ಮಾರುತಿ ಶಿಡ್ಲಾಪುರ
ಕನ್ನಡಪ್ರಭ ವಾರ್ತೆ ಹಾನಗಲ್ಲಹಾವು ಎಂದಾಕ್ಷಣ ಬೆಚ್ಚಿ ಬೀಳುವ ಜನರ ನಡುವೆ ಯಾರದೇ ಮನೆ, ಹೊಲದಲ್ಲಿ ಹಾವು ಕಂಡಾಗ ದೂರವಾಣಿ ಮೂಲಕ ಕರೆ ಮಾಡಿದರೆ ತಕ್ಷಣ ಬಂದು ಹಾವು ಹಿಡಿದು ಅಡವಿಗೆ ಬಿಡುವ ಅವಿನಾಶ ಬೆಳಗಾಲ ಎಂಬ 27 ವರ್ಷದ ಯುವಕ, ಹಾವು ಹೊಡಿಬೇಡಿ, ತೊಂದರೆ ಕೊಡಬೇಡಿ ಎಂದು ವಿನಂತಿಸುತ್ತಾರೆ.
ತಾಲೂಕಿನ ಗೊಂದಿ ಗ್ರಾಮದ ಅವಿನಾಶ ಒಬ್ಬ ಫೋಟೋಗ್ರಾಫರ್, ಗ್ರಾಮ್ ಒನ್ ಸೇವೆ ಕೂಡ ನೀಡುತ್ತಾರೆ. ಸಣ್ಣ ಪುಟ್ಟ ವಿದ್ಯುತ್ ಕೆಲಸಗಳನ್ನೂ ಮಾಡುತ್ತಾರೆ. ಹಾವು ಹಿಡಿಯುವುದಕ್ಕಾಗಿ ಯಾರೇ ಫೋನಾಯಿಸಿದರೂ ತಕ್ಷಣ ಅಲ್ಲಿಗೆ ಹೋಗಿ ಹಾವು ಹಿಡಿದು ಅವರ ಆತಂಕ ನಿವಾರಿಸುತ್ತಾರೆ. ಇದು ಅವರಿಗೆ ಉದ್ಯೋಗವಲ್ಲ. ಹವ್ಯಾಸ. ಸಮಾಜ ಸೇವೆ.ಕಳೆದ ಏಳು ವರ್ಷಗಳಿಂದ ಈ ಹಾವು ಹಿಡಿಯುವ ಹವ್ಯಾಸವನ್ನು ಅವಿನಾಶ ರೂಢಿಸಿಕೊಂಡಿದ್ದಾರೆ. ತಮ್ಮ ಗೆಳೆಯರೊಬ್ಬರು ಹಾವು ಹಿಡಿಯುವುದನ್ನು ನೋಡುತ್ತಿದ್ದ ಅವರು ತಾವು ಕೂಡ ಹಾವು ಹಿಡಿಯವ ಟೆಕ್ನಿಕ್ ಕಲಿತು, ಸ್ಟಿಕ್‌ನಿಂದ ಹಾವು ಹಿಡಿದು ಜನರ ಆತಂಕ ದೂರ ಮಾಡುತ್ತಾರೆ. ಈ ವರೆಗೆ 300ಕ್ಕೂ ಅಧಿಕ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ನಾಗರ ಹಾವು ವಿಷಕಾರಿ. ಆದರೆ ಅದು ಯಾರಿಗೂ ಸುಮ್ಮನೆ ತೊಂದರೆ ಕೊಡುವುದೇ ಇಲ್ಲ. ಅದನ್ನು ಅಕಸ್ಮಾತ್ ತುಳಿದರೆ, ಹೊಡೆಯಲು ಮುಂದಾದರೆ ತನ್ನ ರಕ್ಷಣೆಗಾಗಿ ಕಚ್ಚಲು ಮುಂದಾಗುತ್ತದೆ. ಅದರೊಂದಿಗೆ ಹಾನಗಲ್ಲ ಭಾಗದಲ್ಲಿ ಕೆರೆ ಹಾವು, ಕೊಳಗಂದ್ಲಿಕ ಎಂಬ ಹಾವುಗಳಿವೆ. ಇವು ಅಷ್ಟೊಂದು ವಿಷಕಾರಿಯಲ್ಲ ಎನ್ನುತ್ತಾರೆ.ಯಾವುದೇ ಹಾವು ಅಕಸ್ಮಾತ್ತಾಗಿ ಕಚ್ಚಿದರೆ ಹಳ್ಳಿ ಔಷಧಿಗಿಂತ ಮೊದಲು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಎಲ್ಲದಕ್ಕೂ ಪ್ರಮುಖವಾದ ಸಂಗತಿ ಎಂದರೆ ಅದು ಯಾವ ಜಾತಿಯ ಹಾವು ಎಂಬುದು ತಿಳಿದಿದ್ದರೆ ಔಷಧೋಪಚಾರಕ್ಕೆ ಅನುಕೂಲವಾಗುತ್ತದೆ. ವಿಳಂಬವಿಲ್ಲದೆ ಆಸ್ಪತ್ರೆಗೆ ಹೋಗಬೇಕು ಎನ್ನುತ್ತಾರೆ ಅವಿನಾಶ.
ಹಾವು ಹೊಡಿಬ್ಯಾಡ್ರಿ. ನನಗೆ ಫೋನ್ ಮಾಡ್ರಿ. ಅದು ಎಷ್ಟ ಹೊತ್ತಿನಾಗೇ ಆಗಿರಲಿ, ನಾನು ಬಂದು ಹಾವು ಹಿಡಿಯುತ್ತೇನೆ. ನನಗೆ ಹಣ ನೀಡಬೇಕಾಗಿಲ್ಲ. ಅದನ್ನು ನಿರಾಕರಿಸುವುದಿಲ್ಲ. ನಾನು ವಾಹನದಲ್ಲಿ ದೂರದ ಊರಿಗೆ ಹೋಗಬೇಕಾಗುತ್ತದೆ. ಅದಕ್ಕೆ ಆ ಹಣವನ್ನು ಬಳಸುತ್ತೇನೆ ಎನ್ನುತ್ತಾರೆ. ಒಂದೊಮ್ಮೆ ಹಾವು ಕಾಣಿಸಿಕೊಂಡರೆ ಹಾನಗಲ್ಲ ತಾಲೂಕು ಗೊಂದಿ ಗ್ರಾಮದ ಅವಿನಾಶ ಅವರಿಗೆ 9110451720 ಈ ಮೊಬೈಲ್‌ಗೆ ಫೋನಾಯಿಸಿ ಕರೆಸಬಹುದು.ಹಾವು ಕೂಡ ಒಂದು ಜೀವಿ. ಹಾವು ಕಂಡಾಕ್ಷಣ ಭಯದಲ್ಲಿ ಹಾವಿನ ತೊಂದರೆಗೆ ಒಳಗಾದವರೇ ಹೆಚ್ಚು. ಹೊಲ ಗದ್ದೆ, ಮನೆಗಳ ಸುತ್ತಮುತ್ತ, ಕೆಲವೊಮ್ಮೆ ಮನೆಗೂ ಹಾವುಗಳ ಪ್ರವೇಶವಾಗುತ್ತದೆ. ಹಾವಿನ ಉಸಾಬರಿಗೆ ಹೋಗದಿದ್ದರೆ ಅದು ತಾನೇ ತಾನಾಗಿ ಹೊರಟು ಹೋಗುತ್ತದೆ. ಹೋಗದಿದ್ದರೆ ನನಗೆ ಕರೆ ಮಾಡಿದರೆ ನಾನು ಬಂದು ಹಾವು ಹಿಡಿಯುತ್ತೇನೆ ಎಂದು ಉರಗಪ್ರೇಮಿ ಅವಿನಾಶ ಹೇಳಿದರು.