ಚಿರತೆಗಳ ಹಾವಳಿ ತಪ್ಪಿಸಿ, ಸಾಕುಪ್ರಾಣಿಗಳನ್ನು ಸಂರಕ್ಷಿಸಿ: ಅರಣ್ಯಾಧಿಕಾರಿಗಳಿಗೆ ರೈತರ ಮನವಿ

KannadaprabhaNewsNetwork |  
Published : Feb 19, 2025, 12:48 AM IST
18ಕೆಎಂಎನ್ ಡಿ11 | Kannada Prabha

ಸಾರಾಂಶ

ಹಸು ಕರುಗಳ ರಕ್ಷಣೆಗಾಗಿ ಕೊಟ್ಟಿಗೆ ಸುತ್ತ ತಂತಿ ಬೇಲಿ ನಿರ್ಮಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಅಂತರಳ್ಳಿ ಬೆಟ್ಟದ ಗುಡ್ಡ ಕಾಡಿನಲ್ಲಿ ಅಡಗಿರುವ ಚಿರತೆಗಳನ್ನು ಬಲೆ ಬೀಸಿ ಹಿಡಿದು ಅಭಿಯಾರಣ್ಯಕ್ಕೆ ಬಿಡಬೇಕು ಎಂದು ಕೋರಿದರು.

ಕನ್ನಡಪ್ರಭ ವಾರ್ತೆ ಹಲಗೂರು

ಹೋಬಳಿ ವ್ಯಾಪ್ತಿ ಚಿರತೆಗಳು ಹೆಚ್ಚಾಗಿ ಹಸು, ಕರು, ಮೇಕೆ, ಕುರಿ ಹಾಗೂ ನಾಯಿಗಳ ಮೇಲೆ ದಾಳಿ ಮಾಡುತ್ತಿವೆ. ರೈತರ ಸಾಕುಪ್ರಾಣಿಗಳನ್ನು ಸಂರಕ್ಷಿಸುವಂತೆ ನಿಟ್ಟೂರು- ಕೋಡಿಹಳ್ಳಿ ಗ್ರಾಮದ ರೈತ ಪ್ರಕಾಶ್ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು.

ಮನೆ ಪಕ್ಕದ ಕೊಟ್ಟಿಗೆಯಲ್ಲಿ ಹಸುವಿನ ಹೆಂಗರು ಹಾಗೂ ಮನೆ ಮುಂದೆ ಕಾವಲಿಗಾಗಿ ಇದ್ದ ಸಾಕು ನಾಯಿಯನ್ನು ಹಿಡಿದು ರಕ್ತವನ್ನು ಕುಡಿದು ಸಾಯಿಸಿವೆ. ಅಂತರಳ್ಳಿ ಬೆಟ್ಟ ಹಾಗೂ ಹಂಡನಹಳ್ಳಿ ಗುಡ್ಡೆಯಲ್ಲಿ ಬೀಡು ಬಿಟ್ಟಿರುವ ಚಿರತೆಗಳು ರಾತ್ರಿ ವೇಳೆ ಗ್ರಾಮಗಳಿಗೆ ಬಂದು ಸಾಕು ಪ್ರಾಣಿಗಳನ್ನು ಹಿಡಿದು ತಿಂದು ಹಾಕುತ್ತಿವೆ ಎಂದು ಹೇಳಿದರು.

ರೈತರು ನೆಮ್ಮದಿಯಿಂದ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವುದು ತುಂಬಾ ಕಷ್ಟವಾಗಿದೆ. ಮದ್ದೂರು- ಹಲಗೂರು ಮುಖ್ಯರಸ್ತೆಯಲ್ಲಿ ರಾತ್ರಿ ವೇಳೆ ಚಿರತೆಗಳು ಓಡಾಡುತ್ತಿವೆ. ನಾನು ಸುಮಾರು 25 ಹಸುಗಳನ್ನು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಚಿರತೆ ಹಾವಳಿಯಿಂದ ನಾವು ಭಯಭೀತರಾಗಿದ್ದೇವೆ. ರಾತ್ರಿ ವೇಳೆ ಮನೆಯಿಂದ ಹೊರಗೆ ಬರುವುದಕ್ಕೂ ಭಯಪಡುವ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.

ಜಮೀನಿನಲ್ಲಿ ಫಸಲಿಗೆ ನೀರು ಹಾಯಿಸಲು ರಾತ್ರಿ ವೇಳೆ ಮಾತ್ರ ವಿದ್ಯುತ್ ಪವರ್ ನೀಡುತ್ತಾರೆ. ಚಿರತೆಗಳ ಭಯದಿಂದ ರಾತ್ರಿ ವೇಳೆ ಜಮೀನು ಬಳಿ ಹೋಗಲು ಭಯವಾಗುತ್ತಿದೆ. ಹಗಲಿನಲ್ಲಿ ವಿದ್ಯುತ್ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ರೈತರ ಪಂಪ್ ಸೆಟ್ ಗಳಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡುವಂತೆ ವಿದ್ಯುತ್ ಇಲಾಖೆಯವರಿಗೂ ಸಹ ಮನವಿ ಮಾಡಲಾಗಿದೆ ಎಂದರು.

ಹಸು ಕರುಗಳ ರಕ್ಷಣೆಗಾಗಿ ಕೊಟ್ಟಿಗೆ ಸುತ್ತ ತಂತಿ ಬೇಲಿ ನಿರ್ಮಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಅಂತರಳ್ಳಿ ಬೆಟ್ಟದ ಗುಡ್ಡ ಕಾಡಿನಲ್ಲಿ ಅಡಗಿರುವ ಚಿರತೆಗಳನ್ನು ಬಲೆ ಬೀಸಿ ಹಿಡಿದು ಅಭಿಯಾರಣ್ಯಕ್ಕೆ ಬಿಡಬೇಕು ಎಂದು ಕೋರಿದರು.

ಕೆ.ವಿ.ವಿಮಲಪ್ರಕಾಶ್ ಮಾತನಾಡಿ, 3000 ರು. ನೀಡಿ ಚಿಕ್ಕ ನಾಯಿ ಮರಿಯನ್ನು ತಂದು ಸಾಕಿದ್ದೆವು. ಅದು ನಮ್ಮ ಮನೆ ಸದಸ್ಯನಂತೆ ಇತ್ತು. ರಾತ್ರಿ ಇದ್ದ ನಾಯಿ ಬೆಳಗ್ಗೆ ಕಾಣದೆ ಇದ್ದಿದ್ದರಿಂದ ಅನುಮಾನಗೊಂಡು ಮನೆ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಚಿರತೆ ನಾಯಿಮರಿಯನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ನೋಡಿ ನಮಗೆ ಭಯವಾಗಿದೆ ಎಂದರು.

ಈ ವೇಳೆ ಗ್ರಾಮದ ಮುಖಂಡರಾದ ಕೆ.ಎನ್.ವೆಂಕಟೇಗೌಡ, ಕೃಷ್ಣೇಗೌಡ, ರುಕ್ಮಂಗದಚಾರಿ, ನಂಜುಂಡಸ್ವಾಮಿ ಇದ್ದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ