ಕನ್ನಡ ಪ್ರಭ ವಾರ್ತೆ ನಾಪೋಕ್ಲು
ಏಳುನೂರು ವರ್ಷ ಪುರಾತನ ಇತಿಹಾಸವಿರುವ ಗ್ರಾಮದ ಧಾರ್ಮಿಕ ಸಾನಿಧ್ಯ ಗೋಪಾಲಕೃಷ್ಣ ದೇವಸ್ಥಾನ. ಶ್ರೀ ಕೃಷ್ಣ ಪರಮಾತ್ಮ ಅವಂದೂರು ಗ್ರಾಮದ ಗ್ರಾಮ ದೇವರು. ಪ್ರಸ್ತುತ ಶ್ರೀ ದೇವರ ಸನ್ನಿಧಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪೂರ್ವ ಭಾವಿ ಕೆಲಸ ಕಾರ್ಯಗಳು ಧಾರ್ಮಿಕ ವಿಧಿ ವಿಧಾನದಂತೆ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ.
ಕಾಸರಗೋಡಿನ ಪ್ರಸಿದ್ಧ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದೊಂದಿಗೆ ತಂಡದವರಾದ ಮುರಾರಿ ಮತ್ತು ಸ್ಕಂದ ತಂತ್ರಿಗಳು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಗರ್ಭಗುಡಿ ಮತ್ತು ತೀರ್ಥ ಮಂಟಪದ ಶಿಲಾನ್ಯಾಸ ಕಾರ್ಯಕ್ರಮದ ವಿಶೇಷ ಪೂಜೆ, ವಿಧಿ ವಿಧಾನಗಳನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಸರ್ವ ರೀತಿಯಲ್ಲೂ ಯಶಸ್ಸು ಕಾಣಲಿ. ನಮ್ಮ ಹೆಮ್ಮೆಯ ಸೈನಿಕರು ಯಾವುದೇ ಹಾನಿಯಿಲ್ಲದೆ ಸುರಕ್ಷಿತವಾಗಿ ಕಾರ್ಯಾಚರಿಸಲು ಶ್ರೀ ಗೋಪಾಲಕೃಷ್ಣ ಸ್ವಾಮಿ ಶಕ್ತಿ ನೀಡಲಿ ಎಂದು ದೇವರಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನ ಜೀರ್ಣೋದ್ಧಾರದ ಮೂಲ ಸಮಿತಿ, ಗ್ರಾಮದ ತಕ್ಕ ಮುಖ್ಯಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.