ಆರೋಗ್ಯಕರ ಬದುಕಿಗೆ ಹಾನಿ ಉಂಟು ಮಾಡುವ ಮೌಢ್ಯ ಸಂಪ್ರದಾಯಗಳಿಗೆ ಇತಿಶ್ರೀ ಹೇಳಲೇಬೇಕಾದ ಕಾಲಘಟದಲ್ಲಿ ನಾವಿದ್ದು, ಅದರಂತೆ ಮುನ್ನಡೆಯಬೇಕು ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ತಿಳಿಸಿದರು
ಕನ್ನಡಪ್ರಭ ವಾರ್ತೆ ತುಮಕೂರುಆರೋಗ್ಯಕರ ಬದುಕಿಗೆ ಹಾನಿ ಉಂಟು ಮಾಡುವ ಮೌಢ್ಯ ಸಂಪ್ರದಾಯಗಳಿಗೆ ಇತಿಶ್ರೀ ಹೇಳಲೇಬೇಕಾದ ಕಾಲಘಟದಲ್ಲಿ ನಾವಿದ್ದು, ಅದರಂತೆ ಮುನ್ನಡೆಯಬೇಕು ಎಂದು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ತಿಳಿಸಿದರು.
ತಾಲೂಕಿನ ಹೆತ್ತಪ್ಪನಹಟ್ಟಿಯಲ್ಲಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಕಲಾ ಕಾಲೇಜು ಸಮಾಜ ಕಾರ್ಯ ವಿಭಾಗ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ವರದಕ್ಷಿಣೆ ವಿರೋಧಿ ವೇದಿಕೆ-ಸಾಂತ್ವನ ಕೇಂದ್ರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮೌಢ್ಯ ನಿವಾರಣೆ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ನಾವೀಗ ವೈಜ್ಞಾನಿಕ ಯುಗದಲ್ಲಿ ಇದ್ದೇವೆ. ಮೊಬೈಲ್ ಬಳಸುತ್ತಿದ್ದೇವೆ. ವಾಹನಗಳಲ್ಲಿ ಸಂಚರಿಸುತ್ತಿದ್ದೇವೆ. ಹೀಗೆ ನಾವು ಬದಲಾದಂತೆ ನಮ್ಮ ಬದುಕೂ ಬದಲಾಗಬೇಕು. ಹಿಂದಿನ ಅವೈಜ್ಞಾನಿಕ ಮೌಢ್ಯ ಆಚರಣೆಗಳನ್ನು ತ್ಯಜಿಸಬೇಕು. ಹಿಂದಿನಿಂದಲೂ ಗೊಲ್ಲರಹಟ್ಟಿಗಳಲ್ಲಿ ಬೆಳೆದು ಬಂದಿರುವ ಮಹಿಳೆಯರ ಬಗೆಗಿನ ಸೂತಕ, ಬಾಣಂತಿಯರನ್ನು ಹಟ್ಟಿಯಿಂದ ಆಚೆ ಇಡುವ ಸಂಪ್ರದಾಯಗಳನ್ನು ಈಗಲಾದರೂ ಬಿಡದಿದ್ದರೆ ನಾವು ಅನಾಗರಿಕರಾಗಿಯೇ ಉಳಿದು ಬಿಡುತ್ತೇವೆ ಎಂದು ಎಚ್ಚರಿಸಿದರು.ಹಿರಿಯ ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಅಕ್ಷರ, ಅರಿವು ಮತ್ತು ಆರೋಗ್ಯ ಇವುಗಳು ಯಾವುದೇ ಸಮಾಜ - ಸಮುದಾಯದ ಮೂಲಭೂತ ಅಗತ್ಯ ಅಂಶಗಳು. ಇದರಿಂದಲೇ ಸ್ವಾಸ್ಥ್ಯ ಕಂಡುಕೊಳ್ಳಬಹುದು. ಇಲ್ಲಿ ಮೂಢನಂಬಿಕೆಗೆ ಒಳಗಾದ ಹದಿಹರೆಯದ ಹೆಣ್ಣು ಮಕ್ಕಳನ್ನು, ಬಾಣಂತಿಯರನ್ನು ಮೈಲಿಗೆಯ ಹೆಸರಿನಲ್ಲಿ ಬಯಲಿನಲ್ಲಿ ಇರಿಸುವುದು ಅಮಾನವೀಯ ನಡವಳಿಕೆ. ಬದಲಾವಣೆಗೆ ಹೊಂದಿಕೊಳ್ಳುತ್ತಿರುವ ಎಲ್ಲರೂ ಇಂತಹ ವಿಚಾರಗಳಲ್ಲಿ ಏಕೆ ಬದಲಾಗುತ್ತಿಲ್ಲ ಎಂದು ಪ್ರಶ್ನಿಸಿದರು. ತುಮಕೂರು ವಿ.ವಿ.ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಹಾಗೂ ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಪಾರ್ವತಮ್ಮ ರಾಜಕುಮಾರ ಮಾತನಾಡಿದರು. ಹುಟ್ಟು-ಮುಟ್ಟು ಕುರಿತ ಮೌಢ್ಯ ವಿರೋಧಿ ಗೀತೆಗಳನ್ನು ಹಾಗೂ ಮಹಿಳೆಯರ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಪಾರ್ವತಮ್ಮ, ಅಕ್ಕಮ್ಮ, ಗಂಗಲಕ್ಷ್ಮಿ, ಹೇಮಾ ಮಲ್ಲಿಕಾರ್ಜುನ್ ತಂಡದವರು ಈ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಇವರ ಹಾಡಿನ ಜೊತೆಯಲ್ಲಿಯೇ ಗ್ರಾಮಸ್ಥರೂ ಸಹ ಕೋಲಾಟ, ಗಣೆಪದ, ಜಾನಪದ ಗೀತೆಗಳನ್ನು ಹಾಡಿ ಮೌಢ್ಯ ವಿರೋಧಿ ಕಾರ್ಯಕ್ರಮಕ್ಕೆ ಸಹಮತ ವ್ಯಕ್ತಪಡಿಸುತ್ತಿರುವುದು ವಿಶೇಷವಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.