ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರೇಷ್ಮೆ ಬೆಳೆಗಾರರನ್ನು ಮಧ್ಯವರ್ತಿಗಳು ಶೋಷಿಸುತ್ತಿದ್ದು, ರೈತರಿಗೆ ಸರಿಯಾದ ದರ ದೊರೆಯುತ್ತಿಲ್ಲ. ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ನಿವಾರಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಮನವಿ ಮಾಡಿದರು. ಮೈಸೂರಿನಲ್ಲಿ ನಡೆದ ಕೇಂದ್ರ ರೇಷ್ಮೆ ಮಂಡಳಿಯ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡು , ರೇಷ್ಮೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಗಮನಕ್ಕೆ ತಂದರು. ಮಧ್ಯವರ್ತಿಗಳ ಹಾವಳಿ ತಪ್ಪಿಸಿಮಧ್ಯವರ್ತಿಗಳಿಂದಾಗಿ ರೇಷ್ಮೆ ಬೆಳೆಗಾರರಿಗೆ ಸರಿಯಾದ ಬೆಲೆ ದೊರೆಯುತ್ತಿಲ್ಲ. ಮಧ್ಯವರ್ತಿಗಳ ಹಸ್ತಕ್ಷೇಪವನ್ನು ತಪ್ಪಿಸುವ ಮೂಲಕ ರೈತರ ಸಮಸ್ಯೆಯನ್ನು ನಿವಾರಿಸಬೇಕು. ಮಧ್ಯವರ್ತಿಗಳ ಶೋಷಣೆಯನ್ನು ತಪ್ಪಿಸಿ, ವರ್ತಕರು ಹಾಗೂ ರೈತರು ಬದುಕುವಂತೆ ಮಾಡಬೇಕು. ಕೋವಿಡ್ ನಂತರದ ಕಾಲವನ್ನು ಅಮೃತ ಕಾಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದೇ ಕಾಲದಲ್ಲಿ ರೇಷ್ಮೆ ಮಂಡಳಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರು.
ಸುಮಾರು 26 ರಾಜ್ಯಗಳಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಯಾಗುತ್ತಿದೆ. ನಾನು ಕೂಡ ಈ ಭಾಗದವನೇ ಆಗಿರುವುದರಿಂದ ರೇಷ್ಮೆ ಬೆಳೆಗಾರರ ಕಷ್ಟಗಳು ತಿಳಿದಿದೆ. ನನ್ನ ತಾತ ಕೂಡ ರೇಷ್ಮೆ ಬೆಳೆಯುತ್ತಿದ್ದರು. ರೇಷ್ಮೆ ಕೃಷಿ ಹಿಂದಿಗಿಂತಲೂ ಹೆಚ್ಚಾಗಿದೆ. ಹಾಗೆಯೇ ನವೀನ ಕ್ರಮಗಳಿಂದಾಗಿ ಹೆಚ್ಚು ಇಳುವರಿ ದೊರೆಯುತ್ತಿದೆ ಎಂದರು.ಹೈಟೆಕ್ ಮಾರುಕಟ್ಟೆ ನಿರ್ಮಾಣರಾಜ್ಯದಲ್ಲಿ ರೇಷ್ಮೆ ಉದ್ಯಮ ಆರಂಭವಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ. ಅವರು ವಿದ್ಯುತ್ ಮಳಿಗೆಗಳನ್ನು ತಂದು ಇಲ್ಲಿ ಉದ್ದಿಮೆಯನ್ನು ಬೆಳೆಸಿದರು. ಅವರನ್ನು ಈ ದಿನ ಸ್ಮರಿಸಬೇಕಿದೆ. ನನ್ನನ್ನು ಕೇಂದ್ರ ರೇಷ್ಮೆ ಮಂಡಳಿಗೆ ನಾಮನಿರ್ದೇಶನ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಡ್ಲಘಟ್ಟ ಮತ್ತು ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಈ ಯೋಜನೆಯ ಮೂಲಕ ರೈತರಿಗೆ ಉತ್ತಮ ಬೆಲೆ ಸಿಗಲಿದೆ. ನಾನು ಕೇಂದ್ರದಲ್ಲಿ ರೇಷ್ಮೆ ಬೆಳೆಗಾರರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಓಲೈಕೆ ರಾಜಕಾರಣ ಕಾಂಗ್ರೆಸ್‌ನ ರಕ್ತದಲ್ಲೇ ಇರುವುದರಿಂದ ರಾಜ್ಯದಲ್ಲಿ ಕೋಮುಗಲಭೆ ನಡೆಯುತ್ತಿವೆ. ಗಣೇಶನ ಮೂರ್ತಿಯನ್ನು ಕೂಡ ಬಂಧಿಸಿ ಕರೆದೊಯ್ದಿದ್ದು ಇಂತಹ ಘಟನೆ ಎಲ್ಲೂ ನಡೆದಿಲ್ಲ. ನನ್ನ ಕ್ಷೇತ್ರದಲ್ಲೂ ಗಣೇಶ ಮೆರವಣಿಗೆಗೆ ಕಾಂಗ್ರೆಸ್ ಸರ್ಕಾರ ತಡೆ ಒಡ್ಡಿದೆ. ನಾವೇನೋ ಬೇರೆ ದೇಶದಲ್ಲಿ ಗಣೇಶ ಉತ್ಸವ ಮಾಡುತ್ತಿದ್ದೇವೆ ಎಂಬ ಭಾವನೆ ಬಂದಿದೆ. ಅನೇಕ ಯುವಕರು ಬಂದು ಅವರ ನೋವು ತೋಡಿಕೊಂಡಿದ್ದಾರೆ. ಅಧಿಕಾರಿಗಳು ಗಣೇಶೋತ್ಸವಕ್ಕೆ ಏಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಸರ್ಕಾರ ವಿಮರ್ಶೆ ಮಾಡಿಕೊಳ್ಳಲಿ ಎಂದರು. ದ್ವೇಷದ ರಾಜಕಾರಣಕೋವಿಡ್ ಕುರಿತ ಮಧ್ಯಂತರ ವರದಿಯನ್ನು ನೀಡಲಾಗಿದೆ. ತಪ್ಪಿತಸ್ಥರು ಇದ್ದರೆ ಅವರಿಗೆ ಶಿಕ್ಷೆ ನೀಡಲಿ. ನಮ್ಮ ಸರ್ಕಾರ ಇದ್ದಾಗ ದ್ವೇಷದ ರಾಜಕಾರಣ ಅಥವಾ ತನಿಖಾ ಅಸ್ತ್ರ ಪ್ರಯೋಗ ಮಾಡಿಲ್ಲ. ಬಿಜೆಪಿ ಬಂದ ನಂತರ ಜಾರಿ ನಿರ್ದೇಶನಾಲಯ, ಸಿಬಿಐ ಬಂದಿಲ್ಲ. ಅದು ಹಿಂದೆಯೂ ಇತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಈ ಎಲ್ಲ ಸಂಸ್ಥೆಗಳು ಈಗ ಸ್ವತಂತ್ರವಾಗಿಲ್ಲ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ನಾಯಕರು ಹುಟ್ಟುಹಾಕಿದ್ದಾರೆ. ಇಡೀ ಸರ್ಕಾರ ಕಾಂಗ್ರೆಸ್ ಕೈಯಲ್ಲಿದೆ. ಕುರ್ಚಿ ಹೋದ ನಂತರ ಮುಂದೇನು ಮಾಡುತ್ತಾರೆ, ಅವರೇ ದ್ವೇಷದ ರಾಜಕಾರಣವನ್ನು ಎಲ್ಲರಿಗೂ ಕಲಿಸುತ್ತಿದ್ದಾರೆ ಎಂದರು.