ಕನ್ನಡಪ್ರಭ ವಾರ್ತೆ ತುಮಕೂರು ತುಮಕೂರು ನಗರದಲ್ಲಿ ಪ್ರಯಾಣಿಕ ಆಟೋ ರಿಕ್ಷಾಗಳ ಕನಿಷ್ಟ ದರದ ಮಾಹಿತಿಯೇ ಇಲ್ಲದೆ ದಿನವೂ ಒಂದಿಲ್ಲೊಂದು ವಾಗ್ವಾದ ಆಗುತ್ತಿರುವ ಈಗಿನ ಸಂದರ್ಭದಲ್ಲಿ ತುಮಕೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆರ್.ಟಿ.ಐ. ಅರ್ಜಿಗೆ ಉತ್ತರಿಸುತ್ತ, ಆಟೋರಿಕ್ಷಾ ಮೀಟರ್ ದರದ ಬಗ್ಗೆ ಮಾಹಿತಿ ನೀಡುತ್ತಾ, ಮೊದಲ 2 ಕಿ.ಮೀ.ಗೆ ಕನಿಷ್ಟ ದರ ರೂ.25 ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ತುಮಕೂರಿನ ಸಾಮಾಜಿಕ ಕಾರ್ಯಕರ್ತ ಆರ್. ವಿಶ್ವನಾಥನ್ ಅವರು ಸಲ್ಲಿಸಿದ್ದ ಆರ್.ಟಿ.ಐ. ಅರ್ಜಿಗೆ ಈ ಮಾಹಿತಿ ಲಭ್ಯವಾಗಿದೆ. ಮೊದಲ 2 ಕಿ.ಮೀ.ಗೆ ಕನಿಷ್ಟ ದರ (ಮೂವರು ಪ್ರಯಾಣಿಕರಿಗೆ) ರೂ. 25 ಆಗಿರುತ್ತದೆ. ನಂತರದ ಪ್ರತಿ ಕಿ.ಮೀ.ಗೆ ದರ ರೂ. 13 ಆಗುತ್ತದೆ. ಕಾಯುವ ದರ (ವೇಟಿಂಗ್ ಚಾರ್ಜ್) ಮೊದಲ 5 ನಿಮಿಷ ಉಚಿತವಿದ್ದು, ನಂತರದ 15 ನಿಮಿಷಗಳಿಗೆ ದರ ರೂ. 5 ಆಗುತ್ತದೆ. ಇದೇ ರೀತಿ ಪ್ರಯಾಣಿಕರು ಒಯ್ಯುವ 20 ಕೆ.ಜಿ. ಲಗೇಜ್ ಉಚಿತವಿದ್ದು, ಗರಿಷ್ಟ 50 ಕೆ.ಜಿ. ಲಗೇಜ್ ಹಾಕಬಹುದಾಗಿದೆ. ರಾತ್ರಿ ವೇಳೆ ಆಟೋ ಪ್ರಯಾಣಕ್ಕೆ ಹೆಚ್ಚುವರಿ ದರ ನಿಗದಿ ಪಡಿಸಿದ್ದು, ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಮೀಟರ್‌ನ ಒಂದೂವರೆಪಟ್ಟು ದರ ನಿಗದಿ ಪಡಿಸಲಾಗಿದೆ ಎಂದು ಆರ್.ಟಿ.ಒ. ಅವರು ಮಾಹಿತಿ ನೀಡಿದ್ದಾರೆ. 8,962 ಆಟೋಗಳು, 15 ಕಿ.ಮೀ. ವ್ಯಾಪ್ತಿ
ಅಕ್ರಮ ಆಟೋಗಳಿಂದ 22 ಲಕ್ಷ ರು. ದಂಡ ಸಂಗ್ರಹ ತುಮಕೂರಿನಲ್ಲಿ ಸಂಚರಿಸುವ ಅಕ್ರಮ, ಅನಧಿಕೃತ ಆಟೋಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಅರ್ಜಿಯಲ್ಲಿ ಕೋರಿದ್ದ ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಆರ್.ಟಿ.ಒ. ಅವರು 2023ರ ಏಪ್ರಿಲ್ 1 ರಿಂದ 2024 ರ ಮಾರ್ಚ್ 31 ರವರೆಗೆ 653 ಆಟೊರಿಕ್ಷಾಗಳ ವಿರುದ್ಧ ಪ್ರಕರಣ ದಾಖಲಿಸಿ ಒಟ್ಟು 14,55,400 ರೂ. ದಂಡ ಸಂಗ್ರಹಿಸಲಾಗಿದೆ. 2024ರ ಏಪ್ರಿಲ್ 1 ರಿಂದ ಜುಲೈ 31 ರವರೆಗೆ 352 ಆಟೊರಿಕ್ಷಾಗಳ ವಿರುದ್ಧ ಕ್ರಮ ಕೈಗೊಂಡು ಒಟ್ಟು 8,02,600 ರೂ. ದಂಡ ಸಂಗ್ರಹಿಸಲಾಗಿದೆ. ಹೀಗೆ ಒಟ್ಟು 1,005 ಆಟೊರಿಕ್ಷಾಗಳಿಂದ ಒಟ್ಟಾರೆ 22,58,00 ರೂ. ದಂಡವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.