ಲೆಕ್ಕ ಪರಿಶೋಧಕರು ದೇಶದ ಅಭಿವೃದ್ಧಿಯ ವಿನ್ಯಾಸಕಾರರು

KannadaprabhaNewsNetwork | Published : Dec 16, 2023 2:00 AM

ಸಾರಾಂಶ

ಲೆಕ್ಕ ಪರಿಶೋಧಕರು ದೇಶದ ಅಭಿವೃದ್ಧಿಯ ವಿನ್ಯಾಸಕಾರರಾಗಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಉತ್ತಮವಾಗಿಸುವಲ್ಲಿ ಲೆಕ್ಕಪರಿಶೋಧಕರ ಪಾತ್ರ ಪ್ರಮುಖವಾದುದು. ರಾಷ್ಟ್ರ ಕಟ್ಟುವಲ್ಲಿಯೂ ಲೆಕ್ಕ ಪರಿಶೋಧಕರ ಕೊಡುಗೆ ಅಪಾರವಾದುದು ಎಂದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಎಷ್ಟೇ ಶ್ರೀಮಂತನಿದ್ದರೂ ಮನುಷ್ಯನಿಗೆ ಮಾಡುವ ಕೆಲಸದಲ್ಲಿ ಸಂತೃಪ್ತಿ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಮನೆ ಮನೆಯಲ್ಲಿ ನೆಮ್ಮದಿ ನೆಲೆಸಿದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ, ಸಮಾಜದಲ್ಲಿ ನೆಮ್ಮದಿ ಇದ್ದರೆ ಇಡೀ ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ತಿಳಿಸಿದರು.

ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಮಂಗಳವಾರ ನಡೆದ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ)ಯ ಹುಬ್ಬಳ್ಳಿ ಶಾಖೆಯ 36ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಲೆಕ್ಕ ಪರಿಶೋಧಕರು ದೇಶದ ಅಭಿವೃದ್ಧಿಯ ವಿನ್ಯಾಸಕಾರರಾಗಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಉತ್ತಮವಾಗಿಸುವಲ್ಲಿ ಲೆಕ್ಕಪರಿಶೋಧಕರ ಪಾತ್ರ ಪ್ರಮುಖವಾದುದು. ರಾಷ್ಟ್ರ ಕಟ್ಟುವಲ್ಲಿಯೂ ಲೆಕ್ಕ ಪರಿಶೋಧಕರ ಕೊಡುಗೆ ಅಪಾರವಾದುದು ಎಂದರು.

ಇತ್ತೀಚೆಗೆ ಹೆಚ್ಚು ಆನಲೈನ್ ವ್ಯವಹಾರ ನಡೆಯುತ್ತಿದ್ದು, ಸೈಬರ್ ಭದ್ರತೆ, ಎಐ ತಂತ್ರಜ್ಞಾನದ ಜೊತೆಗೆ ಸಾಗಬೇಕಾಗಿದೆ. ಇಂದು ಡಿಜಿಟಲ್ ತಂತ್ರಜ್ಞಾನ ಬಹಳ ಸವಾಲಾಗಿದೆ. ಹೀಗಾಗಿ ಪ್ರತಿದಿನ ಅಧ್ಯಯನ ಅಗತ್ಯವಾಗಿದೆ. ಆಲೋಚನೆ ದೊಡ್ಡದಾಗಿರಲಿ, ಪ್ರಯತ್ನ ನಿರಂತರವಾಗಿರಬೇಕು. ಜೊತೆಗೆ ಕೆಲಸಕ್ಕೆ ಬೇಕಾದ ಕೌಶಲ್ಯ ಅಳವಡಿಸಿಕೊಳ್ಳಬೇಕು ಎಂದರು.

ಸಮ್ಮೇಳನ ಸಮಿತಿ ಚೇರ್ಮನ್ ಚನ್ನವೀರ ಮುಂಗರವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ವೃತ್ತಿಯಲ್ಲಿ ಆಗುತ್ತಿರುವ ಬದಲಾವಣೆ, ವೃತ್ತಿ ಬಾಂಧವರು ಅನುಸರಿಸಬೇಕಾದ ನೀತಿ ಸಂಹಿತೆ, ಜಿಎಸ್ಟಿ ಕಾಯ್ದೆಯಡಿ ವ್ಯಾಜ್ಯಗಳ ನಿರ್ವಹಣೆ, ಸಾರ್ವಜನಿಕ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕರಾಕರಣೆ ಮತ್ತು ವಿನಾಯಿತಿಗಳ ಬಗ್ಗೆ ಆಡಿಟ್ ರಿಪೋರ್ಟ್, ಕಂಪನಿ ಕಾಯ್ದೆಯಡಿ ಆಡಿಟ್ ನಿರ್ವಹಣೆ, ಮಾಹಿತಿ ತಂತ್ರಜ್ಞಾನ ಹಾಗೂ ಸಿಎ ವೃತ್ತಿಯಲ್ಲಿ ಡಿಜಿಟಲೀಕರಣ ಬಳಕೆಯ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಚಾಟ್ ಜಿಪಿಟಿ, ಹಣಕಾಸಿಗೆ ಸಂಬಂಧಿಸಿದ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.

ಐಸಿಎಐ ಕೇಂದ್ರ ಪರಿಷತ್ ಸದಸ್ಯ ಕೋಥಾ ಶ್ರೀನಿವಾಸ ಮಾತನಾಡಿ, ದೇಶದಲ್ಲಿ 4 ಲಕ್ಷಕ್ಕೂ ಅಧಿಕ ಜನರು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಸದಸ್ಯರಿದ್ದಾರೆ. ಇದರಲ್ಲಿ ಮಹಿಳೆಯರ ಸಂಖ್ಯೆ ಶೇ. 30ರಷ್ಟಿದೆ.

ದೇಶಾದ್ಯಂತ 1071 ಬ್ರಾಂಚ್ ಗಳು ಇದ್ದು, ನಮ್ಮ ಸಂಘದಡಿ ಕರ್ನಾಟಕದಲ್ಲಿ 21 ಸಾವಿರ ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.

ಐಸಿಎಐ ದಕ್ಷಿಣ ಭಾರತ ಪ್ರಾಂತದ ಅಧ್ಯಕ್ಷ ಪನ್ನಾ ರಾಜ್ ಮಾತನಾಡಿ, ಇಂದಿನ‌ ದಿನಗಳಲ್ಲಿ ವೃತ್ತಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದರು.

ಇದೇ ವೇಳೆ ಸಮ್ಮೇಳನದ ಸ್ಮರಣ‌ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಹೃದ್ರೋಗ ತಜ್ಞ ಡಾ. ಅಮಿತ ಸತ್ತೂರ ಹೃದಯ ಸ್ತಂಭನ ನಿಯಂತ್ರಣ ಕುರಿತು ಮಾಹಿತಿ ನೀಡಿದರು.

ಸಮ್ಮೇಳನದಲ್ಲಿ ಸುಮಾರು 400ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು. ವೈಷ್ಣವಿ ಹಾನಗಲ್ ಪ್ರಾರ್ಥಿಸಿದರು. ಐಸಿಎಐ ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಮಲ್ಲಿಕಾರ್ಜನ ಪಿಸೆ ಸ್ವಾಗತಿಸಿದರು. ಧನಪಾಲ ಮುನ್ನೊಳ್ಳಿ ವಂದಿಸಿದರು. ಗುಲಾಬ ಛಾಜೇಡ ಸೇರಿದಂತೆ ಇತರರಿದ್ದರು.

Share this article