ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶಕ್ಕಾಗಿ ಸೇವೆ ಸಲ್ಲಿಸಿದ ಗಾಂಧಿ ಕುಟುಂಬ ಸರ್ವನಾಶ ಮಾಡಿ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವನ್ನು ವಿರೋಧಿಗಳು ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.ಬೆಂಗಳೂರಿನಲ್ಲಿ ಬುಧವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ವಿರೋಧಿಗಳು ಗಾಂಧಿ ಕುಟುಂಬ ನಾಶ ಮಾಡಬೇಕೆಂದು ಹೊರಟಿದ್ದಾರೆ. ಮಾಜಿ ಪ್ರಧಾನಿಗಳಾದ ನೆಹರು, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರದಾಸೆ ಇಲ್ಲದೇ ನಿಸ್ವಾರ್ಥ ಸೇವೆ ಮಾಡುತ್ತಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಇತಿಹಾಸದ ಪುಟದಲ್ಲಿರುವ ಹೆಸರು ಅಳಿಸಬೇಕೆಂಬ ಪ್ರಯತ್ನ ನಡೆಯುತ್ತಿರುವ ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಪ್ರತಿಮೆ ನಿರ್ಮಿಸಿ ಇತಿಹಾಸ ಉಳಿಸುವ ಕೆಲಸವನ್ನು ಕರ್ನಾಟಕ ಕಾಂಗ್ರೆಸ್ ಮಾಡುತ್ತಿದೆ ಎಂದು ಶ್ಲಾಘಿಸಿದರು.ರಾಜೀವ್ ಗಾಂಧಿಯಿಂದ ಐಟಿ ಕ್ರಾಂತಿಗೆ ಬುನಾದಿ
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಐಟಿ ಕ್ರಾಂತಿಗೆ ಬುನಾದಿ ಹಾಕಿದ್ದರಿಂದ ಇಂದು ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಬರುವುದಕ್ಕೆ ಸಾಧ್ಯವಾಗಿದೆ. ಅವರ ಅಧಿಕಾರಾವಧಿಯಲ್ಲಿ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದರು. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ನವೋದರ ಶಾಲೆ ಮತ್ತು ಕೇಂದ್ರೀಯ ವಿದ್ಯಾಲಯ ಆರಂಭಿಸಿದರು.ಯುವ ಜನತೆಗೆ ಶಕ್ತಿ ತುಂಬುವ ಉದ್ದೇಶದಿಂದ ಮತದಾನದ ಹಕ್ಕನ್ನು 21 ರಿಂದ 18 ವರ್ಷಕ್ಕೆ ಇಳಿಕೆ ಮಾಡಿ ದೊಡ್ಡ ಕೊಡುಗೆ ನೀಡಿದರು. ರಾಜ್ಯ ಸರ್ಕಾರದ ಯುವ ನಿಧಿ ಸ್ಥಾಪನೆ ಮಾಡಿ ಯುವಕರಿಗೆ ಆರ್ಥಿಕವಾಗಿ ಸಹಕಾರ ಮಾಡುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಿಕ್ಕೆ ಬಂದರೆ ಯುವಕರಿಗೆ ವೃತ್ತಿ ಆಧಾರಿತ ತರಬೇತಿ ಜತೆಗೆ ಕಂತುಗಳಲ್ಲಿ 1 ಲಕ್ಷ ರು. ನೀಡಲಾಗುವುದು ಎಂದು ಈಗಾಗಲೇ ಎಐಸಿಸಿ ಘೋಷಣೆ ಮಾಡಿದೆ ಎಂದರು.