ಶಿವಮೊಗ್ಗ: ಚೇಸರ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮೇ 9ರಂದು ಸಂಜೆ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಜಯರಾಂ ಭದ್ರಾವತಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯೊಂದಿಗೆ ಮೂಡಿ ಬಂದ ಈ ಚಿತ್ರದ ಹಾಡುಗಳ ಅನಾವರಣ ಕಾರ್ಯಕ್ರಮವನ್ನು ಚಿತ್ರ ತಂಡ ಅದ್ಧೂರಿಯಾಗಿ ನಡೆಸಲು ಉದ್ದೇಶಿಸಿದೆ. ಅಂದು ಚಿತ್ರದ ನಾಯಕ, ನಾಯಕಿ ಸೇರಿದಂತೆ ಇಡೀ ತಂಡವೇ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದೆ. ಅವರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಅರಗ ಜ್ಞಾನೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಬಿ.ವಿ.ಶ್ರೀನಿವಾಸ್ ಹಾಗೂ ಖ್ಯಾತ ನಿರ್ದೇಶಕ ಆರ್.ಚಂದ್ರು ಸೇರಿದಂತೆ ಅನೇಕ ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅನೇಕ ಹಿರಿಯ ಕಲಾವಿದರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.ಉಪೇಂದ್ರ ಅಭಿನಯದ ಬುದ್ಧಿವಂತ-೨ ಚಿತ್ರದ ನಂತರ ’ಚೇಸರ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ, ತೆರೆಗೆ ತರಲು ಮುಂದಾಗಿದ್ದೇನೆ. ಚೇಸರ್ ಒಂದು ನೈಜ ಘಟನೆಯನ್ನಾಧರಿಸಿದ ಚಿತ್ರ. ’ಒಬ್ಬ ಸಬ್ ರಿಜಿಸ್ಟ್ರಾರ್ ಹೇಳಿದ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಎಮೋಷನ್, ಲವ್ , ಸೆಂಟಿಮೆಂಟ್ ಎಲ್ಲಾ ಅಂಶಗಳು ಚಿತ್ರದಲ್ಲಿವೆ ಎಂದರು.ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸಿರುವ ಈ ಚಿತ್ರದ ನಿರ್ಮಾಣಕ್ಕೆ ಶಿವಮೊಗ್ಗದವರೇ ಆದ ಮಾಲತಿ ಶೇಖರ್ ಬಂಡವಾಳ ಹೂಡಿದ್ದು, ಪೋಷಕ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ ಎಂದರು.ಲವ್ ಜಾನರ್ ಜತೆಗೆ ಸಸ್ಪೆನ್ಸ್ ವಿತ್ ಆ್ಯಕ್ಷನ್ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ಸುಮಂತ್ ಶೈಲೇಂದ್ರ ಅವರಿಗೆ ನಾಯಕಿಯಾಗಿ ರಕ್ಷಾ ಮೆನನ್ ನಟಿಸಿದ್ದಾರೆ. ರವಿಶಂಕರ್, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರ ಪ್ರಸಾದ್, ಕಡ್ಡಿಪುಡಿ ಚಂದ್ರು, ಸಂಗೀತ ಮುಂತಾದವರು ’ಚೇಸರ್’ ಚಿತ್ರದ ತಾರಾಬಳಗದಲ್ಲಿದ್ದಾರೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕಿ ಕಾರ್ಯಕಾರಿ ಮಾಲತಿ ಶೇಖರ್, ನಿರ್ಮಾಪಕ ಕಲ್ಮನೆ ಮಂಜಣ್ಣ, ಸೈಲ್ ಡಾನ್ಸ್ ನ ಶಶಿಕುಮಾರ್, ಕರಾಟೆ ಅಸೋಸೊಯೇಷನ್ ವಿನೋದ್, ಶಿವ ಸ್ವಾಮಿ ಇದ್ದರು.