ಕನ್ನಡಪ್ರಭ ವಾರ್ತೆ, ಬೀದರ್
ಬಾಲಿವುಡ್‌ನ ಪ್ರಖ್ಯಾತ ನಟ, ಗಾಯಕ ಕಿಶೋರಕುಮಾರ್ ಅವರ 96ನೇ ಜನ್ಮ ದಿನದ ನಿಮಿತ್ತ ಬೀದರ್ ಸಂಗೀತ ಕಲಾ ಮಂಡಳದಿಂದ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ‘ಏಕ್ ಶ್ಯಾಮ್ ಕಿಶೋರ್ ಕೆ ನಾಮ್’ ಸಂಗೀತ ಸಂಜೆ ಕಾರ್ಯಕ್ರಮ ಪ್ರೇಕ್ಷಕರ ಮನ ತಣಿಸಿತು.ಸ್ಥಳೀಯ ಖ್ಯಾತ ಕಲಾವಿದರಾದ ಆಬೀದ್ ಅಲಿ ಖಾನ್, ಮಹೇಶ್ವರಿ ಪಾಂಚಾಳ, ಡಾ.ವಿ.ವಿ.ನಾಗರಾಜ, ಅಂಜಲಿ ಕಮಲಾಪುರೆ ಹಾಗೂ ಕಲಬುರಗಿಯ ಶಬ್ಬೀರ್ ಖಾನ್ ಅವರು ಸುಶ್ರಾವ್ಯವಾಗಿ ಹಾಡಿದ ಹಾಡುಗಳು ಸಭಿಕರನ್ನು ತಲೆದೂಗಿಸುವಂತೆ ಮಾಡಿ, ಚಪ್ಪಾಳೆ ಗಿಟ್ಟಿಸಿ ಕೊಂಡವು. ಕಿಶೋರ್ ಅವರಲ್ಲದೇ ಮಹಮ್ಮದ್ ರಫಿ, ಲತಾ ಮಂಗೇಶ್ಕರ್, ಡಾ.ರಾಜಕುಮಾರ್ ಇತರ ದಿಗ್ಗಜರ ಹಾಡುಗಳು ಸಂಗೀತ ಸಂಜೆಗೆ ರಂಗೇರಿಸಿತು.
ಸಂಗೀತ ಕಲಾ ಮಂಡಳ ಅಧ್ಯಕ್ಷರಾದ ಹಿರಿಯ ಕಲಾವಿದ ರಾಜೇಂದ್ರಸಿಗ್ ಪವಾರ್ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಕಲಾ ಪ್ರತಿಭೆಗಳಿವೆ. ಇತ್ತೀಚೆಗೆ ಝಿ ಟಿವಿ ನಡೆಸಿದ ಸರಿಗಮಪ ಸೀಸನ್ 21ರಲ್ಲಿ ಜಿಲ್ಲೆಯ ಗಾನಕೋಗಿಲೆ ಶಿವಾನಿ ಶಿವದಾಸ ಸ್ವಾಮಿ ಪ್ರಥಮ ಸ್ಥಾನ ಪಡೆದು ಸ್ಥಳೀಯ ಕಲಾವಿದರಿಗೆ ಸ್ಫೂರ್ತಿ ತುಂಬಿದ್ದಾರೆ. ಜಿಲ್ಲೆ ಕಲಾವಿದರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಗೀತ ಕಲಾ ಮಂಡಳ ನಿರಂತರ ಕಾರ್ಯಕ್ರಮ ಆಯೋಜಿಸುತ್ತಿದೆ. ಕಲಾವಿದರಿಗೆ ಪ್ರೋತ್ಸಾಹ ಕೊಡಲು ಸಮಾಜದ ಗಣ್ಯರು, ದಾನಿಗಳು ಮುಂದೆ ಬರಬೇಕು ಎಂದು ಕೋರಿದರು.ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ ಉದ್ಘಾಟಿಸಿದರು. ಬೀದರ್ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಕಾರ್ ಅಧ್ಯಕ್ಷತೆ ವಹಿಸುವರು. ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ ಕೋಟೆ, ಹಿರಿಯ ವೈದ್ಯ ಡಾ.ಸುಭಾಷ ಬಶೆಟ್ಟಿ, ಹಿರಿಯ ಪತ್ರಕರ್ತ ಸದಾನಂದ ಜೋಶಿ, ನಿವೃತ್ತ ಆರ್‌ಟಿಒ ಕೆ.ಟಿ.ವಿಶ್ವನಾಥ, ಬೆಳಗು ಟ್ರಸ್ಟ್ ಅಧ್ಯಕ್ಷ ಅನೀಲ ಕುಮಾರ ದೇಶಮುಖ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಸಂಗೀತ ಕಲಾ ಮಂಡಳ ಉಪಾಧ್ಯಕ್ಷ ರಮೇಶ ಗೋಯಲ್, ಕಾರ್ಯದರ್ಶಿ ಎಸ್‌ಆರ್ ಸಂಗಮಕರ್ ಇತರರಿದ್ದರು.