;Resize=(412,232))
ಬೆಂಗಳೂರು : ನಗರದಲ್ಲಿ ಆಟೋ ಗ್ಯಾಸ್‌ಗೆ ಹಾಹಾಕಾರ ಉಂಟಾಗಿದ್ದು ಗಂಟೆಗಟ್ಟಲೇ ಕಾದರೂ ಗ್ಯಾಸ್ ಸಿಗುತ್ತಿಲ್ಲ. ಕೆಲವು ಬಂಕ್‌ನವರು ಮನಸೋ ಇಚ್ಛೆ ದರ ವಸೂಲಿ ಮಾಡುತ್ತಿದ್ದು, ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಆಟೋ ಚಾಲಕರು ದಿಢೀರ್ ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಬಹಳಷ್ಟು ಬಂಕ್‌ಗಳು ಗ್ಯಾಸ್ ಇಲ್ಲದೇ ಮುಚ್ಚಿವೆ. ಒಂದಷ್ಟು ಬಂಕ್‌ಗಳು ಗ್ಯಾಸ್ ಸರಬರಾಜು ಮಾಡುತ್ತಿದ್ದರೂ ವಿಪರೀತ ದರ ಹೆಚ್ಚಳ ಮಾಡಿವೆ. ಇದೆಲ್ಲದರಿಂದ ಬೇಸತ್ತ ಆಟೋ ಚಾಲಕರು ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಸಮೀಪದ ಗ್ಯಾಸ್ ಸ್ಟೇಷನ್ ಎದುರು ಮಂಗಳವಾರ ರಾತ್ರಿಯಿಂದಲೇ ಆಟೋಗಳನ್ನು ನಿಲ್ಲಿಸಿಕೊಂಡು ಗ್ಯಾಸ್‌ಗಾಗಿ ಚಾಲಕರು ಕಾಯುತ್ತಿದ್ದರು. ಆದರೆ ಏ.1 ರಿಂದ ಹೊಸ ದರ ಅನ್ವಯವಾಗುವುದರಿಂದ ಮಂಗಳವಾರ ಗ್ಯಾಸ್ ತುಂಬಿಲ್ಲ. ಆದರೂ ಬುಧವಾರ ಬೆಳಿಗ್ಗೆಯೇ ಗ್ಯಾಸ್ ಇಲ್ಲವೆಂದು ಬೋರ್ಡ್ ಹಾಕಿದ್ದಾರೆ. ಗ್ಯಾಸ್ ಇದ್ದರೂ ಅಧಿಕ ಬೆಲೆಗೆ ಮಾರಾಟ ಮಾಡಲು ಹೀಗೆ ಮಾಡುತ್ತಿದ್ದಾರೆ ಎಂದು ಚಾಲಕರು ಕಿಡಿಕಾರಿದರು.
ರಾಜಾಜಿನಗರದ ಒಂದನೇ ಬ್ಲಾಕ್‌ನಲ್ಲೂ ಆಟೋ ಗ್ಯಾಸ್‌ಗಾಗಿ ಕಿಲೋ ಮೀಟರ್‌ಗಟ್ಟಲೆ ಚಾಲಕರು ಕಾಯುತ್ತಿದ್ದರೂ ಗ್ಯಾಸ್ ಸಿಗದೇ ಪರದಾಡಬೇಕಾಯಿತು. ಕಳೆದ ಹದಿನೈದು ದಿನದಲ್ಲಿ ಆಟೋ ಗ್ಯಾಸ್ ದರ ಕೆಜಿಗೆ 54 ರುಪಾಯಿ ಇದ್ದದ್ದು ಈಗ 94 ರುಪಾಯಿಗೆ ಏರಿಕೆಯಾಗಿದೆ. ಅರ್ಧ ದಿನ ಗ್ಯಾಸ್‌ಗಾಗಿ ಸರದಿ ಸಾಲಿನಲ್ಲಿ ನಿಲ್ಲುವುದರಲ್ಲೇ ಕಳೆಯುತ್ತದೆ ಎಂದು ಚಾಲಕರು ಆರೋಪಿಸಿದರು.
ಆಟೋ ಎಲ್‌ಪಿಜಿ ಅಭಾವದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಂಕ್ ಮ್ಯಾನೇಜರ್ ಮುನಿರಾಜು ಮಾತನಾಡಿ, ನಮ್ಮಲ್ಲಿ ಸ್ಟಾಕ್ ಇರಲಿಲ್ಲ. ಆದರೆ ಮಂಗಳವಾರ ರಾತ್ರಿ ಎರಡು ಗಂಟೆಗೆ ಗ್ಯಾಸ್ ಬಂದಿದೆ. ನಾವು ರಷ್ಯಾದಿಂದ ಎಲ್‌ಪಿಜಿ ಗ್ಯಾಸ್ ತರಿಸುತ್ತೇವೆ. ಆದರೆ ಯುದ್ಧದಿಂದ ಸರಿಯಾಗಿ ಸರಬರಾಜು ಆಗುತ್ತಿಲ್ಲ. ಬೆಂಗಳೂರಿನಲ್ಲಿ ಇಲ್ಲಿ ಒಂದೇ ಕಡೆ ಸೂಪರ್ ಗ್ಯಾಸ್ ಸಿಗುವುದು. ಹೀಗಾಗಿ ಜನ ರಾತ್ರಿಯಿಂದ ಕ್ಯೂ ನಿಂತಿದ್ದಾರೆ. ಎಲ್ಲರಿಗೂ ಗ್ಯಾಸ್ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.
ಶೇಷಾದ್ರಿಪುರಂ ಲಿಂಕ್ ರಸ್ತೆ, ಚಾಮರಾಜಪೇಟೆ, ವಿಜಯನಗರ, ನಂದಿನಿ ಲೇಔಟ್, ಹೆಸರಘಟ್ಟ ರಸ್ತೆಯ 8 ನೇ ಮೈಲಿ, ನಾಗರಬಾವಿ ಸೇರಿದಂತೆ ನಗರದ ಹಲವೆಡೆ ಗ್ಯಾಸ್ ಸಿಗದೇ ಆಟೋ ಚಾಲಕರು ಸಂಕಷ್ಟ ಅನುಭವಿಸಿದರು. ಮತ್ತೊಂದೆಡೆ, ಪೀಣ್ಯ ಎರಡನೇ ಹಂತದ ಬಂಕ್‌ವೊಂದರಲ್ಲಿ 105 ರುಪಾಯಿಗೆ ಒಂದು ಕೆಜಿ ಆಟೋ ಗ್ಯಾಸ್ ಮಾರಾಟ ಮಾಡಲಾಯಿತು. ಕೆಲ ಚಾಲಕರು ಅಸಮಾಧಾನ ವ್ಯಕ್ತಪಡಿಸುತ್ತಲೇ ಖರೀದಿ ಮಾಡಿದ್ದು ಕಂಡುಬಂತು.
ಆಟೋ ಗ್ಯಾಸ್ ಸಿಗದಿದ್ದರಿಂದ ಆಕ್ರೋಶಗೊಂಡ ಚಾಲಕರು ರಾಜಾಜಿನಗರದಲ್ಲಿ ರಸ್ತೆ ಮಧ್ಯೆ ಆಟೋಗಳನ್ನು ನಿಲ್ಲಿಸಿ ಬುಧವಾರ ಪ್ರತಿಭಟನೆ ನಡೆಸಿದರು. ಮುಂಜಾನೆ ನಾಲ್ಕು ಗಂಟೆಯಿಂದ ನಿಂತಿದ್ದರೂ ಕೆಲ ಆಟೋಗಳಿಗೆ ಮಾತ್ರ ಗ್ಯಾಸ್ ಸಿಕ್ಕಿದೆ. ಇನ್ನೂ ನೂರಾರು ಆಟೋಗಳಿಗೆ ಗ್ಯಾಸ್ ಸಿಕ್ಕಿಲ್ಲ. ಎಂದು ಸಿಟ್ಟಿಗೆದ್ದು ದಿಢೀರ್ ಎಂದು ರಸ್ತೆ ಮಧ್ಯದಲ್ಲೇ ಆಟೋಗಳನ್ನು ನಿಲ್ಲಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಚಿವ ಮುನಿಯಪ್ಪ ವಿರುದ್ಧ ಆಕ್ರೋಶ
ಬೇರೆ ಭಾಗಗಳಲ್ಲಿ ಇಲ್ಲದ ಆಟೋ ಗ್ಯಾಸ್ ಸಮಸ್ಯೆ ಬೆಂಗಳೂರಿನಲ್ಲಿ ಮಾತ್ರ ಏಕಿದೆ. ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಚಾಲಕರು, ಕೊಲ್ಲಿ ರಾಷ್ಟ್ರಗಳಿಂದ ಹಡಗುಗಳಿಂದ ಗ್ಯಾಸ್ ಬರುತ್ತಿದೆ. ಕೇರಳ, ಗುಜರಾತ್ ಅಷ್ಟೇ ಏಕೆ ರಾಜ್ಯದ ಮಂಗಳೂರಿನಲ್ಲಿ ಗ್ಯಾಸ್ ಸಮಸ್ಯೆ ಇಲ್ಲ. ಆದರೆ ಬೆಂಗಳೂರಿನಲ್ಲಿ ಮಾತ್ರ ಏಕೆ ಸಮಸ್ಯೆಯಾಗುತ್ತಿದೆ. ಸರ್ಕಾರ ಏನು ಮಾಡುತ್ತಿದೆ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ ಎಂದು ಕಣ್ಣೀರು ಹಾಕುತ್ತಾ ಆಕ್ರೋಶ ವ್ಯಕ್ತಪಡಿಸಿದರು.