ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯ ಆಹಾರ ಪದಾರ್ಥ ವ್ಯಾಪಾರಸ್ಥರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ (ಎಫ್‌ಎಸ್‌ಎಸ್‌ಎ) ವತಿಯಿಂದ ಆಹಾರ ನೋಂದಣಿ/ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.ಆಹಾರ ಪದಾರ್ಥ ತಯಾರಕರು, ವಿತರಕರು, ಸಗಟುದಾರರು, ಪ್ಯಾಕರ್‌ಗಳು, ಸಂಗ್ರಹಕಾರರು, ಚಿಲ್ಲರೆ ಮಾರಾಟಗಾರರು, ಡಾಬಾ, ಸ್ವೀಟ್ ಸ್ಟಾಲ್, ಮೆಸ್, ಕ್ಯಾಂಟೀನ್, ಮಾಂಸ, ಮೀನು ಮಾರಾಟಗಾರರು, ಕೋಲ್ಡ್ ಸ್ಟೋರೇಜ್, ರಸ್ತೆಬದಿ ವ್ಯಾಪಾರಿಗಳು ಹಣ್ಣು/ತರಕಾರಿ, ಹಾಲಿನ ವ್ಯಾಪಾರಿಗಳು, ಸಾಗಾಣಿಕೆದಾರರು, ಕ್ಯಾಟರಿಂಗ್, ಸಮುದಾಯ ಭವನ, ಕಲ್ಯಾಣ ಮಂಟಪದವರು, ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕ, ಪೇಯಿಂಗ್‌ಗೆಸ್ಟ್, ಹೋಮ್-ಸ್ಟೇ, ಬಾರ್ ಆ್ಯಂಡ್ ರೆಸ್ಟೋರೆಂಟ್, ರೆಸಾರ್ಟ್, ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ, ಹಾಸ್ಟೆಲ್, ನ್ಯಾಯಬೆಲೆ ಅಂಗಡಿ ನಡೆಸುವವರು ಹಾಗೂ ಇತರ ಎಲ್ಲ ಆಹಾರ ಪದಾರ್ಥಗಳ ವ್ಯಾಪಾರಿಗಳು ಎಫ್‌ಎಸ್‌ಎಸ್‌ಎಐ ನೋಂದಣಿ/ ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕು.ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಂದ ಹೊಟೇಲ್, ಆಹಾರ ಪದಾರ್ಥಗಳ ಅಂಗಡಿಗಳು, ಬೀದಿಬದಿ ವ್ಯಾಪಾರಿಗಳ ವಿರುದ್ಧ ಪದೇಪದೆ ದೂರು ಕೇಳಿಬರುತ್ತಿದ್ದು, ಆಹಾರ ವ್ಯಾಪಾರಿಗಳು, ವ್ಯಾಪಾರ ಸ್ಥಳಗಳು ಅಶುಚಿತ್ವ ಹಾಗೂ ಅನೈರ್ಮಲ್ಯದಿಂದ ಕೂಡಿದ್ದು, ತ್ಯಾಜ್ಯವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ ಎಂಬುದರ ಬಗ್ಗೆ ಇಲಾಖೆಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಆಹಾರ ಪದಾರ್ಥ ವ್ಯಾಪಾರಸ್ಥರಿಗೆ ಪರವಾನಗಿ (ಟ್ರೇಡ್ ಲೈಸನ್ಸ್) ನೀಡುವ ಸಮಯದಲ್ಲಿ ಎಲ್ಲ ಬೀದಿಬದಿ ವ್ಯಾಪಾರಿಗಳ ಶುಚಿತ್ವ ಹಾಗೂ ನೈರ್ಮಲ್ಯ ಕುರಿತಂತೆ ತಪಾಸಣೆ ನಡೆಸಿ ಕ್ರಮಕೈಗೊಳ್ಳುವಂತೆ ಕೋರಲಾಗಿದೆ. ವ್ಯಾಪಾರಸ್ಥರಿಗೆ ಪರವಾನಗಿ ನೀಡುವ ಸಮಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ನೋಂದಣಿ / ಪರವಾನಗಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುವುದರ ಬಗ್ಗೆ ಮಾಹಿತಿ ನೀಡಲು ಈಗಾಗಲೇ ಕೋರಲಾಗಿದೆ.
ಜಿಲ್ಲೆಯಲ್ಲಿನ ಆಹಾರ ಪದಾರ್ಥ ವ್ಯಾಪಾರಸ್ಥರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ಆಹಾರ ನೋಂದಣಿ/ ಪರವಾನಗಿಯನ್ನು ಪಡೆಯದೇ ವ್ಯಾಪಾರ ವಹಿವಾಟು ನಡೆಸುವವರು ತಕ್ಷಣದಲ್ಲೇ ಇಲಾಖೆಯಿಂದ ಆಹಾರ ನೋಂದಣಿ/ ಪರವಾನಗಿಯನ್ನು ಪಡೆದುಕೊಳ್ಳುವುದು, ತಪ್ಪಿದಲ್ಲಿ ಕಾಯ್ದೆಯಡಿ ನೋಟೀಸ್ ಮತ್ತು ದಂಡ ವಿಧಿಸಲಾಗುವುದು.ಹೆಚ್ಚಿನ ಮಾಹಿತಿ ಅವಶ್ಯವಾದಲ್ಲಿ, ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಜಿಲ್ಲಾ ಸರ್ವೇಕ್ಷಣಾ ಘಟಕದ ಆವರಣ, ಓಂಕಾರೇಶ್ವರ ದೇವಸ್ಥಾನದ ರಸ್ತೆ, ಟೋಲ್‌ಗೇಟ್ ಹತ್ತಿರ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿಗೆ ಭೇಟಿ ನೀಡಿ ಪಡೆದುಕೊಳ್ಳಬಹುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿ ಡಾ.ಅನಿಲ್ ಧವನ್ ಇ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.