ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಕರ್ನಾಟಕ ಸರ್ಕಾರವು ಕಾರ್ಮಿಕರ ಅಭಿವೃದ್ಧಿಗಾಗಿ ಕೈಗೊಳ್ಳುವ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವ ಕಾರ್ಮಿಕರು ನೇರವಾಗಿ ಇಲಾಖೆ ಕಚೇರಿಗೆ ಭೇಟಿ ನೀಡುವ ಮೂಲಕ ಮಧ್ಯವರ್ತಿಗಳ ಹಾವಳಿಯಿಂದ ದೂರ ಸರಿದು ಸಕಾಲದಲ್ಲಿ ಪಡೆದುಕೊಂಡು ಸ್ವಾಭಿಮಾನದ ಉತ್ತಮ ಬದುಕು ರೂಪಿಸಿಕೊಳ್ಳುವಂತೆ ಕಾರ್ಮಿಕ ಇಲಾಖೆಯ ನಿರೀಕ್ಷಕಿ ಯಮುನಾ ತಿಳಿಸಿದರು. ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ನಗರದಲ್ಲಿ ಕಾರ್ಮಿಕರು ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಮತ್ತು ಕಾನೂನು ಅರಿವು ಮತ್ತು ನೆರವು ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಮಿಕ ಸೇತು, ಡಾ. ಬಿ. ಆರ್. ಅಂಬೇಡ್ಕರ್ ಸೇವಾ ಕೇಂದ್ರವನ್ನು ಆರಂಭಿಸಿದ್ದು, ಮೊಬೈಲ್‌ನಲ್ಲಿ ಕಾರ್ಮಿಕರು ನೋಂದಣಿ ಸಲುವಾಗಿ ಅರ್ಜಿ ಸಲ್ಲಿಸುವುದರ ಜೊತೆಗೆ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಸಿಗುವ ಸವಲತ್ತು ಕುರಿತು ಖಾತರಿ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಸರ್ಕಾರಿ ಅಭಿಯೋಜಕಿ ಶಿವಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕಾನೂನಿನ ಮಹತ್ವ ಕುರಿತು ಪ್ರತಿಯೊಬ್ಬರು ತಿಳಿದುಕೊಳ್ಳುವುದರ ಮೂಲಕ ಇತರರಿಗೆ ಅರಿವು ಮೂಡಿಸಬೇಕು. ಕಾನೂನು ಚೌಕಟ್ಟಿನಲ್ಲಿ ಎಲ್ಲರ ನಡೆ ನಿರಂತರವಾಗಿ ಮುಂದುವರಿಯಬೇಕು ಮತ್ತು ಮುಖ್ಯವಾಗಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು. ವಕೀಲರಾದ ರಾಜಶೇಖರ್ ಹಾಗೂ ಮುಳಂಡ ಎಚ್. ಟಿ. ಲಕ್ಷ್ಮಣ, ಇತರರು ಮಾತನಾಡಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಗೋವಿಂದರಾಜು ಸ್ವಾಗತಿಸಿದರು. ಎಚ್.ಡಿ. ಪರಮೇಶ್ ಸೇರಿದಂತೆ ಗ್ರಾಮದ ಕೆಲವು ಪ್ರಮುಖರು ಹಾಗೂ ಹಿರಿಯರು ಹಾಜರಿದ್ದರು.