ಕನ್ನಡಪ್ರಭ ವಾರ್ತೆ ವಿಜಯಪುರ
ಈ ವೇಳೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ದೇಶದಲ್ಲಿ ತುರ್ತು ಪರಸ್ಥಿತಿ ಹೇರಿದ್ದ ಕುಖ್ಯಾತಿಯ ಕಾಂಗ್ರೆಸ್ ದಲಿತರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸ್ವಲ್ಪವೂ ಗೌರವ ಕೊಡದೆ ಅವಮಾನಿಸಿದೆ. ಕಾಂಗ್ರೆಸ್ ಈಗ ಅಮಿತ್ ಶಾ ಹೇಳಿಕೆಯನ್ನು ಕಟ್ ಮಾಡಿ ಅವಮಾನ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ.ರವಿ ಅವರನ್ನು ಕಾಂಗ್ರೆಸ್ ಸರ್ಕಾರ ಅಸಾಂವಿಧಾನಿಕವಾಗಿ ಹಾಗೂ ಅಗೌರವದಿಂದ ನಡೆಸಿಕೊಳ್ಳುತ್ತಿದೆ. ಇದೀಗ ಕರ್ನಾಟಕದಲ್ಲೂ ತುರ್ತು ಪರಿಸ್ಥಿತಿ ಹೇರಲು ಹೊರಟಿದೆ. ಪ್ರಜಾಪ್ರಭುತ್ವದ ದೇಗುಲದಂತಿರುವ ಸುವರ್ಣಸೌಧಕ್ಕೆ ಗೂಂಡಾಗಳನ್ನು ಛೂ ಬಿಟ್ಟು ಜನಪ್ರತಿನಿದಿಗಳ ಮೇಲೆ ಹಲ್ಲೆ ನಡೆಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ನಾಯಕ ಸಿ.ಟಿ.ರವಿ ಅವರ ಮೇಲೆ ಹಲ್ಲೆ ನಡೆದಿದ್ದರೂ ಪೊಲೀಸ್ ಇಲಾಖೆ ಅವರನ್ನೇ ಬಂಧಿಸಿದೆ. ಆ ಮೂಲಕ ಈ ಭ್ರಷ್ಟ ಸರ್ಕಾರ ಪೊಲೀಸ್ ಇಲಾಖೆಯನ್ನು ಸಹಿತ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಗೂಂಡಾ ರಾಜ್ಯ ನಿರ್ಮಾಣ ಮಾಡಲು ಹೊರಟಿದೆ ಎಂದು ಟೀಕಿಸಿದರು.ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ ನೇಬಗೇರಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಜಾಪ್ರಭುತ್ವ ಉಳಿಸಿ ಗೂಂಡಾ ಕಾಂಗ್ರೆಸ್ ತೊಲಗಿಸಿ ಎಂಬ ಬೃಹತ್ ಜನಾಂದೋಲನ ಹಮ್ಮಿಕೊಳ್ಳುತ್ತಿದ್ದೇವೆ. ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಬೇಷರತ್ ಬಿಡುಗಡೆ ಮಾಡಿ ಕಾಂಗ್ರೆಸ್ ಗೂಂಡಾಗಳನ್ನು ಜೈಲಿಗೆ ಅಟ್ಟುವವರೆಗೂ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ. ಇದು ಬಿಜೆಪಿ ಪಂಥಾಹ್ವಾನ ಎಂದು ಗುಡುಗಿದರು.