ ತಾನು ಆರೋಗ್ಯಸ್ವಾಮಿ ಅವರ ಮಗ/ವಾರಸುದಾರನಂತೆ ನಕಲಿ ವಂಶವೃಕ್ಷ, ಮರಣ ಪ್ರಮಾಣ ಪತ್ರ ಮತ್ತು ನಕಲಿ ಸಾಗುವಳಿ ಮಂಜೂರಾತಿ ಪ್ರಮಾಣ ಪತ್ರ ಹಾಗೂ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಫ್ರಾನ್ಸಿಸ್ ಸೃಷ್ಟಿಸಿದ್ದ.
ಆನಂತರ ಅಕ್ರಮವಾಗಿ ಜಮೀನಿನ ಖಾತಾವನ್ನು ಮಾಡಿಸಿಕೊಂಡು ತಮ್ಮ ಸಂಸ್ಥೆಗೆ ಮಂಜೂರಾಗಿರುವ 45 ಎಕರೆ ಜಮೀನಿನಲ್ಲಿ 6 ಎಕರೆ ಜಮೀನು ತನ್ನದೆಂದು ತಕರಾರು ತೆಗೆದು ಫ್ರಾನಿಸ್ಸ್ ಅತಿಕ್ರಮ ಪ್ರವೇಶ ಮಾಡಿದ್ದ. ಈ ಬಗ್ಗೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಜೂ.6 ರಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಭೂ ದಾಖಲೆಗಳನ್ನು ಪರಾಮರ್ಶಿಸಿದಾಗ ಕಂದಾಯ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್‌ಗಳ ಭಾನಗಡಿ ಬಯಲಾಗಿದೆ.
ನಕಲಿ ವಂಶವೃಕ್ಷ, ಮರಣ ಪ್ರಮಾಣ ಪತ್ರ ಮತ್ತು ನಕಲಿ ಗ್ರ್ಯಾಂಟ್ ಸರ್ಟಿಫಿಕೇಟ್ ದಾಖಲಾತಿಗಳನ್ನು ಸೃಷ್ಟಿಸಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ಗೆ ಸೇರಿದ 6 ಎಕರೆ ಜಮೀನನ್ನು ಅಕ್ರಮವಾಗಿ ಕಬಳಿಸಲು ಪ್ರಯತ್ನಿಸಿದ ಆರೋಪಿಗಳಾದ ಫ್ರಾನ್ಸಿಸ್, ಆರೋಗ್ಯಸ್ವಾಮಿ, ಶ್ರೀನಿವಾಸು, ನರೇಂದ್ರಕುಮಾರ್, ಜೋಸ್ಪೆನ್ ಮತ್ತು ಕಂದಾಯ ಇಲಾಖೆಯ ಉಪ ತಹಸೀಲ್ದಾರ್‌ಗಳಾದ ದೀಪಕ್, ಎಂ.ಪಿ.ರವಿ, ರಾಜಸ್ವ ನಿರೀಕ್ಷಕರಾದ ಕಿರಣ್ ಕುಮಾರ್, ಅರುಣ್ ಕುಮಾರ್ ಮತ್ತು ಗ್ರಾಮ ಆಡಳಿತಾಧಿಕಾರಿಗಳಾದ ಶಿವಪ್ರಸಾದ್, ಸತೀಶ್ ಕುಮಾರ್‌ನನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.
ಭೂಮಿ ಮಾಫಿಯಾದ ಸೂತ್ರಧಾರ
ಪ್ರಕರಣದ ಮೂಲ ಸೂತ್ರದಾರ ಆರೋಪಿ ಆರೋಗ್ಯಸ್ವಾಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಲು ಮತ್ತು ಅಕ್ರಮವಾಗಿ ಖಾತಾ ಮಾಡಲು ಸಹಕರಿಸಿದ ನರೇಶ್‌ಗೌಡ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಯಾದ ಶ್ರೀಕಾಂತ್. ಮಂಜುನಾಥ್, ರಾಘವೇಂದ್ರ ತಲೆಮರೆಸಿಕೊಂಡಿದ್ದಾರೆ. ಈ ಪ್ರಕರಣ ಸೇರಿದಂತೆ ಇನ್ನೂ ಕೆಲವು ಜಮೀನುಗಳಿಗೂ ಸಹ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಕಬಳಿಸಲು ಪ್ರಯತ್ನಿಸಿರುವ ಮಾಹಿತಿ ಮತ್ತು ದಾಖಲೆಗಳು ತನಿಖೆಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಡಿಸಿಪಿ ಅನಿತಾ ಹೇಳಿದ್ದಾರೆ.ಕೆಂಗೇರಿ ನಾಡ ಕಚೇರಿಯೇ ಅಡ್ಡೆ
ಆದಿಚುಂಚನಗಿರಿ ಮಠದ ಆಸ್ತಿ ಕಬಳಿಕೆಗೆ ಕೆಂಗೇರಿ ನಾಡ ಕಚೇರಿಯನ್ನು ಆರೋಪಿಗಳು ಅಡ್ಡೆ ಮಾಡಿಕೊಂಡಿದ್ದರು. ಈ ನಾಡ ಕಚೇರಿಯಲ್ಲಿ ಉಪ ತಹಸೀಲ್ದಾರ್‌ಗಳಾಗಿ ದೀಪಕ್, ಎಂ.ಪಿ.ರವಿ, ಕಂದಾಯ ನಿರೀಕ್ಷಕರಾಗಿ ಎ.ಸಿ.ಅರುಣ್ ಕುಮಾರ್ ಹಾಗೂ ಗ್ರಾಮ ಆಡಳಿತಾಧಿಕಾರಿ ಶಿವಪ್ರಸಾದ್ ಕೆಲಸ ಮಾಡಿದ್ದರು ಎಂದು ತಿಳಿದು ಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.