ಪಟ್ಟಣದಲ್ಲಿ ಮಾತ್ರ ೧೫ ದಿನಗಳಿಂದ ಎಲ್‌ಪಿಜಿ ದೊರೆಯದೆ ಇರುವ ಎರಡು ಬಂಕ್‌ಗಳು ಮುಚ್ಚಿವೆ. ಪಟ್ಟಣ ಮಾತ್ರವಲ್ಲ ಪಕ್ಕದ ಕೆಜಿಎಫ್, ಮಾಲೂರು, ಕೋಲಾರದಲ್ಲಿಯೂ ಆಟೋ ಗ್ಯಾಸ್ ಇಲ್ಲದೆ ಬಂಕ್‌ಗಳು ಮುಚ್ಚಲಾಗಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಿಂದ ಅದರ ನೇರ ಪರಿಣಾಮವನ್ನು ದೇಶದ ಜನರು ಎದುರಿಸುವಂತಾಗಿದ್ದು ಪಟ್ಟಣದಲ್ಲಿ ಕಳೆದ ೧೫ ದಿನಗಳಿಂದಲೂ ಆಟೋ ಎಲ್ಪಿಜಿ ಅಭಾವದಿಂದ ಎಲ್‌ಪಿಜಿಗಾಗಿ ಛಾತಕ ಪಕ್ಷಿಯಂತೆ ಚಾಲಕರು ಎದುರು ನೋಡುವಂತಾಗಿದೆ.ಸರ್ಕಾರಗಳು ಆಟೋ ಎಲ್‌ಪಿಜಿಗೆ ಯಾವುದೇ ಡಿಮ್ಯಾಂಡು ಇಲ್ಲ ಅಗತ್ಯಕ್ಕೆ ತಕ್ಕಂತೆ ಪೂರೈಸಲಾಗುತ್ತಿದೆ ಎಂದು ಹೇಳುತ್ತಿದೆ. ಆದರೆ ಪಟ್ಟಣದಲ್ಲಿ ಮಾತ್ರ ೧೫ ದಿನಗಳಿಂದ ಎಲ್‌ಪಿಜಿ ದೊರೆಯದೆ ಇರುವ ಎರಡು ಬಂಕ್‌ಗಳು ಮುಚ್ಚಿವೆ. ಪಟ್ಟಣ ಮಾತ್ರವಲ್ಲ ಪಕ್ಕದ ಕೆಜಿಎಫ್, ಮಾಲೂರು, ಕೋಲಾರದಲ್ಲಿಯೂ ಆಟೋ ಗ್ಯಾಸ್ ಇಲ್ಲದೆ ಬಂಕ್‌ಗಳು ಮುಚ್ಚಲಾಗಿದೆ. ಆಟೋಗಳನ್ನೇ ನಂಬಿಕೊಂಡು ಜೀವನ ಕಟ್ಟಿಕೊಂಡಿರುವವರ ಬದುಕು ಈಗ ಅತಂತ್ರವಾಗಿ ಸಾಲ ಮಾಡಿ ಆಟೋ ಖರೀದಿಸಿರುವವರು ತಿಂಗಳ ಇಎಂಐ ಕಟ್ಟಲೂ ಸಾಧ್ಯವಾಗದೆ ಪರದಾಡುವಂತಾಗಿದೆ.ನಿತ್ಯ ಬಂಕ್‌ಗಳ ಬಳಿ ಬಂದು ನೋಡಿಕೊಂಡು ಹೋಗುವಂತಾಗಿದೆ. ೧೫ ದಿನಕ್ಕೊಮ್ಮೆ ಬಂದರೂ ಎರಡೇ ದಿನದಲ್ಲಿ ಖಾಲಿಯಾಗುತ್ತದೆ ಮತ್ತು ಅದರ ದರವೂ ದುಪಟ್ಟು. ಹೀಗಾದರೆ ನಾವು ನಮ್ಮ ಸಂಸಾರ ನಡೆಸುವುದು ಹೇಗಪ್ಪ ಎಂದು ಚಿಂತೆಗೀಡಾಗಿದ್ದಾರೆ. ಪ್ರಸ್ತುತ ದಿನಗಳಲ್ಲಿ ಅಲ್ಲಿ ಯುದ್ಧ ನಿಲ್ಲುವ ಸೂಚನೆಗಳಿಲ್ಲ. ಯುದ್ಧ ಅಲ್ಲಿ ಅದರ ಬಿಸಿ ಮಾತ್ರ ಇಲ್ಲಿ ಎಂದು ಬಹುತೇಕ ಆಟೋ ಚಾಲಕರು ಪರ್ಯಾಯ ಉದ್ಯೋಗದತ್ತ ಮುಖಮಾಡುವಂತಾಗಿದೆ. ಪಟ್ಟಣದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲದಿರುವುದರಿಂದ ಪೆಟ್ರೋಲ್‌ನಿಂದ ಓಡಿಸುವ ಆಟೋಗಳ ಚಾಲಕರು ಸ್ವಲ್ಪಮಟ್ಟಿಗೆ ಉಸಿರಾಡುವಂತಾಗಿದೆ.ಮತ್ತೊಂದು ಕಡೆ ಗೃಹ ಬಳಕೆ ಎಲ್‌ಪಿಜಿಗೂ ದಿನೇ ದಿನೇ ಡಿಮ್ಯಾಂಡು ಹೆಚ್ಚಾಗುತ್ತಲೆ ಇದೆ. ಈಗಲೂ ಗ್ರಾಹಕರು ತಮ್ಮ ತಮ್ಮ ಎಲ್‌ಪಿಜಿ ಏಜೆನ್ಸಿಗಳ ಕಚೇರಿಗಳ ಮುಂದೆ ಬೆಳಗೆದ್ದರೆ ಸಿಲಿಂಡರ್‌ಗಾಗಿ ಕಾಯುವಂತಾಗಿದೆ. ಬುಕ್ ಮಾಡಿ ೨೫ ದಿನಗಳಾದರೂ ಸಿಲಿಂಡರ್ ಸಿಗದ ಕಾರಣ ಆತಂಕಗೊಂಡು ಎಲ್‌ಪಿಜಿ ತುಂಬಿರುವ ಲಾರಿ ಬರುವುದನ್ನು ಎದುರು ನೋಡಿ ಬಂದ ಕೂಡಲೇ ಮುಗಿ ಬಿದ್ದು ಪಡೆಯುವಂತಾಗಿದೆ. ಇನ್ನು ಕಮರ್ಶಿಯಲ್ ಎಲ್‌ಪಿಜಿ ಸಹ ಆಹಾರ ಇಲಾಖೆಯಂತೆ ಹಿಂದಿಗಿಂತ ಈಗೇನೂ ಬದಲಾಗಿಲ್ಲ. ಮುಂಚೆ ಹೇಗಿತ್ತೋ ಈಗಲೂ ಅಭಾವ ಆಗೇ ಇದೆ. ಇದರಿಂದ ಹೋಟೆಲ್ ಉದ್ಯಮ ತತ್ತರಿಸುವಂತಾಗಿದೆ. ಪಟ್ಟಣದಲ್ಲಿರುವ ಬಹುತೇಕ ಹೋಟೆಲ್‌ಗಳಲ್ಲಿ ಟೀ, ಕಾಫಿಗೂ ಸಿಲಿಂಡರ್ ಇಲ್ಲದೆ ಪರಿತಪಿಸುವಂತಾಗಿದೆ. ಲಭ್ಯವಿರುವ ಹೋಟೆಲ್‌ಗಳಲ್ಲಿ ಬೆಲೆಯೂ ಹೆಚ್ಚಳ ಮಾಡಿರುವುದರಿಂದ ಗ್ರಾಹಕರ ಜೇಬಿಹೆ ಕತ್ತರಿ ಹಾಕಿದಂತಾಗಿದೆ.ಕೆಲ ಸಣ್ಣ ಹೋಟೆಲ್‌ಗಳು ಮತ್ತೆ ಹಳೇ ಕಾಲ ಸೌದೆ ಒಲೆಗಳ ಮೂಲಕ ತಿಂಡಿ ಸಿದ್ಧಪಡಿಸಲಾಗುತ್ತಿದೆ, ಗ್ರಾಮೀಣ ಭಾಗದಲ್ಲಿಯೂ ಮಹಿಳೆಯರು ಶಪಿಸಿಕೊಂಡು ಸಿಲಿಂಡರ್ ಸಿಗದೆ ಸೌದೆಗಾಗಿ ಕಾಡು ಮೇಡುಗಳಲ್ಲಿ ಅಲೆಯುವಂತಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.