ಹಾನಗಲ್ಲ:
ಕೃಷಿ ಭೂಮಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಹಾಡಲು ಅಂತರ್ಜಲ ಮರುಪೂರಣ ನಮ್ಮ ಮೊದಲ ಆದ್ಯತೆ. ಬೇಡ್ತಿ-ವರದಾ ನದಿ ಜೋಡಣೆ ಅಗತ್ಯವಿದ್ದು ಉನ್ನತ ಮಟ್ಟದಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ಪ್ರಾಮಾಣಿಕ ಯತ್ನ ಮಾಡುವೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.ಬುಧವಾರ ತಾಲೂಕಿನ ವಿವಿಧ ಏತ ನೀರಾವರಿ ಯೋಜನೆಗಳಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬೇಸಿಗೆಗಳಲ್ಲಿ ನೀರಿಲ್ಲದೆ ಬೆಳೆ ಒಣಗುತ್ತಿವೆ. ಕೊಳವೆ ಬಾವಿಗಳಿವೆ. ಅವುಗಳಿಗೆ ಉತ್ತಮ ಅಂತರ್ಜಲ ಬೇಕಾಗಿದ್ದು ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗಳ ಮೂಲಕ ಈ ಕೆಲಸಕ್ಕೆ ಆದ್ಯತೆ ನೀಡಲಾಗುತ್ತಿದೆ. ಹಾನಗಲ್ಲ ತಾಲೂಕಿನಲ್ಲಿರುವ ವರದಾ ಹಾಗೂ ಧರ್ಮಾ ನದಿಗಳಿಗೆ ಚೆಕ್ ಡ್ಯಾಂ ನಿರ್ಮಿಸುವ ಮೂಲಕವೂ ಅಂತರ್ಜಲ ಮರುಪೂರಣಕ್ಕೆ ಅವಕಾಶ ಮಾಡಿಕೊಡಲಾಗುವುದು. ಅಕ್ಟೋಬರ್ ನಂತರ ವರದಾ-ಧರ್ಮಾ ನದಿಯಲ್ಲಿ ಬಹುತೇಕ ನೀರಿನ ಕೊರತೆ ಕಾಣುತ್ತದೆ. ಅದಕ್ಕೂ ಮೊದಲೆ ಕೆರೆ ತುಂಬಿಸುವ ಕಾರ್ಯಕ್ಕೆ ಈ ಏತ ನೀರಾವರಿ ಯೋಜನೆಗಳು ಸಹಕಾರಿ ಎಂದರು.ವರದಾ ನದಿ ಅಕ್ಟೋಬರ್-ನವೆಂಬರ್ ಹೊತ್ತಿಗೆ ಬಹುತೇಕ ನೀರು ಹರಿಯುವುದು ನಿಲ್ಲುತ್ತದೆ. ಇಲ್ಲಿ ಅನೇಕ ಏತ ನೀರಾವರಿ ಯೋಜನೆಗಳು ಈ ವರದಾ ನದಿಯ ನೀರನ್ನೇ ಅವಲಂಬಿಸಿವೆ. ಹೀಗಾಗಿ ಬೇಸಿಗೆಯಲ್ಲಿಯೂ ರೈತರ ಕೃಷಿ ಭೂಮಿಗೆ ನೀರು ಸಿಗಲು ಬೇಡ್ತಿ-ವರದಾ ನದಿ ಜೋಡಣೆಯಾದರೆ ಅತ್ಯುತ್ತಮ. ಈ ದೆಸೆಯಲ್ಲಿ ಸರ್ಕಾರ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಮುದ್ರಕ್ಕೆ ಹೋಗುವ ನೀರನ್ನು ಕೃಷಿ ಅನುಕೂಲಕ್ಕೆ ಒದಗಿಸುವ ಮೂಲಕ ಈ ಭಾಗದ ರೈತರಿಗೆ ಒಳ್ಳೆಯ ನೀರಾವರಿ ಅವಕಾಶ ನೀಡಿದಂತಾಗುತ್ತದೆ ಎಂದು ಸಚಿವರು ಹೇಳಿದರು.
ಇದೇ ವೇಳೆ ಶಾಸಕ ಶ್ರೀನಿವಾಸ ಮಾನೆ, ನರೇಗಲ್ಲ ಹಾಗೂ ಕೂಸನೂರ ಏತ ನೀರಾವರಿ ಯೋಜನೆಗಳಿಗೆ ಮಂಜೂರಿ ನೀಡುವ ಮೂಲಕ ಶೀಘ್ರ ಈ ಯೋಜನೆಗಳು ರೈತರ ಜಮೀನಿಗೆ ನೀರು ಹರಿಸುವಂತಾಗಬೇಕು. ಈ ಎರಡು ಯೊಜನೆಗಳು ಸಿದ್ಧವಾದರೆ ತಾಲೂಕಿನ ಬಹುತೇಕ ಕೃಷಿ ಭೂಮಿಗೆ ಕೆರೆಗಳ ಮೂಲಕ ನೀರು ಹಿರಿಸಿ ಅನುಕೂಲ ಹಾಗೂ ಅಂತರ್ಜಲ ಮರುಪೂರಣದ ಮೂಲಕ ಉತ್ತಮ ನೀರಾವರಿಗೆ ಸಹಕಾರಿಯಾಗಬಲ್ಲದು ಎಂದು ಸಚಿವರಿಗೆಮನವರಿಕೆ ಮಾಡಿದರು.ಮಾಜಿ ತಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮಾಜಿ ಜಿಪಂ ಸದಸ್ಯ ಮಹದೇವಪ್ಪ ಬಾಗಸರ, ವೀರೇಶ ಬೈಲವಾಳ, ರಾಮಣ್ಣ ಶೇಷಗಿರಿ, ವಿಜಯಕುಮಾರ ದೊಡ್ಡಮನಿ, ಮಂಜುನಾಥ ಗೋರಣ್ಣನವರ, ಟಾಕನಗೌಡ ಪಾಟೀಲ, ಭರಮಣ್ಣ ಶಿವೂರ, ಪುಟ್ಟಪ್ಪ ನರೇಗಲ್ಲ, ಚಂದ್ರಪ್ಪ ಜಾಲಗಾರ, ರಾಮಚಂದ್ರ ಕಲ್ಲೇರ ಮೊದಲಾದವರಿದ್ದರು.