ದೈಹಿಕ, ಬೌದ್ಧಿಕ ಪ್ರಗತಿಗೆ ಆಟೋಟಗಳು ಮುಖ್ಯ: ಪರಶುರಾಮ ಮಿರ್ಜಗಿ

KannadaprabhaNewsNetwork | Published : Nov 5, 2024 12:43 AM

ಸಾರಾಂಶ

ವಿದ್ಯಾರ್ಥಿ- ವಿದ್ಯಾರ್ಥಿನಿಯರು ತಮ್ಮ ಪಾಠಗಳೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಆಟೋಟಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿಯೂ ಸಕ್ರಿಯರಾಗಿ ಭಾಗವಹಿಸಬೇಕು.

ಮುಂಡಗೋಡ: ವಿದ್ಯಾರ್ಥಿಗಳ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯಾಗಲು ನಿತ್ಯ ವ್ಯಾಯಾಮ ಮಾಡುವುದು ಹಾಗೂ ಆಟಗಳನ್ನು ಆಡುವುದು ತುಂಬಾ ಮುಖ್ಯವಾಗಿದೆ ಎಂದು ಪಿಎಸ್‌ಐ ಪರಶುರಾಮ ಮಿರ್ಜಗಿ ತಿಳಿಸಿದರು.ಸೋಮವಾರ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಕವಿವಿ ಧಾರವಾಡ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಮುಂಡಗೋಡ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕುಂದಗೋಳ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ವೇಟ್ ಲಿಫ್ಟಿಂಗ್ ಸ್ಪರ್ಧೆ ಮತ್ತು ಆಯ್ಕೆ ಟ್ರಯಲ್ಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿ- ವಿದ್ಯಾರ್ಥಿನಿಯರು ತಮ್ಮ ಪಾಠಗಳೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಆಟೋಟಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿಯೂ ಸಕ್ರಿಯರಾಗಿ ಭಾಗವಹಿಸಬೇಕು. ಇದರಿಂದ ದೈಹಿಕ ಬೆಳವಣಿಗೆ, ಮಾನಸಿಕ ವಿಕಾಸ, ಸಹಕಾರ, ಸ್ಪರ್ಧಾ ಮನೋಭಾವದಂತಹ ಜೀವನ ಮೌಲ್ಯಗಳು ಬೆಳೆಯುತ್ತವೆ ಎಂದರು. ಕವಿವಿ ಆಯ್ಕೆ ಕಮಿಟಿ ಸದಸ್ಯ, ಕುಮಟಾದ ಎ.ವಿ. ಬಾಳಿಗಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಡಿ. ಭಟ್, ಡಾ. ಐ.ಎಂ. ಮಕ್ಕುಭಾಯಿ, ಕೋಚ್‌ಗಳಾದ ಬೆಳಗಾವಿಯ ಸದಾನಂದ ಮಲ್ಲಿಶೆಟ್ಟಿ, ಕಾರವಾರ ಶಿವಾಜಿ ಕಾಲೇಜಿನ ಟಿ.ಎನ್. ಹರಿಕಾಂತ ಆಗಮಿಸಿದ್ದರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಸಿಂಗ್ ಹಜೇರಿ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯ ನಿರ್ಣಾಯಕರಾಗಿ ವಿಶ್ವನಾಥ ಕೋತಾಲ, ಹರೀಶ ಕೋತಾಲ ಹಾಗೂ ಪ್ರಶಾಂತ ಆಗಮಿಸಿದ್ದರು. ಅಲಿ ಅಹ್ಮದ ಗೋಕಾವಿ ಸ್ವಾಗತಿಸಿದರು. ನಿಸಾರ್‌ಖಾನ್ ಸಿ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜು ಮಾಕನೂರ ನಿರೂಪಿಸಿದರು. ಎಂ.ಎಂ. ಲಷ್ಕರ್ ವಂದಿಸಿದರು. ಕುಮಟಾ ವೈಭವದಲ್ಲಿ ಸಾಂಸ್ಕೃತಿಕ ತುಡಿತ

ಕುಮಟಾ: ಕುಮಟಾದಲ್ಲಿ ಕಲೆ, ಸಂಸ್ಕೃತಿಗೆ ಸಂಬಂಧಿಸಿ ನಿರಂತರ ಕಾರ್ಯಕ್ರಮಗಳು ನಡೆಯುತ್ತಿರುವುದು ಕ್ಷೇತ್ರದ ಸಾಂಸ್ಕೃತಿಕ ತುಡಿತಕ್ಕೆ ಉದಾಹರಣೆಯಾಗಿದೆ. ಈ ನಿಟ್ಟಿನಲ್ಲಿ ತಾಂಡವ ಕಲಾನಿಕೇತನ ಸಂಸ್ಥೆಯ ಸಹಯೋಗವೂ ದೊಡ್ಡದಿದ್ದು, ಶ್ಲಾಘನೀಯವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.ಪಟ್ಟಣದ ಮಣಕಿ ಮೈದಾನದಲ್ಲಿ ತಾಂಡವ ಕಲಾನಿಕೇತನ ಸಂಸ್ಥೆಯಿಂದ ಕುಮಟಾ ವೈಭವ ಸಮಿತಿಯ ಸಹಯೋಗದಲ್ಲಿ ೫ ದಿನಗಳ ಕಾಲ ಹಮ್ಮಿಕೊಂಡಿರುವ ಕುಮಟಾ ವೈಭವ- ೨೦೨೪ ಉದ್ಘಾಟಿಸಿ ಮಾತನಾಡಿದರು.

ತಾಂಡವ ಕಲಾನಿಕೇತನ ಸಂಸ್ಥೆಯ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ತಾಂಡವ ಕಲಾನಿಕೇತನ ಸಂಸ್ಥೆಯು ರಾಜ್ಯಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುತ್ತ ಬಂದಿದೆ. ಕುಮಟಾದಲ್ಲೂ ೭ನೇ ವರ್ಷದ ಕುಮಟಾ ವೈಭವ ಕಾರ್ಯಕ್ರಮ ನಡೆಯುತ್ತಿದ್ದು, ಸಾರ್ವಜನಿಕರ ಪ್ರೋತ್ಸಾಹ ಕೋರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ನಿವೃತ್ತ ಮುಖ್ಯಾಧ್ಯಾಪಕ ಎನ್.ಆರ್. ಗಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಎಂ.ಟಿ. ಭಟ್, ನಿವೃತ್ತ ಯೋಧ ಪರಮೇಶ್ವರ ಹರಿಕಂತ್ರ ಅವರನ್ನು ಸನ್ಮಾನಿಸಲಾಯಿತು. ಸಿಪಿಐ ಯೋಗೇಶ, ಪುರಸಭೆ ಸದಸ್ಯ ಮೋಹಿನಿ ಗೌಡ, ಮಹೇಶ ನಾಯ್ಕ ಇತರರು ಇದ್ದರು. ಕುಮಟಾ ವೈಭವ ಸಮಿತಿ ಅಧ್ಯಕ್ಷ ಆರ್.ಎಚ್. ನಾಯ್ಕ ಸ್ವಾಗತಿಸಿದರು. ಮಂಜುನಾಥ ನಾಯ್ಕ ಮತ್ತು ಮಂಜುನಾಥ ಭಂಡಾರಿ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಕಲಾವಿದರಿಂದ ಯಕ್ಷ ನೃತ್ಯ, ಕನ್ನಡ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು. ಖ್ಯಾತ ಕನ್ನಡ ರ್‍ಯಾಪರ್, ಗಾಯಕ ಓಲ್ ಓಕೆ ತಂಡದಿಂದ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.

Share this article