ಬೆಳಗಾವಿ ಪಾಲಿಕೆ ಕಚೇರಿಗೆ ಮುತ್ತಿಗೆ ಯತ್ನ

KannadaprabhaNewsNetwork |  
Published : May 27, 2026, 03:15 AM IST
ವಶಕ್ಕೆ | Kannada Prabha

ಸಾರಾಂಶ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸಬೇಕು ಎಂದು ಆಗ್ರಹಿಸಿ ಕನ್ನಡ ಹಿರಿಯ ಹೋರಾಟಗಾರರಾದ ವಾಟಾಳ್ ನಾಗರಾಜ್, ಅಶೋಕ ಚಂದರಗಿ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಮುತ್ತಿಗೆ ಹಾಕುವುದನ್ನು ತಡೆದ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸಬೇಕು ಎಂದು ಆಗ್ರಹಿಸಿ ಕನ್ನಡ ಹಿರಿಯ ಹೋರಾಟಗಾರರಾದ ವಾಟಾಳ್ ನಾಗರಾಜ್, ಅಶೋಕ ಚಂದರಗಿ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಮುತ್ತಿಗೆ ಹಾಕುವುದನ್ನು ತಡೆದ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದರು.

ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಪಾಲಿಕೆ ಕಚೇರಿಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಆವರಣದ ಪುನರ್‌ ಪ್ರತಿಷ್ಠಾಪಿತ ಹಲ್ಮಿಡಿ ಶಾಸನಕ್ಕೆ ಪೂಜೆ ಸಲ್ಲಿಸಿದ ಬಳಿಕ ಪ್ರತಿಭಟನಾಕಾರರು ಮೆರವಣಿಗೆಯ ಮೂಲಕ ಪಾಲಿಕೆ ಕಚೇರಿಯತ್ತ ತೆರಳಲು ಮುಂದಾದರು. ಆದರೆ, ಪಾಲಿಕೆ ಕಚೇರಿ ಬಳಿಯಿದ್ದ ಪೊಲೀಸರು ಅವರನ್ನು ತಡೆದರು. ಈ ವೇಳೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಪ್ರತಿಭಟನಾಕಾರರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಮಹಾಜನ ವರದಿಯೇ ಅಂತಿಮ, ಕನ್ನಡಿಗರ ಭಾವನೆಗಳಿಗೆ ಗೌರವ ನೀಡಿ ಎಂಬ ಘೋಷಣೆಗಳನ್ನು ಕೂಗಿದರು.ವಾಟಾಳ್ ನಾಗರಾಜ್ ನೇತೃತ್ವದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಪಾಲಿಕೆ ಕಚೇರಿ ಕಡೆಗೆ ಸಾಗುತ್ತಿದ್ದ ವೇಳೆ ಆರ್‌ಟಿಒ ವೃತ್ತದ ಬಳಿ ಪೊಲೀಸರು ತಡೆದರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಮುಂದಾದಾಗ ಹಲವರು ರಸ್ತೆಯಲ್ಲೇ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದರು.ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, 2004ರಲ್ಲಿ ಪಾಲಿಕೆಯಲ್ಲಿ ಮಹಾರಾಷ್ಟ್ರ ಪರ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ ಈಗ ಪಾಲಿಕೆಯಲ್ಲಿ ಕನ್ನಡಿಗರೇ ಮೇಯರ್ ಹಾಗೂ ಉಪಮೇಯರ್ ಆಗಿರುವುದರಿಂದ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಗಡಿ ವಿವಾದದ ವಿಚಾರದಲ್ಲಿ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ನಿರ್ಣಯವನ್ನು ಜೂನ್ 2ರೊಳಗೆ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು. ಕನ್ನಡಪರ ಸಂಘಟನೆಗಳು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಹೀಗಾಗಿ ಹೋರಾಟದ ಮೂಲಕ ಒತ್ತಡ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜೂನ್ 2ರೊಳಗೆ ನಿರ್ಣಯ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.ಪ್ರತಿಭಟನೆ ಹಿನ್ನೆಲೆಯಲ್ಲಿ ಪಾಲಿಕೆ, ಜಿಲ್ಲಾಧಿಕಾರಿ ಕಚೇರಿ, ಆರ್‌ಟಿಒ ವೃತ್ತ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿತ್ತು.ಅಖಂಡ ಕರ್ನಾಟಕ ಬಂದ್‌ ಎಚ್ಚರಿಕೆ:

ಬೆಳಗಾವಿ ಮಹಾನಗರ ಪಾಲಿಕೆ ಯಾವ ನೆಲದಲ್ಲಿದೆ ಎಂಬುದನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು. ಬೆಳಗಾವಿ ಕನ್ನಡಿಗರ ಗಂಡು ಮೆಟ್ಟಿದ ನೆಲ. ಅದು ಕರ್ನಾಟಕದ ಅವಿಭಾಜ್ಯ ಅಂಗ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮಹಾಜನ ವರದಿಯೇ ಅಂತಿಮ ಎಂಬುದನ್ನು ಸ್ಪಷ್ಟಪಡಿಸುವ ನಿರ್ಣಯವನ್ನು ಪಾಲಿಕೆಯಲ್ಲಿ ಅಂಗೀಕರಿಸಬೇಕು. ಇದನ್ನು ನಿರ್ಲಕ್ಷಿಸಿದರೆ ಬೆಳಗಾವಿಯಲ್ಲಿ ಕಂಡು ಕೇಳರಿಯದ ರೀತಿ ಹೋರಾಟ ರೂಪುಗೊಳ್ಳಲಿದೆ ಎಂದು ಕನ್ನಡ ಹೋರಾಟಗಾರ ವಾಟಾಳ್‌ ನಾಗರಾಜ ಹೇಳಿದರು.ಇಂದಿನಿಂದ ಒಂದು ವಾರದ ಗಡುವು ನೀಡುತ್ತಿದ್ದೇವೆ. ಈ ಅವಧಿಯೊಳಗೆ ಪಾಲಿಕೆ ಕರ್ನಾಟಕ ಪರ ನಿರ್ಣಯ ಕೈಗೊಳ್ಳಬೇಕು. ಆಗಲೂ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು. ಜೂ.4ರಂದು ಬೆಂಗಳೂರಿನಲ್ಲಿ ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳ ಮುಖಂಡರ ಸಭೆ ಕರೆಯಲಾಗುವುದು. ಪ್ರವೀಣ ಶೆಟ್ಟಿ, ಶಿವರಾಮೇಗೌಡ, ನಾರಾಯಣಗೌಡ ಸೇರಿದಂತೆ ವಿವಿಧ ಬಣಗಳ ಕನ್ನಡಪರ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಅಂತಿಮಗೊಳಿಸಲಾಗುವುದು. ಅಗತ್ಯವಿದ್ದರೆ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಕನ್ನಡಪರ ಸಂಘಟನೆಗಳ ಮುಖಂಡರು, ರಾಜ್ಯ ಪುನರ್‌ರಚನೆ ಕಾಯ್ದೆಯಡಿ ಬೆಳಗಾವಿ ಕರ್ನಾಟಕದ ಭಾಗವಾಗಿದೆ. ಆದ್ದರಿಂದ ಮಹಾನಗರ ಪಾಲಿಕೆ ಕೂಡ ಈ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸೇಲ್ ಕೊರತೆ: ಬಂಕ್‌ಗಳಲ್ಲಿ ವಾಹನಗಳ ದಟ್ಟಣೆ
ಸಮುದಾಯ ಆಸ್ಪತ್ರೆ ಅವ್ಯವಹಾರ ಆರೋಪ