ಕುಂದಾಪುರ: ಸಮುದ್ರ ತೀರದಲ್ಲಿ ಅಂಬರ್ ಗ್ರೀಸ್ ಮಾರಾಟದ ಬಗ್ಗೆ (ತಿಮಿಂಗಿಲ ವಾಂತಿ) ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆಗೆ ಮಫ್ತಿಯಲ್ಲಿ ಬಂದ ಅರಣ್ಯ ಇಲಾಖೆ ಸಿಐಡಿ ವೀಕ್ಷಣಾ ದಳದ ಅಧಿಕಾರಿಗಳ ಮೇಲೆ ಸ್ಥಳೀಯರು ಗಂಭೀರ ಹಲ್ಲೆ ನಡೆಸಿದ ಘಟನೆ ತಾಲೂಕಿನ ಎಂ. ಕೋಡಿಯಲ್ಲಿ ಬುಧವಾರ ನಡೆದಿದೆ.ಕೋಡಿಯ ಸೌಹಾರ್ದ ಭವನದಲ್ಲಿ ಅಂಬರ್ ಗ್ರೀಸ್ ಡೀಲ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬುಧವಾರ ಮಧ್ಯಾಹ್ನ 1.40ರ ವೇಳೆಗೆ ಮಾರುವೇಷದಲ್ಲಿ ಮಂಗಳೂರಿನಿಂದ ಬಂದಿದ್ದ ಅರಣ್ಯ ಸಂಚಾರಿ ದಳದ ಸಿಐಡಿ ವಿಭಾಗದ ಎಸ್.ಐ ಜಾನಕಿ ಹಾಗೂ ಸಿಬ್ಬಂದಿ ತಂಡ ಶೋಧ ಕಾರ್ಯಾಚರಣೆ ನಡೆಸಿ, ಶಂಕಿತರನ್ನು ವಶಕ್ಕೆ ಪಡೆಯುವ ವೇಳೆ ಆರೋಪಿಗಳು ಹಾಗೂ ಸ್ಥಳೀಯರು ಸೇರಿ ಹಲ್ಲೆ ನಡೆಸಿದ್ದು, ಇಲಾಖೆಯ ಸೇವಾ ಪಿಸ್ತೂಲ್ ಹಾಗೂ 2 ಮೊಬೈಲ್ ಕಿತ್ತು ಕೊಂಡಿರುವ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳಾದ ಅಬೂಬ್ಬಕ್ಕರ್, ಆಸೀಫ್ ಸೇರಿದಂತೆ ಹಲವಾರು ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ಎಸ್.ಐ ನಂಜಾ ನಾಯ್ಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.