ದ.ಕ. ಜಿಲ್ಲಾ ಪೊಲೀಸ್‌ಗೆ ಪ್ರಾಧಿಕಾರದಿಂದ ನೋಟಿಸ್‌

KannadaprabhaNewsNetwork |  
Published : Jun 06, 2025, 01:16 AM ISTUpdated : Jun 06, 2025, 01:15 PM IST
32 | Kannada Prabha

ಸಾರಾಂಶ

  ದ.ಕ. ಜಿಲ್ಲಾ ಪೊಲೀಸ್‌ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಕರ್ನಾಟಕ ಪೊಲೀಸ್‌ ದೂರು ಪ್ರಾಧಿಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಾಧಿಕಾರವು ದ.ಕ. ಜಿಲ್ಲಾ ಪೊಲೀಸ್‌ ಇಲಾಖೆಗೆ ಕಾರಣ ಕೇಳಿ ನೋಟಿಸ್‌ ನೀಡಿದೆ.

 ಮಂಗಳೂರು :  ದ.ಕ. ಜಿಲ್ಲೆಯ ಕೋಮು ಸಂಘಟನೆ ಮುಖಂಡರ ಲೊಕೇಶನ್‌, ಮಾಹಿತಿ ಸಂಗ್ರಹದಂತಹ ಕಟ್ಟುನಿಟ್ಟಿನ ಕ್ರಮ ಕೈಗೊಂಡ ದ.ಕ. ಜಿಲ್ಲಾ ಪೊಲೀಸ್‌ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಕರ್ನಾಟಕ ಪೊಲೀಸ್‌ ದೂರು ಪ್ರಾಧಿಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಾಧಿಕಾರವು ದ.ಕ. ಜಿಲ್ಲಾ ಪೊಲೀಸ್‌ ಇಲಾಖೆಗೆ ಕಾರಣ ಕೇಳಿ ನೋಟಿಸ್‌ ನೀಡಿದೆ. 

ಈ ಕುರಿತಾದ ದೂರನ್ನು ದಾಖಲಿಸಿಕೊಂಡಿರುವ ಪ್ರಾಧಿಕಾರವು ಜೂ.17ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಕಾರಣ ಕೇಳಿ ನೋಟಿಸ್‌ ನೀಡಿದೆ.“ಪ್ರಾಧಿಕಾರದಿಂದ ಕಾರಣ ಕೇಳಿ ನೋಟಿಸ್‌ ಬಂದಿದೆ. ನಾವು ಕಾನೂನು ಪ್ರಕಾರವಾಗಿಯೇ ನಡೆದುಕೊಂಡಿದ್ದು, ಪ್ರಾಧಿಕಾರಕ್ಕೆ ಸೂಕ್ತ ವಿವರಣೆ ನೀಡಲಾಗುವುದು” ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಡಾ.ಅರುಣ್‌ ಅವರು ಜಿಲ್ಲೆಗೆ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ನಡೆದ ಹತ್ಯೆಗಳ ಸಮಗ್ರ ಮಾಹಿತಿ ಪಡೆದುಕೊಂಡಿದ್ದು, ಈ ವೇಳೆ ಹತ್ಯೆ ಆರೋಪಿಗಳು ಕೋಮು ಸಂಘಟನೆಗಳ ಜತೆ ಸಂಪರ್ಕ ಹೊಂದಿರುವುದು ಪತ್ತೆಯಾಗಿತ್ತು. ಇದರ ಆಧಾರದಲ್ಲಿ ಕೋಮು ಸಂಘಟನೆಗಳಿಗೆ ಸೇರಿದ ಪ್ರಮುಖರು, ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಿ ನಿತ್ಯವೂ ಅವರ ಲೊಕೇಶನ್‌, ಕಾರ್ಯ ಚಟುವಟಿಕೆಗಳ ಮಾಹಿತಿ ಸಂಗ್ರಹಕ್ಕೆ ನಿರ್ದೇಶನ ನೀಡಿದ್ದರು. 

ಮಾತ್ರವಲ್ಲದೆ, 36 ಮಂದಿಯ ಗಡೀಪಾರಿಗೆ ದಿಟ್ಟ ನಿರ್ಧಾರ ಕೈಗೊಂಡು ಪ್ರಕ್ರಿಯೆ ಆರಂಭಿಸಿದ್ದರು. ಇದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿಯ ಕೆಂಗಣ್ಣಿಗೆ ಕಾರಣವಾಗಿತ್ತು.ಪೊಲೀಸರು ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ತೊಂದರೆ ಕೊಡುತ್ತಿದ್ದಾರೆ, ರಾತ್ರಿ ಹೊತ್ತು ಮನೆಗೆ ತೆರಳಿ ಅವರ ನಿವಾಸಗಳ ಫೋಟೋ ತೆಗೆದು, ಜಿಪಿಎಸ್‌ ಮಾಹಿತಿ ಸಂಗ್ರಹಿಸುತ್ತಿದ್ದಾರೆ, ಯಾವುದೇ ಕಾನೂನಾತ್ಮಕ ವಾರಂಟ್ ಇಲ್ಲದೆ ಅಥವಾ ನ್ಯಾಯಸಮ್ಮತ ಕಾರಣವಿಲ್ಲದೆ ಇದೆಲ್ಲವೂ ನಡೆಯುತ್ತಿದ್ದು, ಕಾನೂನುಬಾಹಿರವಾಗಿದೆ.

ಹಿಂದೂ ಸಮುದಾಯದ ಸದಸ್ಯರನ್ನು ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಪೊಲೀಸ್‌ ದೂರು ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಅಲ್ಲದೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೂ ಪತ್ರ ಬರೆದಿದ್ದರು.

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್