ಬಿ. ಶೇಖರ್ ಗೋಪಿನಾಥಂ
ನಾಡಹಬ್ಬ ಮಹೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾನುವಾರ ನಾದಲಹರಿ, ಗಾನಸುಧೆ, ನೃತ್ಯವೈಭವವು ಪ್ರೇಕ್ಷಕರ ಮನಮೋಹಿಸಿತು.
ಮೈಸೂರು ಅರಮನೆ ಮುಂಭಾಗದ ವೇದಿಕೆಯಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮದ ಮೂಲಕ ಗಾನಸುಧೆ ಹರಿಸಿದರು. ಚಾಮುಂಡೇಶ್ವರಿ ಶಂಕರಿ ಕೀರ್ತನೆಯೊಂದಿಗೆ ಹಾಡಲು ಆರಂಭಿಸಿದ ವಿಜಯ್ ಪ್ರಕಾಶ್ ಅವರು, ಸಹ ಗಾಯಕರೊಂದಿಗೆ ಹಬ್ಬ... ಹಬ್ಬ... ಇದು ಕರಡುನಾಡ ಮನೆ ಮನೆ ಹಬ್ಬ... ಹಾಡುವ ಮೂಲಕ ದಸರಾ ಹಬ್ಬಕ್ಕೆ ಮೆರುಗು ಹೆಚ್ಚಿಸಿದರು.ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ...ಹಾಡಿಗೆ ಪ್ರೇಕ್ಷಕರೆಲ್ಲ ತಮ್ಮ ಮೊಬೈಲ್ ಕ್ಯಾಮರಾ ಟಾರ್ಚ್ ಹೊಲಾಡಿಸಿ ಧ್ವನಿಗೂಡಿಸಿ ಹಾಡಿ ನಟ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದರು.
ಪೃಥ್ವಿ ಭಟ್, ಶಾಶ್ವತಿ ಕಷ್ಯಪ್ ಮತ್ತು ಅಖಿಲಾ ಅವರು ಸೂಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಹಾಡನ್ನು ಹಾಡಿ ಪ್ರೇಕ್ಷಕರ ಮನಗೆದ್ದರು. ವಿಜಯ್ ಪ್ರಕಾಶ್ ಅವರು ಓಂ ಶಿವೋಂ ಹಂ.. ಓಂ ನಮಃ ಶಿವಾಯ ಎಂದು ಶಿವನ ಸ್ತುತಿಯನ್ನು ಸ್ವರ ಸಲ್ಲಾಪಗಳ ಮೂಲಕ ಹಾಡಿದರು. ಅಲ್ಲದೆ, ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ..., ಜೈಹೋ..ಜೈಹೋ... ಹಾಡನ್ನು ಹಾಡಿದರು.
ಭಾನುವಾರ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಸಾವಿರಾರು ಪ್ರೇಕ್ಷಕರು ನೆರೆದಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಸಂಭ್ರಮಿಸಿದರು.
ಜಗನ್ಮೋಹನ ಅರಮನೆಯಲ್ಲಿ ಚಿಟ್ಟಿಮೇಳ, ಭರತನಾಟ್ಯ, ವಚನ ಗಾಯನ, ಸುಗಮ ಸಂಗೀತ, ಕಲಾಮಂದಿರದಲ್ಲಿ ಪೂಜಾ ಕುಣಿತ, ಸಮೂಹ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಮಹಾನಾಯಕ ಸಾಮ್ರಾಜ್ ಅಶೋಕ್- ನಾಟಕ, ಕಿರು ರಂಗಮಂದಿರದಲ್ಲಿ ಹರಕೆಯ ಕುರಿ ನಾಟಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಮುಪ್ಪು ನಾಟಕ ಮತ್ತು ನಿರಾಕರಣೆ ನಾಟಕ ಪ್ರದರ್ಶನವಾಯಿತು.
ಚಿಕ್ಕಗಡಿಯಾರ ವೇದಿಕೆಯಲ್ಲಿ ಡೊಳ್ಳು ಕುಣಿತ, ಜನಪದ ಗಾಯನ, ತತ್ವಪದ ಗಾಯನ, ರಾಧಾನಾಟ- ಸಣ್ಣಾಟ ಜರುಗಿತು. ಪುರಭವನದಲ್ಲಿ ರಕ್ತರಾತ್ರಿ- ಪೌರಾಣಿಕ ನಾಟಕ, ಕುರುಕ್ಷೇತ್ರ- ನಾಟಕ ಹಾಗೂ ಕುರುಕ್ಷೇತ್ರ ಪೌರಾಣಿಕ ನಾಟಕವು ಪ್ರೇಕ್ಷಕರನ್ನು ರಂಜಿಸಿತು.